Site icon Vistara News

Datta Jayanti: ದತ್ತಮಾಲೆ ಧರಿಸಿದ ಚಿಕ್ಕಮಗಳೂರು ಕಾಂಗ್ರೆಸ್‌ ಶಾಸಕ ಎಚ್.ಡಿ ತಮ್ಮಯ್ಯ; ಹಿಂದು ಸಂಘಟನೆಗಳಿಗೆ ಸಾಥ್

HD thammayya wearing datta Mala

ಚಿಕ್ಕಮಗಳೂರು: ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ (Chikkamagaluru MLA) ಎಚ್‌.ಡಿ ತಮ್ಮಯ್ಯ (HD Thammaiah) ಅವರು ದತ್ತ ಜಯಂತಿಗೆ (Datta Jayanti) ಸಂಬಂಧಿಸಿದ ದತ್ತಮಾಲೆ (Datta Mala) ಧರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೂಲತಃ ಸಂಘ ಪರಿವಾರಕ್ಕೆ ಸೇರಿದವರಾದ ಎಚ್.ಡಿ. ತಮ್ಮಯ್ಯ ಅವರು ಈ ಬಾರಿ ಬಿಜೆಪಿ ನಾಯಕ ಸಿ.ಟಿ. ರವಿ (Former MLA CT Ravi) ಅವರ ಮೇಲಿನ ಮುನಿಸಿನಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿ ಟಿಕೆಟ್‌ ಪಡೆದು ಶಾಸಕರೇ ಆಗಿಬಿಟ್ಟಿದ್ದಾರೆ. ಇದೀಗ ದತ್ತಮಾಲೆ ಧಾರಣೆ ಸಂದರ್ಭದಲ್ಲಿ ಅವರು ಏನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಅವರು ಗೌಪ್ಯವಾಗಿಯೇ ದತ್ತಮಾಲೆ ಧರಿಸಿರುವುದು ಕಂಡುಬಂದಿದೆ.

ಡಿಸೆಂಬರ್‌ 17ರಿಂದ ಡಿಸೆಂಬರ್‌ 26ರವರೆಗೆ ವಿವಾದಿತ ಬಾಬಾ ಬುಡನ್‌ ಗಿರಿಯ (Bababudan giri hills) ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ (Dattatreya bababudan swami dargah) ದತ್ತ ಜಯಂತಿ (Datta Jayanti) ನಡೆಯಲಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಅತ್ಯಂತ ಕಟ್ಟೆಚ್ಚರದಿಂದ ದತ್ತ ಜಯಂತಿ ಆಚರಣೆಗೆ ಪ್ಲ್ಯಾನ್‌ ಮಾಡಿಕೊಂಡಿದ್ದು, ಇದರ ಭಾಗವಾಗಿ ಮುಂಜಾಗ್ರತಾ ಕ್ರಮವಾಗಿ ಅರ್ಚಕರು, ಮುಜಾವರ್ ಸೇರಿದಂತೆ ಐವರಿಗೆ ಪೊಲೀಸ್‌ ಇಲಾಖೆ ಈಗಿನಿಂದಲೇ ಗನ್ ಮ್ಯಾನ್ (Gun Mans appointed for five people) ನೇಮಕ ಮಾಡಿದೆ.

ಈಗಾಗಲೇ ಡಿಸೆಂಬರ್‌ 17ರಂದು ಚಿಕ್ಕಮಗಳೂರಿನ ಮಾಜಿ ಶಾಸಕ, ಬಿಜೆಪಿ ನಾಯಕ ಸಿ.ಟಿ. ರವಿ ಅವರು ಬೆಂಬಲಿಗರ ಜತೆ ದತ್ತ ಮಾಲೆ ಧಾರಣೆ ಮಾಡಿದ್ದಾರೆ. ಜಿಲ್ಲೆಯಾದ್ಯಂತ 5000ಕ್ಕೂ ಹೆಚ್ಚು ಮಂದಿ ಮಾಲಾ ಧಾರಣೆ ಮಾಡಿದ್ದಾರೆ. ಇದರ ನಡುವೆ ಶಾಸಕ ಎಚ್.ಡಿ ತಮ್ಮಯ್ಯ ಏನು ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇತ್ತು.

ಈ ಕುತೂಹಲಕ್ಕೆ ಕಾರಣವೂ ಇತ್ತು. ಎಚ್.ಡಿ. ತಮ್ಮಯ್ಯ ಅವರು ದತ್ತ ಪೀಠ ವಿವಾದ ಆರಂಭವಾದ ಕಳೆದ 18 ವರ್ಷಗಳಿಂದಲೂ ದತ್ತ ಮಾಲಾಧಾರಣೆ ಮಾಡುತ್ತಾರೆ. ನಿಜವೆಂದರೆ, ಕಳೆದ ಕೆಲವು ವರ್ಷಗಳಿಂದ ಅದರ ಮುಂದಾಳುತ್ವವನ್ನು ವಹಿಸಿದವರೂ ಅವರೇ. ದತ್ತ ಪೀಠ ಹೋರಾಟದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದ ಅವರು ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಪಾಳಯಕ್ಕೆ ಬಂದಿದ್ದಾರೆ. ಅವರ ನಿಜವಾದ ಸಿಟ್ಟು ಇರುವುದು ಸಿ.ಟಿ. ರವಿ ಮೇಲೆ. ಹಾಗಿರುವಾಗ ತಮ್ಮ ಮೂಲ ಹಿಂದೂ ಸಿದ್ಧಾಂತವನ್ನು ಅವರು ಹೇಗೆ ಮುಂದುವರಿಸುತ್ತಾರೆ ಎಂಬ ಕುತೂಹಲ ಇತ್ತು.

ಈ ಬಗ್ಗೆ ಮಾಧ್ಯಮದವರು ಹಲವು ಬಾರಿ ಕೇಳಿದ್ದರು. ಆಗ, ʻʻನಾನು ಈ ಬಾರಿ ದತ್ತಮಾಲೆ ಹಾಕುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ದೇವರು ಯಾವ ರೀತಿ ಮನಸ್ಸು ಕೊಡುತ್ತಾನೋ ನೋಡೋಣʼʼ ಎಂದಿದ್ದರು ಶಾಸಕ ಎಚ್.ಡಿ. ತಮ್ಮಯ್ಯ.

ಬಿಜೆಪಿ ನಾಯಕ ಸಿ.ಟಿ ರವಿ ಅವರು ದತ್ತಮಾಲಾ ಧಾರಣೆ ಮಾಡಿರುವುದು.

ಚಪ್ಪಲಿ ಹಾಕದೆ ಓಡಾಡುತ್ತಿರುವ ಶಾಸಕರು

ಈ ನಡುವೆ ಮಂಗಳವಾರ ಚಿಕ್ಕಮಗಳೂರಿನಲ್ಲಿ ನಡೆದ ಸಭೆಯಲ್ಲಿ ಶಾಸಕರು ಚಪ್ಪಲಿ ಹಾಕದೆ ಓಡಾಡುತ್ತಿರುವುದು ಕಂಡುಬಂತು. ಜತೆಗೆ ಷರಟಿನೊಳಗಿನಿಂದ ಮಾಲೆಯೂ ಇಣುಕು ಹಾಕಿತು. ಹಾಗಂತ ಅವರೇನೂ ಇತರ ಮಾಲಾಧಾರಿಗಳಂತೆ ಕೇಸರಿ ಬಟ್ಟೆ ಧರಿಸಿಲ್ಲ, ಕೇಸರಿ ಶಾಲು ಹಾಕಿಲ್ಲ. ಸಾಮಾನ್ಯವಾಗಿ ಧರಿಸುವ ಬಿಳಿ ಬಟ್ಟೆಯನ್ನೇ ಧರಿಸಿದ್ದಾರೆ. ಹೀಗಾಗಿ ಅವರು ಸಾಮಾನ್ಯ ದಿರಸಿನಲ್ಲೇ ಮಾಲೆ ಧರಿಸಿ ವೃತಾಚರಣೆಯಲ್ಲಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ದತ್ತಮಾಲೆ ಹಾಕಿದರೆ ಕಾಲಿಗೆ ಚಪ್ಪಲಿ ಹಾಕುವಂತಿಲ್ಲ, ಬರೀಗಾಲಲ್ಲಿ ಓಡಾಡಬೇಕು ಎಂಬ ನಿಯಮವಿದೆ. ಮಂಗಳವಾರ ಗೃಹ ಸಚಿವ ಜಿ. ಪರಮೇಶ್ವರ್‌ ಅವರು ಬಂದಿದ್ದಾಗ ಅವರ ಜತೆ ಚಪ್ಪಲಿ ಇಲ್ಲದೆಯೇ ಓಡಾಡಿದ್ದಾರೆ. ಈ ನಡುವೆ, ಇದರ ಬಗ್ಗೆ ಕೇಳಿದರೆ ಏನನ್ನೂ ಹೇಳದೆ ತಪ್ಪಿಸಿಕೊಂಡರು ಎಚ್‌.ಡಿ. ತಮ್ಮಯ್ಯ.

ಇದನ್ನೂ ಓದಿ: Datta Jayanti : ದತ್ತಪೀಠದ ಅರ್ಚಕರು, ಮುಜಾವರ್‌ ಸಹಿತ ಐವರಿಗೆ ಗನ್‌ ಮ್ಯಾನ್‌ ಸೆಕ್ಯುರಿಟಿ

ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರು ತಾನೂ ದತ್ತಮಾಲೆ ಹಾಕುವುದಾಗಿ ಹೇಳಿದಾಗ ಲೇವಡಿ ಮಾಡಿದ್ದ ಕಾಂಗ್ರೆಸ್‌ ನಾಯಕರು ಈಗ ತಮ್ಮಯ್ಯ ಅವರ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲವಿದೆ. ದತ್ತಮಾಲಾ ಧಾರಣೆ ಅವರವರ ವೈಯಕ್ತಿಕ ನಂಬಿಕೆ ಎಂದು ಹೇಳಿಬಿಡಲೂಬಹುದು.

Exit mobile version