ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಜಿಲ್ಲೆಯ ಕಡೂರು ತಾಲೂಕಿನ ಜಿಗಣೆಹಳ್ಳಿ ಮೈಲಾರ ಲಿಂಗೇಶ್ವರಸ್ವಾಮಿ ಕಾರ್ಣಿಕೋತ್ಸವದಲ್ಲಿ (Mylara lingeshwara Karnika) ಗೊರವಯ್ಯ ನುಡಿದ ಕಾರ್ಣಿಕ ವಾಣಿಯು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ಬಾರಿಯ ಕಾರ್ಣಿಕ ವಾಣಿಯಲ್ಲಿ ಪ್ರಮುಖವಾಗಿ ದೇಶದ ರಾಜಕೀಯ ಕ್ಷೇತ್ರದಲ್ಲಾಗುವ ಬೆಳವಣಿಗೆ ಬಗ್ಗೆ ಭವಿಷ್ಯ ನುಡಿಯಲಾಗಿದೆ.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಿಲ್ಲನ್ನೇರಿದ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. “ಹುಟ್ಟಿದ ಕಮಲ ಆಕಾಶ ಮೆಟ್ಟೀತು, ಮಳೆ ಬೆಳೆ ಸಂಪಾಯಿತಲೇ ಪರಾಕ್” ಎಂದು ಗೊರವಯ್ಯ ಕಾರ್ಣಿಕ ವಾಣಿ ಹೇಳಿದ್ದಾರೆ. ಹುಟ್ಟಿದ ಕಮಲ ಆಕಾಶ ಮೆಟ್ಟೀತು ಎಂದು ಗೊರವಯ್ಯ ಹೇಳಿರುವುದರಿಂದ ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಮತ್ತೊಮ್ಮೆ ನರೇಂದ್ರ ಮೋದಿ ಅವರೇ ಪ್ರಧಾನಿ ಆಗಲಿದ್ದಾರೆ ಎಂದು ಸ್ಥಳೀಯರು ವಿಶ್ಲೇಷಣೆ ಮಾಡಿದ್ದಾರೆ. ಅದೇ ರೀತಿ ಈ ವರ್ಷ ಮಳೆ ಬೆಳೆ ಸಮೃದ್ಧವಾಗಿ ಆಗುತ್ತದೆ ಎಂದು ಕೂಡ ಗೊರವಯ್ಯ ಭವಿಷ್ಯವಾಣಿ ನುಡಿದಿದ್ದಾರೆ.
ಸಂಪಾಯ್ತಲೇ ಪರಾಕ್; ಮೈಲಾರದ ಕಾರ್ಣಿಕೋತ್ಸವದಲ್ಲಿ ದೈವವಾಣಿ
ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಡೆಂಕನಮರಡಿಯಲ್ಲಿ ಸೋಮವಾರ ನಡೆದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ದೈವವಾಣಿ ನುಡಿದಿದ್ದು, ರಾಜ್ಯ ಸುಭಿಕ್ಷವಾಗಿ ಇರುತ್ತದೆ ಎಂದು ಕಾರ್ಣಿಕವಾಣಿಯನ್ನು ವಿಶ್ಲೇಷಿಸಲಾಗುತ್ತಿದೆ.
ʼಸಂಪಾಯ್ತಲೇ ಪರಾಕ್ʼ ಎಂದು ಗೊರವಯ್ಯ ರಾಮಪ್ಪ ಒಡೆಯರ್ ಭವಿಷ್ಯವಾಣಿ ನುಡಿದಿದ್ದಾರೆ. ಪ್ರಸಕ್ತ ವರ್ಷದ ದೈವವಾಣಿಯಲ್ಲಿ ಶುಭ ಫಲ ಅಡಗಿದೆ. ಈ ವರ್ಷ ಮಳೆ, ಬೆಳೆ ಉತ್ತಮವಾಗಿರಲಿದೆ ಎಂದು ಕಾರ್ಣಿಕ ಉಕ್ತಿಯನ್ನು ಭಕ್ತರು ವಿಶ್ಲೇಷಿಸಿದ್ದಾರೆ. ಧರ್ಮಕರ್ತ ವೆಂಕಪ್ಪ ಒಡೆಯರ್ ನೇತೃತ್ವದಲ್ಲಿ ನಡೆದ ಕಾರ್ಣಿಕೋತ್ಸವ ನೆರವೇರಿದೆ. ಕಾರ್ಣಿಕೋತ್ಸವ ವೀಕ್ಷಿಸಲು ಲಕ್ಷಾಂತರ ಭಕ್ತರು ಆಗಮಿಸಿದ್ದರು.
ಈ ವರ್ಷದ ಮೈಲಾರಲಿಂಗೇಶ್ವರ ಕಾರ್ಣಿಕ ಸತ್ಯವಾಗಲ್ಲ: ಧರ್ಮದರ್ಶಿ ಅಪಸ್ವರ
ಹೂವಿನಹಡಗಲಿ ತಾಲೂಕಿನ ಮೈಲಾರದ ಡೆಂಕನಮರಡಿಯಲ್ಲಿ ಗೊರವಯ್ಯ ನುಡಿದ ಈ ವರ್ಷದ ಕಾರ್ಣಿಕ ವಾಣಿ ಸತ್ಯವಾಗಲ್ಲ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಪಸ್ವರ ತೆಗೆದಿದ್ದಾರೆ. ಇದರಿಂದ ಗೊರವಯ್ಯ ಮತ್ತು ಧರ್ಮದರ್ಶಿ ನಡುವಿನ ಅಸಮಾಧಾನ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಜಾತ್ರಾ ಸಂಪ್ರದಾಯದ ನಿಯಮಗಳನ್ನು ಗೊರವಯ್ಯ ಗಾಳಿಗೆ ತೂರಿದ್ದಾರೆ. ಗುರುಪೀಠದ ಧರ್ಮದ ನಿಯಮಗಳನ್ನು ಪಾಲಿಸದೆ ಕಾರ್ಣಿಕ ನುಡಿದ್ದಾರೆ. ಇದು ದೈವವಾಣಿಯಲ್ಲ ಗೊರವಯ್ಯ ರಾಮಪ್ಪನ ವಾಣಿ. ಇದನ್ನು ನಂಬುವುದು, ಬಿಡುವುದು ಭಕ್ತರಿಗೆ ಬಿಟ್ಟದ್ದು. ಜಿಲ್ಲಾಧಿಕಾರಿ ಹಾಗೂ ಭಕ್ತರು ಇವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರತಿ ವರ್ಷ ಭಕ್ತರಿಗೆ ಕಾರ್ಣಿಕ ನುಡಿಯ ಬಗ್ಗೆ ಗೊಂದಲ ಆಗುತ್ತದೆ ಎಂದು ಧರ್ಮದರ್ಶಿ ಹೇಳಿದ್ದಾರೆ.
ಇದನ್ನೂ ಓದಿ | Rajya Sabha Election: ನಾಳೆ ರಾಜ್ಯಸಭಾ ಚುನಾವಣೆ; ಮತದಾನ ಹೇಗೆ? ಯಾವ ಮತ ಅಸಿಂಧು ಆಗುತ್ತೆ?
ನಿಯಮ ಗಾಳಿಗೆ ತೂರಿದ್ದರಿಂದ ಈ ವರ್ಷ ಕಾರ್ಣಿಕ ನುಡಿಯ ಬಗ್ಗೆ ನಾನು ವಿಶ್ಲೇಷಣೆ ಮಾಡುವುದಿಲ್ಲ. ದೇಗುಲ ಪದ್ಧತಿಯನ್ನು ಅನುಸರಿಸಿದರೆ ಮಾತ್ರ ದೈವವಾಣಿ ನುಡಿಯಲಿಕ್ಕೆ ಸಾಧ್ಯ. ಯಾರ ಆಣತಿಯಂತೆ ಕಾರ್ಣಿಕ ನುಡಿಯುತ್ತಿದ್ದಾರೋ ಗೊತ್ತಿಲ್ಲ. ಮೈಲಾರಲಿಂಗೇಶ್ವರ ದೇವರು ಹುಟ್ಟಿದಾಗಿನಿಂದ ನಡೆದಿದ್ದ ಧಾರ್ಮಿಕ ಕಾರ್ಯಗಳು ಇವತ್ತು ನಡೆದಿಲ್ಲ. ವೈಯಕ್ತಿಕ ಸಮಸ್ಯೆ, ಜಗಳ, ದ್ವೇಷ ಏನಿದ್ದರೂ ಭಕ್ತರು ಬಂದಾಗ ಆ ರೀತಿ ಮಾಡಬಾರದು. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಈ ಬಗ್ಗೆ ಧಾರ್ಮಿಕ ದತ್ತಿ ಅಧಿಕಾರಿ, ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಒತ್ತಾಯಿಸಿದ್ದಾರೆ.