Site icon Vistara News

Chikkamagaluru News : ಚಿಕ್ಕಮಗಳೂರಲ್ಲಿ ಡೆಂಗ್ಯುಗೆ ವಿದ್ಯಾರ್ಥಿನಿ ಬಲಿ; ಮತ್ತೊಂದು ಕೆಎಫ್‌ಡಿ ಪತ್ತೆ

Student dies of dengue in Chikmagalur Another KFD detected

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಡೆಂಗ್ಯೂಗೆ (Dengue Case) ಮೊದಲ ಬಲಿಯಾಗಿದೆ. ಚಿಕ್ಕಮಗಳೂರು ನಗರದಲ್ಲಿ ಡೆಂಗ್ಯೂ ಪ್ರಕರಣಗಳು (Chikkamagaluru News) ಹೆಚ್ಚು ಪತ್ತೆಯಾಗುತ್ತಿದ್ದು, ಕಾಲೇಜು ವಿದ್ಯಾರ್ಥಿನಿ ಡೆಂಗ್ಯು ಜ್ವರದಿಂದ ಮೃತಪಟ್ಟಿದ್ದಾರೆ. ಸಹರಾ ಬಾನು (18) ಡೆಂಗ್ಯೂಗೆ ಬಲಿಯಾದ ವಿದ್ಯಾರ್ಥಿನಿ.

ಚಿಕ್ಕಮಗಳೂರು ನಗರದ ಮಹಮ್ಮದ್ ಖಾನ್ ಗಲ್ಲಿ ನಿವಾಸಿಯಾದ ಸಹರಾ ಡೆಂಗ್ಯು ಕಾರಣಕ್ಕೆ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ 18 ವರ್ಷದ ಸಹರಾ ಬಾನು ಮೃತಪಟ್ಟಿದ್ದಾಳೆ. ಈ ವರ್ಷದಲ್ಲಿ ಚಿಕ್ಕಮಗಳೂರಲ್ಲಿ ಇದು ಮೊದಲ ಸಾವಾಗಿದೆ.

ಇದನ್ನೂ ಓದಿ: Food Poisoning: ತುಮಕೂರು, ಮಂಗಳೂರಲ್ಲಿ ಫುಡ್‌ ಪಾಯಿಸನ್‌; ಶಿಕ್ಷಕರು-ವಿದ್ಯಾರ್ಥಿಗಳಿಗೆ ವಾಂತಿ ಭೇದಿ

ಮತ್ತೊಂದು ಕೆಎಫ್‌ಡಿ ಪತ್ತೆ

ಕಳೆದ ವಾರ ಕೆಎಫ್‌ಡಿ (KFD) ಕಾಯಿಲೆಗೆ ಚಿಕ್ಕಮಗಳೂರಿನ ಶೃಂಗೇರಿಯ ವೃದ್ಧ ಮೃತಪಟ್ಟಿದ್ದರು. ಇದೀಗ ಮತ್ತೊಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಮತ್ತಷ್ಟು ಆತಂಕ ಹೆಚ್ಚಿದೆ. ರೆಡ್ ಝೋನ್‌ನಲ್ಲಿ ತಪಾಸಣೆ ನಡೆಸಿದಾಗ ಕೊಪ್ಪ ತಾಲೂಕಿನಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 9 ಪ್ರಕರಣಗಳಿದ್ದು, ಅದರಲ್ಲಿ ಒಂದು ಸಾವು, ನಾಲ್ವರು ಡಿಸಾರ್ಜ್‌ ಆಗಿದ್ದರೆ ಇಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ. ದಿನೇದಿನೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಅಲರ್ಟ್ ಆಗಿದೆ.

ಮಂಕಿ‌ ಪಾಕ್ಸ್ ಎಂದರೇನು?
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು, ಅದು ರೋಡಂಟ್ಸ್‌ ಮತ್ತು ಪ್ರೈಮೆಟ್‌ಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ ಮತ್ತು ಸಾಂದರ್ಭಿಕವಾಗಿ ಮನುಷ್ಯರಿಗೆ ಹರಡುತ್ತದೆ. ಈ ರೋಗ ಮನುಷ್ಯರಿಗೆ ಹರಡಿರುವ ಪ್ರಕರಣಗಳು, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡು ಬಂದಿದ್ದು, ಅಲ್ಲಿ ಮಂಕಿಪಾಕ್ಸ್ ಸಾಮಾನ್ಯವಾಗಿದೆ ಎನ್ನಲಾಗುತ್ತಿದೆ.

ಇದು ಹೇಗೆ ಹರಡುತ್ತದೆ?
ಮಂಕಿ ಪಾಕ್ಸ್ ಸಾಮಾನ್ಯವಾಗಿ ವ್ಯಕ್ತಿಯು ಸೋಂಕಿತ ಪ್ರಾಣಿಯ ಸಂಪರ್ಕಕ್ಕೆ ಬಂದರೆ, ಅಂದರೆ ಸೋಂಕಿತ ಪ್ರಾಣಿ ಉಗುರಿನಿಂದ ಪರಚಿದರೆ, ಅದರ ಗಾಯದಿಂದ ಸೋರುತ್ತಿರುವ ನೀರು ಅಥವಾ ದ್ರವ ಮನುಷ್ಯನ ಚರ್ಮದ ಮೇಲೆ ಬಿದ್ದರೆ ಅಥವಾ ಸೋಂಕಿತ ಪ್ರಾಣಿ ಮನುಷ್ಯನನ್ನು ಕಚ್ಚಿದರೆ, ಹೀಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಕ್ಕೆ ಬರುವ ಮನುಷ್ಯನಿಗೆ ಅಂಟಿಕೊಳ್ಳುತ್ತದೆ.

ಮಂಕಿ ಪಾಕ್ಸ್ ಕಾಯಿಲೆಯ ಸೂಚನೆಗಳು ಮತ್ತು ರೋಗಲಕ್ಷಣಗಳು
ಜ್ವರ, ಮೈ ಕೈ ನೋವು, ತಲೆ ನೋವು, ಬೆನ್ನು ನೋವು, ಮೈ ನಡುಗುವುದು, ವಿಪರೀತ ದೈಹಿಕ ಆಯಾಸ, ದುಗ್ಧರಸ ಗ್ರಂಥಿಗಳು ಊದಿಕೊಂಡಿರುವುದು ಇತ್ಯಾದಿ. ಈ ಮೇಲಿನ ಎಲ್ಲ ರೋಗಲಕ್ಷಣಗಳು ಒಬ್ಬ ವ್ಯಕ್ತಿಯಲ್ಲಿ ಕಂಡು ಬಂದ ನಂತರದಲ್ಲಿ ಮುಖದ ಮೇಲೆ ಇದ್ದಕ್ಕಿದ್ದಂತೆ ದದ್ದುಗಳು ಉಂಟಾಗಲು ಪ್ರಾರಂಭವಾಗಿ ಕ್ರಮೇಣವಾಗಿ ಮೈ ತುಂಬ ಹರಡುತ್ತವೆ. ಮೊದಲಿಗೆ ಯಾವುದೇ ಬಣ್ಣದಿಂದ ಕೂಡಿಲ್ಲದ ಹಾಗೆ ಕಂಡು ಬರುವ ದದ್ದುಗಳು ಆನಂತರದಲ್ಲಿ ಗಟ್ಟಿಯಾಗುತ್ತವೆ, ದಪ್ಪ ಆಗುತ್ತವೆ ಜತೆಗೆ ಅವುಗಳಲ್ಲಿ ನೀರು ಸಹ ತುಂಬಿಕೊಳ್ಳುತ್ತದೆ. ಕೆಲವೊಮ್ಮೆ ಕೀವು ಸಹ ತುಂಬಿಕೊಳ್ಳುತ್ತದೆ.

ಒಂದೇ ತಿಂಗಳಲ್ಲಿ 49 ಪ್ರಕರಣಗಳು ಪತ್ತೆ

ರಾಜ್ಯದಲ್ಲಿ ಕೆಎಫ್‌ಡಿ ಪೀಡಿತ 12 ಜಿಲ್ಲೆಗಳಿದ್ದು, ಈ ವರ್ಷದಲ್ಲಿ ಮೂರು ಜಿಲ್ಲೆಗಳಲ್ಲಿ ಮಾತ್ರ ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. ಜನವರಿ 1ರಿಂದ ಫೆ. 2ರವರೆಗೆ ರಾಜ್ಯದಲ್ಲಿ 2,288 ಕೆಎಫ್‌ಡಿ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಶಿವಮೊಗ್ಗದಲ್ಲಿ 12, ಉತ್ತರ ಕನ್ನಡ 34 ಹಾಗೂ ಚಿಕ್ಕಮಗಳೂರಲ್ಲಿ 3 ಪ್ರಕರಣಗಳು ವರದಿಯಾಗಿವೆ. ಒಟ್ಟು 49 ಮಂದಿಯಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದ್ದು, ಈ ಪೈಕಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ತಲಾ 1 ಸಾವಾಗಿದೆ.

ಕಾಡಿಗೆ ಹೋಗುವ ಮುನ್ನ DEPA ತೈಲ ಲೇಪಿಸಿ

ರೋಗ ಲಕ್ಷಣ ಕಂಡು ಬಂದಾಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವಂತೆ ಆರೋಗ್ಯ ಇಲಾಖೆ ಆಯುಕ್ತ ರಣದೀಪ್‌ ಮನವಿ ಮಾಡಿದ್ದಾರೆ. ಮಲೆನಾಡು ಸುತ್ತಮುತ್ತ ಮಂಗನ ಕಾಯಿಲೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಆಯುಕ್ತ ರಣದೀಪ್‌ ಶಿವಮೊಗ್ಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಖ್ಯವಾಗಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರಿನ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಕೆಎಫ್‌ಡಿ ರೋಗ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತಾಗಿ ಪರಿಶೀಲನೆ ನಡೆಸಿದರು.

ಯಾರಿಗಾದರೂ ರೋಗ ಲಕ್ಷಣ ಕಂಡು ಬಂದರೆ ಕೂಡಲೇ ರಕ್ತ ಮಾದರಿಯನ್ನು ಪಡೆದು ಕೆಎಫ್‌ಡಿ ಪರೀಕ್ಷೆಗೆ ಕಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಗ್ರಾಮದ ಜನರು ಕಾಡಿಗೆ ಹೋಗುವ ಮುನ್ನ ಇಲಾಖೆಯ ಮುಖೇನ ಉಚಿತವಾಗಿ ನೀಡಲಾಗುತ್ತಿರುವ DEPA ತೈಲವನ್ನು ಲೇಪಿಸಿಕೊಂಡು ಹೋಗಲು ಸೂಚಿಸಲಾಗಿದೆ.

ಕೆಎಫ್‌ಡಿ ಪಾಸಿಟಿವ್‌ ಪ್ರಕರಣಗಳಿಗೆ ಎ.ಬಿ.ಏ.ಆರ್‌.ಕೆ ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಪಾಸಿಟಿವ್‌ ಪ್ರಕರಣಗಳು ಪತ್ತೆಯಾದ ತಕ್ಷಣವೇ ಆಸ್ಪತ್ರೆಗೆ ದಾಖಲಿಸುವುದು ಕಡ್ಡಾಯ ಮಾಡಲಾಗಿದೆ. ಇನ್ನೂ ಈಗಾಗಲೇ ಜೆಸಿಎಚ್‌ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ ಕೆಎಫ್‌ಡಿಗೆ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಸಲಾಗಿದೆ. ಇನ್ನೂ ಕೆಎಂಸಿ ಮಣಿಪಾಲ, ಎಸ್‌ಐಎಂಸಿ ಶಿವಮೊಗ್ಗ, ಕೆಆರ್‌ಐಎಂಎಸ್‌ ಕಾರವಾರ ಆಸ್ಪತ್ರೆಗಳನ್ನು ರೆಫರಲ್‌ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ. ಇಲ್ಲಿಯೂ ಸಹ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version