ಚಿಕ್ಕಮಗಳೂರು: ಕಾಫಿ ನಾಡಿನ ಪ್ರವಾಸದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಿವಿಧೆಡೆ ಪ್ರತಿಭಟನೆಯ ಬಿಸಿ ತಟ್ಟಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಅವರು ಶಾಸಕರಾಗಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪದಲ್ಲಿ ಜನ ಸಂಕಲ್ಪ ಯಾತ್ರೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೊಪ್ಪ ಸಿಎಂ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಕಾಂಗ್ರೆಸ್‌ನ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಅವರನ್ನು ಪೊಲೀಸರು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸುತ್ತಿಲ್ಲ, ರೈತರ ಆತ್ಮಹತ್ಯೆ, ಬೆಳೆ ವಿಮೆ ಪರಿಹಾರ ವಿತರಣೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಖಂಡಿಸಿದ್ದ ಸಚಿನ್ ಮೀಗಾ, ಸಿಎಂ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದರು. ಕೊಪ್ಪಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದ ಸಚಿನ್ ಮೀಗಾ ಅವರನ್ನು ದಾವಣಗೆರೆ ನಗರದ ಬಾಪೂಜಿ ಗೆಸ್ಟ್ ಹೌಸ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜತೆಗೆ ಕಿಸಾನ್ ಕಾಂಗ್ರೆಸ್ ದಾವಣಗೆರೆ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ್, ಮುಖಂಡ ರುದ್ರೇಶ್ ಮುಂತಾದವರನ್ನೂ ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗದಲ್ಲೂ ಬಿಸಿ
ಸಿಎಂ ಬೊಮ್ಮಾಯಿ ಆಗಮಿಸಿದಾಗ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿದ್ದವರನ್ನು ತೀರ್ಥಹಳ್ಳಿಯಲ್ಲಿ ಬಂಧಿಸಲಾಗಿದೆ. ಕ್ಷೇತ್ರದಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಪ್ಪು ಬಾವುಟ ಪ್ರದರ್ಶನಕ್ಕೆ ಕರೆ ನೀಡಿತ್ತು. ಮುಂಜಾಗ್ರತಾ ಕ್ರಮವಾಗಿ ತೀಗಡಿ ಕೃಷ್ಣಮೂರ್ತಿ, ಹಾರೋಗೋಳಿಗೆ ವಿಶ್ವನಾಥ ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಗಿ ಬಂದೋಬಸ್ತ್
ತೀರ್ಥಹಳ್ಳಿಯ ಯು.ಆರ್. ಅನಂತಮೂರ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದ್ದು, ಪ್ರತಿಭಟನೆಗಳು ನಡೆಯಬಹುದಾದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಸ್ಥಳಕ್ಕೆ ಸ್ವತಃ ಗೃಹಸಚಿವ ಹಾಗೂ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.
ಕ್ಷೇತ್ರದ ಮೂಲೆಮೂಲೆಗಳಿಂದ ಕಾರ್ಯಕರ್ತರು ಆಗಮಿಸುತ್ತಿದ್ದು, ಅಲ್ಲಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ | ನಾವೂ ಕಪ್ಪು ಬಾವುಟ ತೋರಿಸಿ, ಮೊಟ್ಟೆ ಹೊಡೆದೇ ಬಂದಿದ್ದೀವಿ ಗೊತ್ತ?: ಸರ್ಕಾರಕ್ಕೆ ಸಿದ್ದರಾಮಯ್ಯ ಆವಾಜ್