ಚಿಕ್ಕಮಗಳೂರು: ದತ್ತ ಜಯಂತಿ (Datta Jayanti) ಹಿನ್ನೆಲೆಯಲ್ಲಿ ಮಸೀದಿ ಸಮೀಪ ಕೇಸರಿ ಧ್ವಜ ಕಟ್ಟುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗಲಾಟೆ ಸೃಷ್ಟಿಯಾದ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru news) ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದತ್ತಜಯಂತಿ ಹಿನ್ನೆಲೆ ಗ್ರಾಮದಲ್ಲಿ ಅಲಂಕಾರ ಮಾಡುತ್ತಿದ್ದ ದತ್ತ ಮಾಲಾಧಾರಿಗಳು ಧ್ವಜ ಕಟ್ಟುತ್ತಿದ್ದಾಗ ಅನ್ಯ ಕೋಮಿನ ಯುವಕರು ಬಂದು ಅಡ್ಡಿಪಡಿಸಿದ್ದಾರೆ. ದತ್ತ ಮಾಲಾಧಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಾಂದಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲಂಕಾರ ಮಾಡುತ್ತಿದ್ದಾಗ, ಮಸೀದಿ ಸಮೀಪ ಧ್ವಜ ಕಟ್ಟದಂತೆ ಅನ್ಯಕೋಮಿನ ಯುವಕರು ಆಕ್ಷೇಪಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ರಾತ್ರಿ ವೇಳೆ ಅಲಂಕಾರ ಮಾಡಬಾರದು ಹಾಗೂ ಅಲಂಕಾರಕ್ಕೆ ಅನುಮತಿ ಪಡೆಯಬೇಕು ಎಂದು ಅಡ್ಡಿಪಡಿಸಿದವರು ತಕರಾರು ತೆಗೆದಿದ್ದಾರೆ. ಈ ಸಂದರ್ಭದಲ್ಲಿ ದತ್ತಮಾಲಾಧಾರಿಗಳು ಹಾಗೂ ಅನ್ಯಕೋಮಿನ ಯುವಕರ ನಡುವೆ ಗಲಾಟೆ ನಡೆದಿದೆ.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ದತ್ತಮಾಲೆ ಧಾರಣೆ ಮಾಡಿದ್ದಾರೆ. ಇವರೊಂದಿಗೆ ಹೊಯ್‌ಕೈಗೆ ಮುಂದಾದ ಯುವಕರು ಸ್ಥಳೀಯರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಲ್ದೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Datta Jayanti : ದತ್ತಪೀಠದ ಅರ್ಚಕರು, ಮುಜಾವರ್ ಸಹಿತ ಐವರಿಗೆ ಗನ್ ಮ್ಯಾನ್ ಸೆಕ್ಯುರಿಟಿ