ಚಿಕ್ಕಮಗಳೂರು: ಮಲೆನಾಡಿನಲ್ಲಿ ವನ್ಯಜೀವಿ NGOಗಳಿಂದಲೇ (wildlife NGO) ಪ್ರಾಣಿಗಳಿಗೆ ಆಪತ್ತು ಉಂಟಾಗುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ಅಕ್ರಮ ಶಿಕಾರಿಯಲ್ಲಿ (Illegal hunting) ಎನ್‌ಜಿಒ ಸದಸ್ಯರೇ ಭಾಗಿಯಾಗಿರುವುದು ಪತ್ತೆಯಾಗಿದೆ.
ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ (Bhadra wildlife sanctuary) ಹೊಂದಿಕೊಂಡಿರುವ ಪ್ರದೇಶದಲ್ಲಿ NGO ಒಂದರ ಸದಸ್ಯರಿಂದಲೇ ಕಾಡಿನಲ್ಲಿ ಜಿಂಕೆ ಶಿಕಾರಿ (deer hunting) ಹಾಗೂ ಬಾಡೂಟ ನಡೆದಿರುವ ಪ್ರಕರಣ ವರದಿಯಾಗಿದೆ. ಬೃಹತ್ ಗಾತ್ರದ ಜಿಂಕೆ ಬೇಟೆ ಮಾಡಿ ಪಾರ್ಟಿ ಮಾಡುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮೇಲಿನ ಹುಲುವತ್ತಿ ಗ್ರಾಮದ ಅರಣ್ಯ ವ್ಯಾಪ್ತಿಯ, ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮುತ್ತೋಡಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಂಗಮದ ಬಳಿಯ ಕಾಫಿ ತೋಟಕ್ಕೆ ಹೊಂದಿಕೊಂಡಿರುವ ಕಾಡು ಪ್ರದೇಶದಲ್ಲಿ ಬೃಹತ್ ಗಾತ್ರದ ಜಿಂಕೆ ಶಿಕಾರಿ ಮಾಡಲಾಗಿದೆ. ಕಳ್ಳ ಬೇಟೆ ಮಾಡಿದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಬಾಡೂಟಕ್ಕೆ ತಯಾರಿ ನಡೆಸುತ್ತಿದ್ದಾಗ ರೈಡ್ ಮಾಡಿದ್ದಾರೆ.
ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳಿಂದ ರೈಡ್ ನಡೆದಿದ್ದು, ಶಿಕಾರಿ ಮಾಡಿದ ಆರೋಪದ ಮೇಲೆ ಮೊಹಮ್ಮದ್ ಶಕೀಲ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. 8 ಕೆ.ಜಿ. ಜಿಂಕೆ ಮಾಂಸದ ಜೊತೆಗೆ ನಾಡ ಬಂದೂಕು ವಶಪಡಿಸಿಕೊಳ್ಳಲಾಗಿದೆ. 25 ಕೆ.ಜಿ. ತೂಕದ ಜಿಂಕೆಯನ್ನು ಶಿಕಾರಿ ಮಾಡಿರುವ ಆರೋಪವಿದೆ.
ಈ ಪಾರ್ಟಿ ಸ್ಥಳದಲ್ಲಿ ಎನ್‌ಜಿಓ ಸದಸ್ಯರಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳೇ ಹಲವು ಎನ್‌ಜಿಓ ಸದಸ್ಯರನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೇಶಿ- ವಿದೇಶಿ ಫಂಡ್‌ನ ಅಸೆ ಹುಟ್ಟಿಸಿ ಕೆಲವು ಅರಣ್ಯಾಧಿಕಾರಿಗಳನ್ನು ನಿಕಟವಾಗಿಸಿಕೊಳ್ಳುವ ಕೆಲವು ಎನ್‌ಜಿಒ ಸದಸ್ಯರು, ತಮ್ಮ ಕಿಡಿಗೇಡಿತನಗಳಿಗೆ ಅರಣ್ಯವನ್ನು ಬಳಸಿಕೊಳ್ಳುತ್ತಿರುವುದು ಲಾಗಾಯ್ತಿನಿಂದಲೂ ನಡೆದುಬರುತ್ತಿದೆ.
ಇದನ್ನೂ ಓದಿ: Hunting wild boar : ಗ್ರಾಮಸ್ಥರ ಜತೆ ಪ್ರೀತಿಯ ಒಡನಾಟ ಹೊಂದಿದ್ದ ಕಾಡಹಂದಿಯನ್ನು ಬಾಂಬಿಟ್ಟು ಕೊಂದ ದುರುಳರು!