ಚಿಕ್ಕಮಗಳೂರು: ಅಯೋಧ್ಯೆಯ ಶ್ರೀ ರಾಮ ಮಂದಿರ (Rama Mandir) ಉದ್ಘಾಟನೆ ಕಾರ್ಯಕ್ರಮವನ್ನು ಶೃಂಗೇರಿ ಶಾರದಾ ಪೀಠ (Shringeri matt) ಬಹಿಷ್ಕರಿಸಿದೆ ಎಂಬ ವರದಿಗಳನ್ನು ಶೃಂಗೇರಿ ಶ್ರೀಗಳು ತಳ್ಳಿ ಹಾಕಿದ್ದಾರೆ. ಶೃಂಗೇರಿ ಪೀಠದ ಆಡಳಿತ ಮಂಡಳಿಯು ಶ್ರೀಗಳು ಹಾಗೂ ಆಡಳಿತ ಅಧಿಕಾರಿ ಗೌರಿ ಶಂಕರ್ (Administrator Gowrishankar) ಅವರ ಹೆಸರಿನಲ್ಲಿ ಬಹಿರಂಗ ಪತ್ರವೊಂದನ್ನು ಪ್ರಕಟಿಸಿದ್ದು, ಇದರಲ್ಲಿ ಮಠದ ವತಿಯಿಂದ ಬಹಿಷ್ಕಾರ ಹಾಕಲಾಗಿದೆ ಎಂಬುದು ಅಪಪ್ರಚಾರ ಎಂದು ತಿಳಿಸಲಾಗಿದೆ. ಶೃಂಗೇರಿ ಶ್ರೀಗಳ ಭಾವಚಿತ್ರ, ಹೆಸರು ಬಳಸಿ ಅಪಪ್ರಚಾರ ಮಾಡಲಾಗುತ್ತಿದೆ. ಇದು ನಿಜವಲ್ಲ ಎಂದು ಮಠದ ವತಿಯಿಂದ ಸ್ಪಷ್ಟನೆ ನೀಡಲಾಗಿದೆ.
ಜಾಲತಾಣದಲ್ಲಿ ಏನು ಪ್ರಚಾರ ಮಾಡಲಾಗಿತ್ತು?
WWW.jainikajagaran.com ಎಂಬ ಸಾಮಾಜಿಕ ಜಾಲತಾಣದಲ್ಲಿ ಶೃಂಗೇರಿ ಮಠವು ಅಯೋಧ್ಯೆಯ ಪವಿತ್ರ ಪ್ರಾಣ ಪ್ರತಿಷ್ಠಾಪನ ಮಹೋತ್ಸವವನ್ನು ವಿರೋಧಿಸುತ್ತಿದೆ ಎಂದು ಪ್ರಚಾರ ಮಾಡಲಾಗಿತ್ತು. ಶೃಂಗೇರಿ ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳ ಹೆಸರಲ್ಲಿ ಈ ಹೇಳಿಕೆಯನ್ನು ನೀಡಲಾಗಿತ್ತು. ಅದಕ್ಕೆ ಕಿರಿಯ ಶ್ರೀಗಳು ಮತ್ತು ಮಠದ ಆಡಳಿತಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ವಿರೋಧಿಸುವಂತೆ ಶ್ರೀಗಳು ಕರೆ ನೀಡಿದ್ದಾರೆ ಎಂಬುದು ಸುಳ್ಳು ಮಾಹಿತಿ. ಪ್ರತಿಯೊಬ್ಬರು ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಶ್ರೀರಾಮ ತಾರಕ ಜಪ ಮಂತ್ರ ಪಠಿಸುವಂತೆ ಶೃಂಗೇರಿ ಶ್ರೀಗಳು ಆಗಲೇ ಕರೆ ನೀಡಿದ್ದಾರೆ. ಹೀಗಾಗಿ ಯಾವುದೇ ಅಪಪ್ರಚಾರಗಳಿಗೆ ಕಿವಿ ಕೊಡಬಾರದು ಎಂದು ಪೀಠ ಮನವಿ ಮಾಡಿದೆ.
ಬಹಿರಂಗಪತ್ರದಲ್ಲಿ ಏನಿದೆ?
ಆಸ್ತಿಕಜನರೆಲ್ಲರ ಗಮನಕ್ಕೆ ಒಂದು ಮುಖ್ಯವಾದ ವಿಷಯ. ಸುಮಾರು ಐದುನೂರು ವರ್ಷಗಳ ಸುದೀರ್ಘವಾದ ಹೋರಾಟದ ನಂತರ ಶ್ರೀರಾಮಚಂದ್ರನ ಕ್ಷೇತ್ರವಾದ ಪವಿತ್ರ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನಿಗೆ ಭವ್ಯವಾದ ದೇವಸ್ಥಾನದ ನಿರ್ಮಾಣವು ಇದೇ ಶೋಭಕೃತ್ ಪುಷ್ಯ ಶುಕ್ಲದ್ವಾದಶಿ (22-1-2024) .ಸೋಮವಾರದಂದು ಪ್ರಾಣಪ್ರತಿಷ್ಠಾ ಮಹೋತ್ಸವವು ಅತ್ಯಂತ ವೈಭವೋಪೇತವಾಗಿ ಸಂಪನ್ನಗೊಳ್ಳಲಿದೆ. ಈ ವಿಷಯವು ಸಮಸ್ತ ಆಸ್ತಿಕಸ್ತೋಮಕ್ಕೂ ಅತ್ಯಂತಾನಂದದಾಯಕವಾಗಿದೆ.
ಆದರೆ ಇಂತಹ ಸಂದರ್ಭದಲ್ಲಿ ಕೆಲವರು ಧರ್ಮದ್ವೇಷಿಗಳು ಸಾಮಾಜಿಕ ಜಾಲತಾಣದಲ್ಲಿ “www.dainikjagran.com ಎಂಬ ಹೆಸರನ್ನು ಉಪಯೋಗಿಸಿಕೊಂಡು ಶೃಂಗೇರಿ ಶಾರದಾಪೀಠದ ಪ್ರಸ್ತುತ ಅಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಛಾಯಾಚಿತ್ರದ ಜೊತೆಗೆ ಶ್ರೀಗಳು ಈ ಪವಿತ್ರಪ್ರಾಣಪ್ರತಿಷ್ಠಾ ಮಹೋತ್ಸವವನ್ನು ವಿರೋಧಿಸುತ್ತಿದ್ದಾರೆ ಎಂಬ ಅರ್ಥವು ಬರುವ ಹಾಗೆ ಸಂದೇಶವನ್ನು ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಜಗದ್ಗುರು ಶ್ರೀಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರು ಇಂತಹ ಯಾವುದೇ ಸಂದೇಶವನ್ನು ನೀಡಿರುವುದಿಲ್ಲ. ಇದು ಕೇವಲ ಧರ್ಮದ್ವೇಷಿಗಳಾದ ಕೆಲವರು ಮಾಡುತ್ತಿರುವ ಮಿಥ್ಯಾಪ್ರಚಾರವೇ ಸರಿ. ಆದ್ದರಿಂದ ಆಸ್ತಿಕಮಹಾಜನರು ಯಾವುದೇ ಕಾರಣಕ್ಕೆ ಇಂತಹ ಅಪಪ್ರಚಾರಗಳಿಗೆ ಬೆಲೆಯನ್ನು ಕೊಡಬಾರದು. ಹಾಗೆಯೇ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಅಧಿಕೃತವಾದ www.sringeri.net ಎಂಬ ವೆಬ್‌ಸೈಟಿನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ವಿಷಯಗಳನ್ನು ಮಾತ್ರವೇ ಪ್ರಾಮಾಣಿಕವಾಗಿ ಪರಿಗಣಿಸಬೇಕೆಂದು ಈ ಮೂಲಕ ನಿವೇದಿಸುತ್ತಿದ್ದೇವೆ.
“sharadapeetham” ಯೂಟ್ಯೂಬ್ ಚ್ಯಾನೆಲ್ ಮೂಲಕ ಕಳೆದ ದೀಪಾವಳಿಯ (12-11-2023) ಸಂದರ್ಭದಲ್ಲಿ ಈ ಪವಿತ್ರ ಪ್ರಾಣಪ್ರತಿಷ್ಠಾ ಮಹೋತ್ಸವವನ್ನು ಮನಸ್ಸಿನಲ್ಲಿಟ್ಟುಕೊಂಡು ಶ್ರೀರಾಮತಾರಕ ಮಹಾಮಂತ್ರವನ್ನು ಜಪಿಸುವಂತೆ ಎಲ್ಲಾ ಆಸ್ತಿಕರಿಗೂ ಶೃಂಗೇರಿ ಜಗದ್ಗುರುಗಳು ಸಂದೇಶವನ್ನು ನೀಡಿದ್ದರು. ಅದನ್ನನುಸರಿಸಿ ಆಸ್ತಿಕರು ಅತ್ಯಧಿಕ ಸಂಖ್ಯೆಯಲ್ಲಿ ಮಂತ್ರಜಪವನ್ನು ಮಾಡುತ್ತಿರುವುದು ಈ ಸಂದರ್ಭದಲ್ಲಿ ಗಮನಾರ್ಹವಾಗಿದೆ.
ಹಾಗೆಯೇ ಅತ್ಯಂತ ಪವಿತ್ರವೂ ಅಪರೂಪವು ಆದ ಈ ಪ್ರಾಣಪ್ರತಿಷ್ಠಾಮಹೋತ್ಸವದ ಸುಸಂದರ್ಭದಲ್ಲಿ ಎಲ್ಲಾ ಆಸ್ತಿಕರು ಯಥಾಯೋಗ್ಯವಾಗಿ ಭಾಗವಹಿಸಿ ಶ್ರೀರಾಮನ ಪರಿಪೂರ್ಣಕೃಪೆಗೆ ಪಾತ್ರರಾಗಿ ಕೃತಾರ್ಥರಾಗಬೇಕೆಂದು ಜಗದ್ಗುರು ಮಹಾಸ್ವಾಮಿಗಳವರು ಆಶೀರ್ವದಿಸಿದ್ದಾರೆ- ಇದು ಬಹಿರಂಗ ಪತ್ರದಲ್ಲಿರುವ ಮಾಹಿತಿ.
ಇತರ ಶಂಕರ ಮಠಗಳಿಂದ ಬಹಿಷ್ಕಾರ
ಈ ನಡುವೆ, ಪುರಿ ಗೋವರ್ಧನ ಮಠ ಹಾಗೂ ಉತ್ತರಾಖಂಡದ ಜ್ಯೋತಿರ್ ಮಠವು ಈ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ನೇರವಾಗಿ ಘೋಷಣೆ ಮಾಡಿವೆ. ಉತ್ತರಾಖಂಡ ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ದೇಶದ ಯಾವುದೇ ಪ್ರಮುಖ ಶಂಕರಾಚಾರ್ಯ ಮಠಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ದೇಶದಲ್ಲಿ ಈಗ ಶಂಕರಾಚಾರ್ಯ ಪರಂಪರೆಯ ನಾಲ್ಕು ಪ್ರಮುಖ ಮಠಗಳಿವೆ. ಉತ್ತರಾಖಂಡದ ಜ್ಯೋತಿರ್ಮಠ, ಪುರಿಯ ಗೋವರ್ಧನ ಮಠ, ಶೃಂಗೇರಿಯ ಶಾರದಾ ಪೀಠ ಮತ್ತು ಗುಜರಾತ್‌ನ ದ್ವಾರಕೆಯ ದ್ವಾರಕಾ ಶಾರದಾ ಪೀಠಗಳು ಪ್ರಮುಖವಾಗಿವೆ. ಅವುಗಳ ಪೈಕಿ ಎರಡು ಪೀಠಗಳು ಈಗ ರಾಮ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದು ಪ್ರಕಟಿಸಿವೆ.
22 जनवरी के प्रतिष्ठा के पूर्व रामानन्द सम्प्रदाय को मन्दिर सौंपे रामजन्मभूमि तीर्थ क्षेत्र ट्रस्ट –
— 1008.Guru (@jyotirmathah) January 9, 2024
रामजन्मभूमि तीर्थ क्षेत्र ट्रस्ट के महासचिव चंपतराय जी के इस बयान पर पूज्यपाद ज्योतिष्पीठाधीश्वर जगद्गुरु शंकराचार्य स्वामिश्रीः अविमुक्तेश्वरानंदः सरस्वती '१००८' की प्रतिक्रिया… pic.twitter.com/h0IqLN8wFe