Site icon Vistara News

Rama Mandir : ರಾಮ ಮಂದಿರಕ್ಕೆ ವಿರೋಧ ; ಸುಳ್ಳು ಸುದ್ದಿ ಹರಡಬೇಡಿ ಎಂದ ಶೃಂಗೇರಿ ಶ್ರೀಗಳು

Rama Mandir Shringeri Shree

ಚಿಕ್ಕಮಗಳೂರು: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ (Rama Mandir) ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠೆ (Rama Statue prana prathishte) ಮಾಡುವ ವಿಚಾರದಲ್ಲಿ ಶೃಂಗೇರಿ ಶಾರದಾ ಪೀಠದ (Shringeri Sharada peeta) ವಿರೋಧವಿದೆ ಎಂಬ ಪ್ರಚಾರದ ಬಗ್ಗೆ ಮೊದಲ ಬಾರಿಗೆ ಮಠ ಮೌನ ಮುರಿದಿದೆ. ಸ್ವತಃ ಶೃಂಗೇರಿ ಮಠದ ಕಿರಿಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ (Shri Vidhushekhara Bharathi theertha Swameeji) ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲವೂ ಸುಳ್ಳು ಮತ್ತು ಅಪಪ್ರಚಾರ ಎಂದು ಹೇಳಿದ್ದಾರೆ.

ಸೋಮವಾರ ಮಠದಲ್ಲಿ ನಡೆದ ಪ್ರವಚನದ ವೇಳೆ ಅಯೋಧ್ಯೆಯ ರಾಮ ಮಂದಿರದ ವಿಚಾರವನ್ನು ಪ್ರಸ್ತಾಪಿಸಿದ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿಗಳು, ಮಠ ಯಾವತ್ತೂ ಇದನ್ನು ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ʻʻಕೆಲವರು ಹಿರಿಯ ಗುರುಗಳ ಚಿತ್ರ ಬಳಸಿ ಅಯೋಧ್ಯೆ ರಾಮ ಮಂದಿರ ನಡೆಯುವ ಕಾರ್ಯಕ್ಕೆ ವಿರೋಧ ಅಂತ ಹಾಕಿದರು. ಆದರೆ, ಹಿರಿಯ ಗುರುಗಳು ಎಲ್ಲಿ ಮಾತನಾಡಿದ್ದಾರೆ, ಎಲ್ಲಿ ವಿರೋಧ ಮಾಡಿದ್ದಾರೆ, ಅವರು ಎಲ್ಲಾದರೂ ಮಾತನಾಡಿರುವುದು ಇದೆಯಾʼ ಎಂದು ಪ್ರಶ್ನಿಸಿದ ಕಿರಿಯ ಶ್ರೀಗಳು, ಮಠದ ವಿಚಾರದಲ್ಲಿ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ಭಕ್ತರು, ಜನರು ಜಾಗೃತರಾಗಿರಬೇಕು ಎಂದು ಹೇಳಿದರು.

ಹಿರಿಯ ಶ್ರೀಗಳ ಫೋಟೋ ಬಳಸಿ ಶೃಂಗೇರಿ ಮಠದ ವಿರೋಧ ಎಂದು ಹಾಕುವವನು ಎಲ್ಲೋ ಕುಳಿತಿರುತ್ತಾನೆ, ಅವನಿಗೆ ವಾಸ್ತವ ಏನೂ ಗೊತ್ತಿರುವುದಿಲ್ಲ. ಇಂತಹ ವಿಚಾರಗಳಲ್ಲಿ ಜನರು ಜಾಗೃತರಾಗಿರಬೇಕು ಎಂದು ಹೇಳಿದ ಅವರು, ಭಕ್ತರು, ಶಿಷ್ಯರ ಸ್ನೇಹಿತನ ಶ್ರೇಯಸ್ಸು ಬಯಸುವವರಿಗೇ ಹೀಗಾದ್ರೆ ಸಾಮಾನ್ಯ ಜನರ ಕಥೆ ಏನು?ʼ ಎಂದು ಪ್ರಶ್ನಿಸಿದರು. ಗಣ್ಯರಾಗಿರುವ ವ್ಯಕ್ತಿಗಳ ಬಗ್ಗೆ ಇಂಥ ಸುಳ್ಳುಗಳನ್ನು ಹರಡುತ್ತಿರುವಾಗ ಸಮಾಜದಲ್ಲಿ ಎಷ್ಟೊಂದು ಸುಳ್ಳುಗಳನ್ನು ಹೀಗೆ ಹರಡುತ್ತಿರಬಹುದು ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಗುರುಗಳು ಹೇಳಿದ ಶ್ರಾದ್ಧದ ಕಥೆ

ಏನೇ ಸುದ್ದಿ ಮಾಡುವುದಿದ್ದರೂ, ಮಾಹಿತಿಯನ್ನು ಹರಡುವುದಿದ್ದರೂ ಅದಕ್ಕೆ ಸೂಕ್ತವಾದ ಆಧಾರಗಳು ಬೇಕು ಎನ್ನುವುದನ್ನು ಶ್ರೀಗಳು ಒಂದು ದೃಷ್ಟಾಂತದ ಮೂಲಕ ಹೇಳಿದರು. ನಮ್ಮ ಹಿರಿಯರೊಬ್ಬರು ಹೇಳುತ್ತಿದ್ದರು: ನೀವು ಒಂದೋ ನಿಮ್ಮ ತಂದೆ ಇದ್ದಾರೆ ಎನ್ನುವುದನ್ನು ರುಜುವಾತುಪಡಿಸಬೇಕು. ಇಲ್ಲವೇ ನೀವು ಶ್ರಾದ್ಧ ಕರ್ಮಗಳನ್ನಾದರೂ ಮಾಡುತ್ತಿರಬೇಕು. ನಾನು ತಂದೆಯನ್ನೂ ತೋರಿಸುವುದಿಲ್ಲ. ಶ್ರಾದ್ಧವನ್ನೂ ಮಾಡುವುದಿಲ್ಲ ಎಂದು ಹೇಳುವುದು ವಿತಂಡವಾಗುತ್ತದೆ ಎಂದು ಹೇಳಿದ್ದನ್ನು ನೆನಪಿಸಿದರು.

ಇದೇ ಸಂದರ್ಭದಲ್ಲಿ ಶೃಂಗೇರಿ ಮಠದ ಬೇರೆ ಶಾಖೆಗಳ ಶ್ರೀಗಳು ರಾಮ ಮಂದಿರ ಮತ್ತು ಅದರ ಪ್ರಾಣ ಪ್ರತಿಷ್ಠೆಯ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ತಾವು ಮಾತನಾಡುವುದಿಲ್ಲ ಎಂದು ಕಿರಿಯ ಶ್ರೀಗಳು ಸ್ಪಷ್ಟಪಡಿಸಿದರು. ಈ ಹಿಂದೆಯೂ ʻರಾಮ ಮಂದಿರ ಲೋಕಾರ್ಪಣೆ ಬಹಿಷ್ಕಾರʼ ಸುದ್ದಿಗೆ ಮಠದಿಂದ ಸ್ಪಷ್ಟೀಕರಣ ನೀಡಲಾಗಿತ್ತು.

ಶೃಂಗೇರಿ ಮಠದ ಪರವಾಗಿ ಆಡಳಿತಾಧಿಕಾರಿ ಭಾಗಿ

ಅಯೋಧ್ಯೆಯಲ್ಲಿ ನಡೆದ ರಾಮ ಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಶೃಂಗೇರಿ ಮಠದಿಂದ ಹಿರಿಯ ಇಲ್ಲವೇ ಕಿರಿಯ ಶ್ರೀಗಳು ಭಾಗವಹಿಸಿಲ್ಲ. ಅವರ ಪ್ರತಿನಿಧಿಯಾಗಿ ಮಠದ ಆಡಳಿತಾಧಿಕಾರಿಗಳಾದ ಗೌರಿಶಂಕರ್‌ ಅವರು ಭಾಗವಹಿಸಿದ್ದರು.

ಇದನ್ನೂ ಓದಿ: Rama Mandir : ರಾಮ ಮಂದಿರ ಉದ್ಘಾಟನೆ ಬಹಿಷ್ಕಾರ ಸುದ್ದಿ ಸುಳ್ಳು; ಶೃಂಗೇರಿ ಮಠ ಸ್ಪಷ್ಟನೆ

Exit mobile version