ಚಿಕ್ಕಮಗಳೂರು: ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ ವೃದ್ಧರೊಬ್ಬರು ಮಂಗನ ಕಾಯಿಲೆಯಿಂದ (Monkey Pox) ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಮೃತಪಟ್ಟಿರುವ ವೃದ್ಧ ಸೇರಿದಂತೆ ಮೂವರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ಶೃಂಗೇರಿಯಲ್ಲಿ ಒಬ್ಬರಿಗೆ, ಕೊಪ್ಪ ತಾಲೂಕಿನ ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೆಎಫ್‌ಡಿ ವಾರ್ಡ್ ತೆರೆಯಲಾಗಿದೆ.
ಬೇಗನೆ ಗ್ರಾಮಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಮನೆಗೆ ಔಷಧಿಗಳನ್ನು ವಿತರಣೆ ಮಾಡುತ್ತಿದ್ದಾರೆ. ಶೃಂಗೇರಿ, ಕೊಪ್ಪ ತಾಲೂಕಿನಲ್ಲೂ ಜನರಿಗೆ ಮಂಗನ ಕಾಯಿಲೆ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತಿದೆ.
ಗ್ರಾಮದಲ್ಲಿ ಸಾವನ್ನಪ್ಪಿರುವ ಮಂಗಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಬಳಿಕ ಆ ಸ್ಥಳದಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಸೋಂಕು ಹರಡದಂತೆ ಅರಣ್ಯದಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: Monkey Pox : ಚಿಕ್ಕಮಗಳೂರಲ್ಲಿ ಮಂಗನ ಕಾಯಿಲೆಗೆ ವೃದ್ಧ ಬಲಿ
ಒಂದೇ ತಿಂಗಳಲ್ಲಿ 49 ಪ್ರಕರಣಗಳು ಪತ್ತೆ
ರಾಜ್ಯದಲ್ಲಿ ಕೆಎಫ್‌ಡಿ ಪೀಡಿತ 12 ಜಿಲ್ಲೆಗಳಿದ್ದು, ಈ ವರ್ಷದಲ್ಲಿ ಮೂರು ಜಿಲ್ಲೆಗಳಲ್ಲಿ ಮಾತ್ರ ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. ಜನವರಿ 1ರಿಂದ ಫೆ. 2ರವರೆಗೆ ರಾಜ್ಯದಲ್ಲಿ 2,288 ಕೆಎಫ್‌ಡಿ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಶಿವಮೊಗ್ಗದಲ್ಲಿ 12, ಉತ್ತರ ಕನ್ನಡ 34 ಹಾಗೂ ಚಿಕ್ಕಮಗಳೂರಲ್ಲಿ 3 ಪ್ರಕರಣಗಳು ವರದಿಯಾಗಿವೆ. ಒಟ್ಟು 49 ಮಂದಿಯಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದ್ದು, ಈ ಪೈಕಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ತಲಾ 1 ಸಾವಾಗಿದೆ.
ಏನಿದು ಮಂಗನ ಕಾಯಿಲೆ?
ಮಂಗನ ಕಾಯಿಲೆ ವೈರಾಣು (Kyasanur Forest Disease) ಸೋಂಕಿತ ಉಣ್ಣೆ ಮರಿಗಳು (ನಿಂಫ್) ಕಚ್ಚುವುದರಿಂದ ಹರಡುವ ವೈರಲ್ ಜ್ವರವಾಗಿದೆ. ಈ ಕಾಯಿಲೆಯು ಸಾಮಾನ್ಯವಾಗಿ ನವೆಂಬರ್‌ನಿಂದ ಮೇ ತಿಂಗಳ ಅವಧಿಯಲ್ಲಿ ಕಂಡು ಬರುತ್ತದೆ. ಹಠಾತ್ ಜ್ವರ, ಶರೀರದಲ್ಲಿ ತೀವ್ರವಾದ ಸ್ನಾಯುಗಳ ನೋವು, ತಲೆನೋವು ಬರುವುದು ಇದರ ರೋಗ ಲಕ್ಷಣಗಳಾಗಿವೆ. ಮಂಗನ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಡಿಗೆ ಹೋಗುವ ಮುನ್ನ DEPA ತೈಲ ಲೇಪಿಸಿ
ರೋಗ ಲಕ್ಷಣ ಕಂಡು ಬಂದಾಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವಂತೆ ಆರೋಗ್ಯ ಇಲಾಖೆ ಆಯುಕ್ತ ರಣದೀಪ್ ಮನವಿ ಮಾಡಿದ್ದಾರೆ. ಮಲೆನಾಡು ಸುತ್ತಮುತ್ತ ಮಂಗನ ಕಾಯಿಲೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಆಯುಕ್ತ ರಣದೀಪ್ ಶಿವಮೊಗ್ಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಖ್ಯವಾಗಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರಿನ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಕೆಎಫ್‌ಡಿ ರೋಗ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತಾಗಿ ಪರಿಶೀಲನೆ ನಡೆಸಿದರು.
ಯಾರಿಗಾದರೂ ರೋಗ ಲಕ್ಷಣ ಕಂಡು ಬಂದರೆ ಕೂಡಲೇ ರಕ್ತ ಮಾದರಿಯನ್ನು ಪಡೆದು ಕೆಎಫ್‌ಡಿ ಪರೀಕ್ಷೆಗೆ ಕಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಗ್ರಾಮದ ಜನರು ಕಾಡಿಗೆ ಹೋಗುವ ಮುನ್ನ ಇಲಾಖೆಯ ಮುಖೇನ ಉಚಿತವಾಗಿ ನೀಡಲಾಗುತ್ತಿರುವ DEPA ತೈಲವನ್ನು ಲೇಪಿಸಿಕೊಂಡು ಹೋಗಲು ಸೂಚಿಸಲಾಗಿದೆ.
ಕೆಎಫ್‌ಡಿ ಪಾಸಿಟಿವ್ ಪ್ರಕರಣಗಳಿಗೆ ಎ.ಬಿ.ಏ.ಆರ್.ಕೆ ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಪಾಸಿಟಿವ್ ಪ್ರಕರಣಗಳು ಪತ್ತೆಯಾದ ತಕ್ಷಣವೇ ಆಸ್ಪತ್ರೆಗೆ ದಾಖಲಿಸುವುದು ಕಡ್ಡಾಯ ಮಾಡಲಾಗಿದೆ. ಇನ್ನೂ ಈಗಾಗಲೇ ಜೆಸಿಎಚ್ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ ಕೆಎಫ್‌ಡಿಗೆ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಸಲಾಗಿದೆ. ಇನ್ನೂ ಕೆಎಂಸಿ ಮಣಿಪಾಲ, ಎಸ್‌ಐಎಂಸಿ ಶಿವಮೊಗ್ಗ, ಕೆಆರ್‌ಐಎಂಎಸ್ ಕಾರವಾರ ಆಸ್ಪತ್ರೆಗಳನ್ನು ರೆಫರಲ್ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ. ಇಲ್ಲಿಯೂ ಸಹ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ