Site icon Vistara News

Chikkamagaluru Tragedy : ಬಾಯ್ಲರ್‌ ಶಾಖಕ್ಕೆ ಸುಟ್ಟು ಕರಕಲಾದ ಯುವಕ; ಸಿಲ್ವರ್ ಮರವೇರಿದಾಗ ಕರೆಂಟ್‌ ಶಾಕ್‌ಗೆ ಕಾರ್ಮಿಕ ಸಾವು

Chikkamagaluru Tragedy

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ದುರಂತ ಸಂಭವಿಸಿದ್ದು ಕಾರ್ಮಿಕರಿಬ್ಬರು ದಾರುಣವಾಗಿ (Chikkamagaluru Tragedy) ಮೃತಪಟ್ಟಿದ್ದಾರೆ. ಕಾರ್ಮಿಕನೊಬ್ಬ ಬಾಯ್ಲರ್ ರಿಪೇರಿ ಮಾಡುವಾಗ ಏಕಾಏಕಿ ಶಾಖವು ಹೊರಹೊಮ್ಮಿದೆ. ಪರಿಣಾಮ ರಿಪೇರಿ ಮಾಡುತ್ತಿದ್ದ ಕಾರ್ಮಿಕನ ದೇಹ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ನಗರದ ಹೊರವಲಯದ ಕುರುಬರಹಳ್ಳಿ ಬಳಿ ಇರುವ ವಿದ್ಯಾ ಕಾಫಿ ಕ್ಯುರಿಂಗ್‌ನಲ್ಲಿ ಘಟನೆ ನಡೆದಿದೆ.

ಉದಯ್ (27) ಮೃತ ದುರ್ದೈವಿ. ಮಡಿಕೇರಿಯ ಕುಶಾಲನಗರ ಮೂಲದ ಉದಯ್ ಬಾಯ್ಲರ್ ಸರಿಪಡಿಸುವಾಗ ಏಕಾಏಕಿ 340 ಡಿ.ಸೆ ಶಾಖ ಹೊರ ಬಂದಿದೆ. ಶಾಖದ ತೀವ್ರತೆಗೆ ಉದಯ್‌ ದೇಹ ಸುಟ್ಟು ಕರಕಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಸದ್ಯ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹವನ್ನು ರವಾನೆ ಮಾಡಲಾಗಿದೆ.

ಶವಗಾರದ ಬಳಿ ಮಗನನ್ನು ಕಳೆದುಕೊಂಡ ತಾಯಿಯ ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡು ಬಂತು. ವಿಷಯ ತಿಳಿಯುತ್ತಿದ್ದಂತೆ ಶವಗಾರದ ಬಳಿ ಕಾಫಿ ಕ್ಯುರಿಂಗ್ ಕಾರ್ಮಿಕರು ಜಮಾಯಿಸಿದ್ದರು. ಸದ್ಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ವಿದ್ಯುತ್ ಶಾಕ್‌ನಿಂದ ಮರದಲ್ಲೇ ಕಾರ್ಮಿಕ ಸಾವು

ಸಿಲ್ವರ್ ಮರಕ್ಕೆ ಮರಗಸಿ ಮಾಡುವಾಗ ಕಾರ್ಮಿಕರೊಬ್ಬರು ವಿದ್ಯುತ್‌ ಶಾಕ್‌ನಿಂದ ಮೃತಪಟ್ಟಿದ್ದಾರೆ. ಚಂದ್ರಪ್ಪ (45) ಮೃತ ದುರ್ದೈವಿ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಸಿಲ್ವರ್ ಮರದ ಅಡ್ಡ ಕೊಂಬೆಗಳನ್ನು ಕಡಿಯುವಾಗ ಘಟನೆ ನಡೆದಿದೆ.

ಮರ ನೇರವಾಗಿ ಬೆಳೆಯಲೆಂದು ಸಿಲ್ವರ್ ಮರಕ್ಕೆ ಮರಗಸಿ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಚಂದ್ರಪ್ಪ ಮರವೇರಿ ಮರಗಸಿ ಮಾಡುತ್ತಿದ್ದರು. ಈ ವೇಳೆ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಸ್ಪರ್ಶವಾಗಿದೆ. ಈ ವೇಳೆ ಮರದಲ್ಲೆ ವಿದ್ಯುತ್‌ ಪ್ರವಹಿಸಿ ಚಂದ್ರಪ್ಪ ಮೃತಪಟ್ಟಿದ್ದಾರೆ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version