ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ (Lok Sabha Election 2024) ಟಿಕೆಟ್ ಫೈಟ್ ಜೋರಾಗಿದೆ. ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕ್ಷೇತ್ರದಿಂದ ಕೆ. ಜಯಪ್ರಕಾಶ್ ಹೆಗ್ಡೆ ಹೆಸರು ಕೇಳಿ ಬಂದಿರುವುದಕ್ಕೆ ಕಾಂಗ್ರೆಸ್ ಕಾರ್ಯಕತರು, ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಹೆಗ್ಡೆ ಅವರ ವಿರುದ್ಧ ಗೋ ಬ್ಯಾಕ್ ಅಭಿಯಾನ ಆರಂಭಿಸಿರುವ ಕೈ ಮುಖಂಡರು, ಇದೀಗ ಬಹಿರಂಗ ಸಭೆ ನಡೆಸುವ ಮೂಲಕ ಮತ್ತೊಬ್ಬ ಆಕಾಂಕ್ಷಿ ಕೆಪಿಸಿಸಿ ವಕ್ತಾರ ಹಾಗೂ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಟಿಕೆಟ್ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸದ್ಯ ಬಿಜೆಪಿಯಲ್ಲಿರುವ ಜಯಪ್ರಕಾಶ್ ಹೆಗ್ಡೆ ಅವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾಂಗ್ರೆಸ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಶೃಂಗೇರಿಯಲ್ಲಿ ಸುಧೀರ್ ಕುಮಾರ್ ಮುರೊಳ್ಳಿ ಪರ ಮುಖಂಡರು ಸಭೆ ನಡೆಸಿದ್ದು, ಮುರೊಳ್ಳಿಗೆ ಟಿಕೆಟ್ ನೀಡುವಂತೆ ಒಕ್ಕೊರಳ ಒತ್ತಾಯ ಕೇಳಿಬಂದಿದೆ.
ಉಡುಪಿ – ಚಿಕ್ಕಮಗಳೂರಿನ ಎಲ್ಲಾ ಜನಪರ ಚಳವಳಿ ಅಂದರೆ ರೈತ, ಕಾರ್ಮಿಕ, ದಲಿತ ಚಳುವಳಿಗಳ ಜೊತೆ ಸುಧೀರ್ ಕುಮಾರ್ ಮುರೊಳ್ಳಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಎಲ್ಲಾ ಪಕ್ಷ ಹಾಗೂ ಸಂಘಟನೆಗಳಲ್ಲೂ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ವೈಯಕ್ತಿಕವಾದ ಹಿತೈಷಿಗಳಿದ್ದಾರೆ. ಕಾನೂನು, ರಾಜಕೀಯ, ಕೃಷಿ, ಸಾಹಿತ್ಯ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಜ್ಞಾನವುಳ್ಳವರಾಗಿದ್ದು, ತಮ್ಮ ವಾಕ್ಚಾತುರ್ಯದಿಂದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕಷ್ಟಕಾಲದಲ್ಲಿ ಪಕ್ಷಕ್ಕೆ ಕೈಕೊಟ್ಟವರು ಈಗ ಬೇಡ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸುಧೀರ್ ಕುಮಾರ್ ಮುರೊಳ್ಳಿ ಯವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.
ದಿನದಿಂದ ದಿನಕ್ಕೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪರ ಲಾಬಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟಿಕೆಟ್ ಫೈನಲ್ ಆದ ಮೇಲೆ ಒಂದು ಬಣದ ಬಂಡಾಯದ ಬಿಸಿ ಎದುರಾಗುವ ಸಾಧ್ಯತೆ ಇದೆ.