ಚಿಕ್ಕಮಗಳೂರು: ರಾಜ್ಯ ಬಿಜೆಪಿಯ ಪ್ರಮುಖ ಎಂಎಲ್‌ಸಿ ಒಬ್ಬರ ಪುತ್ರಿಯ ನೇಮಕಕ್ಕಾಗಿಯೇ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಗಂಭೀರ ಆರೋಪ ಮಾಡಿದ್ದಾರೆ. ಕೊಪ್ಪ ತಾಲೂಕಿನ ಹರಂದೂರು ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕುಮಾರಸ್ವಾಮಿ ಸುಖಾಸುಮ್ಮನೆ ಆರೋಪ ಮಾಡುತ್ತಾರೆ ಎಂಬ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾತಿಗೆ ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದರು. ಯಡಿಯೂರಪ್ಪ ಅವರು ಕೆಜೆಪಿ ಮಾಡಿದಾಗ ಬೊಮ್ಮಾಯಿ, ಈಶ್ವರಪ್ಪ, ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಮೇಲೆ ಏನು ಆರೋಪ ಮಾಡಿದ್ದಾರೆ ಗೊತ್ತ? ಐದು ಕೋಟಿ ರೂ. ಚೆಕ್ ಮೇಲೆ ಸಹಿ ಮಾಡಿರುವುದನ್ನು ನಿರೂಪಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು.
ಸುಧಾಕರ್, ನಿನಗೆ ಹಳೇ ಚರಿತ್ರೆ ಗೊತ್ತಿಲ್ಲ. ನಿನ್ನೆ ಮೊನ್ನೆ ಅಲ್ಲಿಗೆ ಸೇರಿ ಏನೇನು ಮಾಡಿದ್ದೀಯ ಎನ್ನುವುದು ಜಗಜ್ಜಾಹೀರಾಗಿದೆ. ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸಲು ಆಗಿಲ್ಲ, ಆಸ್ಪತ್ರೆಗಳು ಯಾವ ಸ್ಥಿತಿಯಲ್ಲಿವೆ ಗೊತ್ತ?
ಇದನ್ನೂ ಓದಿ: BJP Manifesto: 224 ಕ್ಷೇತ್ರದ 8 ಸಾವಿರ ಸ್ಥಳಗಳಿಂದ ಬಿಜೆಪಿ ಪ್ರಣಾಳಿಕೆಗೆ ಸಲಹೆ ಸ್ವೀಕಾರ: ಸಚಿವ ಡಾ. ಕೆ. ಸುಧಾಕರ್
ಮೆಡಿಕಲ್ ಕಾಲೇಜು ಅಸಿಸ್ಟೆಂಟ್ ಪ್ರೊಫೆಸರ್ ನೇಮಕ ಮಾಡಲು ಹಣ ಪಡೆಯಲಾಗುತ್ತಿದೆ. ಬಿಜೆಪಿಯ ಎಂಎಲ್‌ಸಿ ಆಗಿರುವ ಒಬ್ಬರ ಮಗಳಿಗೇ 50 ಲಕ್ಷ ರೂ. ಕೇಳಿದ್ದಾರೆ. ಈ ಹಣವನ್ನು ಎಲ್ಲಿಂದ ತರಬೇಕು ಎಂದು ಸಿಎಂಗೆ ಅವರು ಹೇಳಿದ್ದಾರೆ. ಇದೆಲ್ಲಾ ನನಗೆ ಕಾಣದೇ ಇರುವುದ?
ನಾನು ಗಾಳಿ ಉತ್ತರ ಕೊಡಲ್ಲ, ಕೆದಕಬೇಡಿ. ಕೆದಕಬೇಕು ಎಂದರೆ ಸಾಕಷ್ಟು ಉತ್ತರ ನೀಡುತ್ತೇನೆ. ಈ ದೇಶದಲ್ಲಿ ಭ್ರಷ್ಟಾಚಾರವನ್ನು ತಾರ್ಕಿಕ ಅಂತ್ಯ ಕಾಣಿಸಲು ಸಾಧ್ಯವಿಲ್ಲ ಎಂದು ಬಿಟ್ಟಿದ್ದೇನೆ. ನನಗೇ ಅಧಿಕಾರ ನೀಡಿದರೆ ಇದನ್ನು ಹೇಗೆ ನಿವಾರಿಸಬೇಕು ಎಂದು ಪ್ರಯತ್ನದಲ್ಲಿದ್ದೇನೆ ಎಂದರು.