Site icon Vistara News

ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಅ.15-26ರವರೆಗೆ ಶರನ್ನವರಾತ್ರಿ ಉತ್ಸವ, ಮಹಾಚಂಡಿಕಾ ಹೋಮ, ಶ್ರೀ ಮಾತಾ ಪ್ರಶಸ್ತಿ ಪ್ರದಾನ

horanadu temple

ಕಳಸ: ಶ್ರೀ ಕ್ಷೇತ್ರ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ (Sri Ksetra Horanadu) ಅ. 15 ರಿಂದ 26ರವರೆಗೆ ಶರನ್ನವರಾತ್ರಾ ಮಹೋತ್ಸವ, ಶ್ರೀಮನ್‌ ಮಹಾಚಂಡಿಕಾ ಹೋಮ, ಪಟ್ಟಾಭಿಷೇಕೋತ್ಸವ, ಜೀವ-ಭಾವ ಕಾರ್ಯಕ್ರಮ ಹಾಗೂ ಶ್ರೀ ಮಾತಾ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಶರನ್ನವರಾತ್ರಾ ಮಹೋತ್ಸವದ ಪ್ರಯುಕ್ತ ನಿತ್ಯ ಲೋಕ ಕಲ್ಯಾಣಾರ್ಥವಾಗಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಇನ್ನು ಅ.26ರಂದು ಶ್ರೀಮನ್‌ ಚಂಡಿಕಾ ಹೋಮ, ಧರ್ಮಕರ್ತರ ಪಟ್ಟಾಭಿಷೇಕೋತ್ಸವದ ಅಂಗವಾಗಿ ಜೀವ-ಭಾವ ಕಾರ್ಯಕ್ರಮ ಮತ್ತು ಶ್ರೀಮಾತಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಶ್ರೀ ಲಲಿತ ಕಲಾಮಂಟಪದಲ್ಲಿ ಅ.26ರಂದು ಮಧ್ಯಾಹ್ನ 1 ಗಂಟೆಯಿಂದ ಜೀವ-ಭಾವ ಕಾರ್ಯಕ್ರಮ ಮತ್ತು ಶ್ರೀಮಾತಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬೆಂಗಳೂರಿನ ಕೆಂಗೇರಿಯ ಓಂಕಾರ ಆಶ್ರಮದ ಪೀಠಾಧಿಪತಿಗಳಾದ ಡಾ. ಆಚಾರ್ಯ ಮಹಾಮಂಡಲೇಶ್ವರ ಶ್ರೀ ಶ್ರೀ ಸ್ವಾಮಿ ಮಧುಸೂದನಾನಂದಪುರಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ನೆಲೆ ಫೌಂಡೇಶನ್‌ಗೆ ಶ್ರೀ ಮಾತಾ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಇದನ್ನೂ ಓದಿ | Yuva Dasara: ಜಯನಗರದಲ್ಲಿ ಅ.15 ರಿಂದ 24 ರವರೆಗೆ ʼಯುವ ದಸರಾʼ

ಪ್ರತಿ ನಿತ್ಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶ್ರೀ ಶರನ್ನವರಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ದಿನ ಬೆಳಗ್ಗೆ ವಿಶೇಷ ಅಲಂಕಾರ ಪೂಜೆ, ಸಂಜೆ ಸಂಗೀತ, ಭರತನಾಟ್ಯ, ಯಕ್ಷಗಾನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಪ್ರತಿನಿತ್ಯ ಸಂಜೆ 5 ರಿಂದ 6 ಗಂಟೆವರೆಗೆ ಶ್ರೀ ಕ್ಷೇತ್ರದ ಎಂ.ಎಸ್‌.ಗೌತಮ್‌ ಹಾಗೂ ರವಿಕಿರಣ್‌.ಕೆ ಮತ್ತು ತಂಡದಿಂದ ʼನಾದಸ್ವರ ವಾದನʼ, ಸಂಜೆ 6ರಿಂದ 7 ಗಂಟೆವರೆಗೆ ಕಳಸದ ಹೆಬ್ಬಾಳೆ ಪ್ರಸನ್ನ ಭಟ್‌ ಅವರಿಂದ ಶ್ರೀ ದೇವಿ ಮಹಾತ್ಮೆ ಪುರಾಣ ಪ್ರವಚನ ಹಾಗೂ ಪ್ರತಿ ದಿನ ರಾತ್ರಿ ದೇವಿಗೆ ಮಹಾಮಂಗಳಾರತಿ ನಂತರ ಅಷ್ಟಾವಧಾನ ಸೇವೆ ಇರಲಿದೆ.

Exit mobile version