ಚಿಕ್ಕಮಗಳೂರು: ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧದ ಆಸ್ತಿ ಖರೀದಿ ಅವ್ಯವಹಾರ ಆರೋಪ ಪ್ರಕರಣ ಇದೀಗ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತೆರಳುವ ಮುನ್ಸೂಚನೆ ಲಭಿಸಿದೆ.
ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ದಾರ್ಥ್ ಕುಟುಂಬದಿಂದ 211 ಎಕರೆ ಕಾಫಿ ತೋಟವನ್ನು ಟಿ.ಡಿ ರಾಜೇಗೌಡ ಖರೀದಿಸಿದ್ದರು. ಆಸ್ತಿ ಖರೀದಿ ವೇಳೆ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಮೋಸ ಮಾಡಿದ್ದಾರೆಂದು ಶೃಂಗೇರಿ ಮಾಜಿ ಶಾಸಕ ಜೀವರಾಜ್ ಆರೋಪ ಮಾಡಿದ್ದರು.
ಈ ಕುರಿತು ವಕೀಲರೊಬ್ಬರು ಪ್ರಕರಣ ದಾಖಲಿಸಿದ್ದರಾದರೂ ಇತ್ತೀಚೆಗೆ ವಾಪಸ್ ಪಡೆದಿದ್ದರು. ಜೀವರಾಜ್ ಅವರ ಕುಮ್ಮಕ್ಕಿನಿಂದ ದೂರು ನೀಡಿದ್ದಾಗಿ ವಕೀಲರು ಹೇಳಿದ್ದರು.
ಈ ಕುರಿತು ಮಾತನಾಡಿರುವ ರಾಜೇಗೌಡ, ನಾನು ಕಾನೂನು ಪ್ರಕಾರವೇ ಆಸ್ತಿ ಖರೀದಿ ಮಾಡಿದ್ದೇನೆ. ಆ ತೋಟ ಕೇವಲ 14 ರಿಂದ 15 ಕೋಟಿ ರೂ. ಬೆಲೆಬಾಳುತ್ತದೆ. ಆದರೆ 270 ಕೋಟಿ ರೂ. ಕೊಟ್ಟು ಆಸ್ತಿ ಖರೀದಿ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ. 15 ಕೋಟಿ ರೂ. ಮತ್ತು 270 ಕೋಟಿ ರೂ.ಗೂ ವ್ಯತ್ಯಾಸ ಗೊತ್ತಿಲ್ವಾ? ಬುದ್ಧಿ ಇಲ್ವಾ? ಎಂದು ವಾಗ್ದಾಳಿ ನಡೆಸಿದರು.
ಸರ್ಕಾರಕ್ಕೆ ನಾನು 80 ಕೋಟಿ ರೂ. ನಷ್ಟ ಮಾಡಿದ್ದೀನಿ ಎಂದು ಹೇಳಿದ್ದಾರೆ. ಇದನ್ನು ನಾನು ಇಲ್ಲಿಗೇ ಸುಮ್ಮನೆ ಬಿಡುವುದಿಲ್ಲ. ನಾನು ನಂಬುವ ಧರ್ಮಸ್ಥಳಕ್ಕೆ ಹೋಗಿ ಕೈ ಮುಗಿಯುತ್ತೇನೆ. ನಾನು ಅನ್ಯಾಯ ಮಾಡಿದ್ದರೆ ನನಗೆ ತೊಂದರೆಯಾಗಲಿ. ಇಲ್ಲದಿದ್ದರೆ ನನ್ನ ಬಗ್ಗೆ ಅಪಪ್ರಚಾರ ಮಾಡಿದವರಿಗೆ ದೇವರೇ ನೋಡಿಕೊಳ್ಳಲಿ.
ತಾಕತ್ತಿದ್ದರೆ ಶೃಂಗೇರಿ ಶಾರದಾಂಬೆ, ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಬನ್ನಿ. ನೀವೇ ನಿಗದಿ ಮಾಡಿದ ದಿನಾಂಕ, ಸಮಯದಂದು ನಾನು ಬರಲು ಸಿದ್ಧನಿದ್ದೇನೆ. ನಾನು ಪ್ರಮಾಣ ಮಾಡುತ್ತೇನೆ ನೀವು ಕೂಡ ಪ್ರಮಾಣ ಮಾಡಿ ಎಂದು ರಾಜೇಗೌಡ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | ಶೃಂಗೇರಿ ಶಾಸಕರ ವಿರುದ್ಧದ ಪ್ರಕರಣ ವಾಪಸ್: ಡಿ.ಎನ್. ಜೀವರಾಜ್ ದಾರಿತಪ್ಪಿಸಿದ್ದರು ಎಂದ ವಕೀಲ