Site icon Vistara News

ಸೋದರ ಮಾವ ಎದುರು ಬಂದರೂ ಯುದ್ಧ ಮಾಡುತ್ತೇವೆ: ಪ್ರಮೋದ್‌ ಮುತಾಲಿಕರನ್ನು ಕಂಸನಿಗೆ ಹೋಲಿಸಿದ ಸಿ.ಟಿ. ರವಿ

CT Ravi BJP

ಬೆಂಗಳೂರು: ಬಿಜೆಪಿಯು ನಿಜವಾದ ಹಿಂದುತ್ವವನ್ನು ಪಾಲನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ೨೫ ಪ್ರಖರ ಹಿಂದುತ್ವವಾದಿಗಳನ್ನು ಕಣಕ್ಕಿಳಿಸಲು ಮುಂದಾಗಿರುವ ಶ್ರೀರಾಮಸೇನೆಯ ಪ್ರಮೋದ್‌ ಮುತಾಲಿಕ್‌ ಪ್ರಯತ್ನಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ, ಶ್ರೀರಾಮಸೇನೆ ಸ್ಪರ್ಧೆಯ ಕುರಿತು ಮಾತನಾಡಿದ ಸಿ.ಟಿ. ರವಿ, ಆಚಾರ ಬೇರೆ, ವಿಚಾರ ಬೇರೆ. ಹಲವು ವರ್ಷಗಳಿಂದ ಪಟ್ಟು ಹಾಕುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ. ನಮ್ಮ ಸೀಟುಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ.

ನಮ್ಮ ವೋಟನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳುತ್ತೇವೆ. ಅವರು ಸ್ಪಷ್ಟವಾಗಿ ಹೇಳದೇ ಈಗಲೇ ನಾನು ಏನೂ ಹೇಳುವುದಿಲ್ಲ. ಅವರಿಂದ ಏನೋ ಆಗುತ್ತದೆ ಅಂತ ನನಗೆ ಎನ್ನಿಸುತ್ತಿಲ್ಲ. ಅದೇ ರೀತಿ ಅವರನ್ನು ನೆಗ್ಲಕ್ಟ್ ಸಹ ಮಾಡುತ್ತಿಲ್ಲ. ಆದರೆ ನಮ್ಮ ಚುನಾವಣಾ ಪಟ್ಟು ನಮಗೆ ಇದೆ.

ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವ ಸ್ವಾತಂತ್ರ್ಯ ವ್ಯಕ್ತಿಗೆ ಇದೆ. ದಂಡಿನಲ್ಲಿ ಸೋದರಮಾವ ಅಂತ ನೋಡಲು ಸಾಧ್ಯವಿಲ್ಲ. ಕಾಲ ಬಂದಾಗ ಸೋದರಮಾವನ ವಿರುದ್ಧವೂ ಹೋರಾಡಬೇಕಿದೆ. ಚುನಾವಣಾ ಅಖಾಡದಲ್ಲಿ ಸೋದರ ಮಾವನ ಸಂಬಂಧವನ್ನು ಸಹ ನಾವು ಲೆಕ್ಕಿಸುವುದಿಲ್ಲ ಎಂದು ಪ್ರಮೋದ್‌ ಮುತಾಲಿಕ್‌ ಅವರ ಪ್ರಯತ್ನಕ್ಕೆ ತಿರುಗೇಟು ನೀಡಿದರು.

ಒಳಮೀಸಲಾತಿ ನೀಡುವ ಕುರಿತು ಪ್ರತಿಕ್ರಿಯಿಸಿ, ಒಡೆದು ಆಳುವುದು ಕಾಂಗ್ರೆಸ್ ನೀತಿ. ಚುನಾವಣೆ ಬಂದಾಗ ಒಡೆದು ಆಳುವುದಕ್ಕೆ ಮುಂದಾಗುತ್ತಾರೆ. ಕಳೆದ ಬಾರಿ ವೀರಶೈವ ಲಿಂಗಾಯತಕ್ಕೆ ಕೈ ಹಾಕಿದ್ದರು. ಇದೇ ಭಾರತ್ ಜೋಡೋ ಮಾಡೆಲ್ ಅನ್ನಿಸುತ್ತದೆ. ನಾವು ಮೀಸಲಾತಿ ಪರ ಇದ್ದೇವೆ. ಹಿಂದೆ ಕಾಂಗ್ರೆಸ್ ಸರ್ಕಾರ ಇತ್ತು, ಆಗ ಯಾಕೆ ಮೀಸಲಾತಿ ಜಾರಿಗೆ ತರಲಿಲ್ಲ? ಏನು ಉತ್ತರ ಕೊಡ್ತಾರೆ? ಡಿಕೆಶಿ, ಸಿದ್ದರಾಮಯ್ಯ ಏನೂ ಉತ್ತರ ಕೊಡಲ್ಲ. ವಿವೇಚನಾ ರೀತಿಯಾಗಿ ಕೆಲಸ ಮಾಡಬೇಕಿದೆ. ನಮ್ಮ ಸರ್ಕಾರ ಅದನ್ನು ಮಾಡಲಿದೆ. ನಿಮ್ಮ ಅಧಿಕಾರ ಇದ್ದಾಗ ನೀವು ಯಾಕೆ ಮಾಡಲಿಲ್ಲ ಅನ್ನೋದಕ್ಕೆ ಉತ್ತರ ಕೊಡಲಿ. ಒಳ ಮೀಸಲಾತಿ ನ್ಯಾಯಯುತವಾಗಿ ಮಾಡಬೇಕಿದೆ. ಅದನ್ನು ವಿವೇಚನೆಯಿಂದ ಮಾಡಬೇಕಿದೆ. ಅದನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.

ಒಕ್ಕಲಿಗ ಮೀಸಲಾತಿ ಕುರಿತು ಪ್ರತಿಕ್ರಿಯಿಸಿ, ಕಾಲದಿಂದಲೂ ನ್ಯಾಯಯುತವಾಗಿ ಕೆಲಸ ಮಾಡುತ್ತಿರುವುದು ಬಿಜೆಪಿ. ಬಿಜೆಪಿ ಆ ಕೆಲಸವನ್ನ ಮಾಡಲಿದೆ. ಸುಪ್ರೀಂ ಕೋರ್ಟ್ ನಿಯಮ ಪಾಲನೆ ಕೂಡ ಮಾಡಬೇಕಿದೆ. ನ್ಯಾಯಯುತವಾಗಿ ಮಾಡಬೇಕಿದ್ದು, ನಾವು ಮಾಡುತ್ತೇವೆ. ನೀನು ಕೊಟ್ಟಂಗೆ ಮಾಡು, ನಾನು ಅತ್ತಂಗೆ ಮಾಡ್ತೀನಿ ಎನ್ನುವ ರೀತಿ ನಾವು ಮಾಡುವುದಿಲ್ಲ ಎಂದರು.

ಇದನ್ನೂ ಓದಿ | CT Ravi | ನನ್ನನ್ನು ಮುಲ್ಲಾ ಅಂದ್ರೆ ಮುಲ್ಲಾಗಳೂ ಒಪ್ಪಲ್ಲ, ನಾನು ಏನಿದ್ದರೂ ಹಿಂದು ಹುಲಿ ಅಂದರು ಸಿ.ಟಿ. ರವಿ

Exit mobile version