ಚಿಕ್ಕಮಗಳೂರು : ಚಿಕ್ಕಮಗಳೂರಿನ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯುತ್ ಶಾಕ್‌ನಿಂದ (Electric shock) 7ನೇ ತರಗತಿ ವಿದ್ಯಾರ್ಥಿ ಆಕಾಶ್ (13) ಎಂಬಾತ ಶನಿವಾರ ಮೃತಪಟ್ಟಿದ್ದ. ಈ ಪ್ರಕರಣ ಸಂಬಂಧ 8 ಮಂದಿಯನ್ನು ಅಮಾನತು ಮಾಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ಜವಾಬ್ದಾರಿಯನ್ನು ನಿರ್ವಹಿಸಬೇಕಿದ್ದ ಸಿಬ್ಬಂದಿ ಕರ್ತವ್ಯ ಲೋಪದಿಂದ ಬಾಲಕ ಮೃತಪಟ್ಟಿದ್ದಾಗಿ ಮೇಲ್ನೋಟಕ್ಕೆ ಕಂಡು ಬಂದಿದ.
ಹೀಗಾಗಿ ಪ್ರಭಾರ ಪ್ರಾಂಶುಪಾಲರು, ಬೋಧಕತರ, ನಿಲಯ ಪಾಲಕ ಸೇರಿ 8 ಮಂದಿಯನ್ನು ಅಮಾನತು ಮಾಡಿ ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರವೀಣ್ ಬಿ ಬಾಗೇವಾಡಿಯಿಂದ ಆದೇಶ ಹೊರಡಿಸಿದ್ದಾರೆ. ಸಿಬ್ಬಂದಿ ಬೇಜವಾಬ್ದಾರಿಯಿಂದ ಬಾಲಕ ಮೃತಪಟ್ಟಿದ್ದರಿಂದ ಅಮಾನತು ಮಾಡಲಾಗಿದೆ. ಪ್ರಾಂಶುಪಾಲ ಧನರಾಜು, ನಿಲಯಪಾಲಕರಾದ ಗೀತಾಂಜಲಿ, ಶಿಕ್ಷಕರಾದ ಗಾಯತ್ರಿ, ಶಿವರಾಜ ನಾಯ್ಕ, ಕಾವ್ಯ, ಸುರೇಶ್ ಬೀಳಗಿ ಹಾಗೂ ವಿಶಾಲಕ್ಷಿ, ಬಿಂದು ಅವರನ್ನು ಅಮಾನತು ಮಾಡಲಾಗಿದೆ.
ಇನ್ನೂ ಶಾಲೆಯ ಪ್ರಭಾರ ಪ್ರಾಂಶುಪಾಲರ ಅಮಾನತ್ತಿನಿಂದ ತೆರವಾದ ಜಾಗಕ್ಕೆ ಚಿಕ್ಕಮಗಳೂರಿನ ಮೂಡಿಗೆರೆಯ ಕೋಳೂರು ಶಾಲೆಯ ಪ್ರಾಂಶುಪಾಲರಾದ ಶೈಲ ಕೆ.ಪಿ ಅವರನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: Murder Case : ಚಿಕ್ಕಬಳ್ಳಾಪುರದಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಹತ್ಯೆ
ನೇರಳೆ ಹಣ್ಣು ಕೀಳುವಾಗ ಕರೆಂಟ್ ಶಾಕ್
ನಿನ್ನೆ ಜೂನ್ 15ರಂದು ವಿದ್ಯುತ್ ಶಾಕ್‌ನಿಂದ (Electric shock) 7ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿತ್ತು. ಆಕಾಶ್ (13) ಮೃತ ದುರ್ದೈವಿ.
ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆ ಆವರಣದ ನೇರಳೆ ಮರದಲ್ಲಿ ಹಣ್ಣು ಕೀಳಲು ಆಕಾಶ್ ಮರ ಹತ್ತಿದ್ದ. ಈತನ ಜತೆಗೆ ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದರು. ಹಣ್ಣು ಕೀಳುವಾಗ ಆಕಾಶ್ ಮರದಿಂದ ಜಾರಿ ಬೀಳುತ್ತಿದ್ದ. ಈ ವೇಳೆ ಅಚಾನಕ್ ಆಗಿ ವಿದ್ಯುತ್ ತಂತಿ ಹಿಡಿದಿದ್ದಾನೆ.
ವಿದ್ಯುತ್ ತಂತಿ ಹಿಡಿಯುತ್ತಿದ್ದಂತೆ ಕರೆಂಟ್ ಶಾಕ್‌ನಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಅಲ್ಲಿದ್ದವರು ಆಕಾಶ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕಾಶ್ ಮೃತಪಟ್ಟಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ