ಚಿಕ್ಕಮಗಳೂರು: ತನ್ನ ಹಿಂಡಿನಿಂದ ತಪ್ಪಿಸಿಕೊಂಡಿರುವ ಕಾಡಾನೆ ಮರಿಯೊಂದು (elephant cub) ಕಾಫಿ ತೋಟದಲ್ಲಿ ದಾರಿ ತಿಳಿಯದೆ ಪೇಚಾಡುತ್ತಿದೆ. ಈ ಅಸಹಾಯಕ ಆನೆಮರಿ ಮನುಷ್ಯರು ಹೇಳಿದಂತೆ ಕೇಳುತ್ತಿರುವುದು (viral video) ಕಂಡುಬರುತ್ತಿದೆ.
ಮೂಡಿಗೆರೆ-ಬೇಲೂರು ರಸ್ತೆಯ ಚೀಕನಹಳ್ಳಿ ಬಳಿ ಕಾಫಿತೋಟದಲ್ಲಿ ಈ ಮರಿ ಇದೆ. ಮನುಷ್ಯರು ಬಾ ಅಂದ್ರೆ ಹತ್ತಿರ ಬರುತ್ತದೆ. ಹೋಗು ಅಂದರೆ ದೂರ ಹೋಗುತ್ತದೆ. ಹೇಳಿದ ಮಾತನ್ನು ಮಕ್ಕಳಂತೆ ಕೇಳುವ ಈ ಕಾಡಾನೆ ಮರಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಅಮ್ಮನಿಗಾಗಿ ಪರಿತಪಿಸುತ್ತಿರುವುದು ಮನ ಕಲಕುವಂತಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ- ಸಕಲೇಶಪುರ ಗಡಿಯಲ್ಲಿ ದೊಡ್ಡದೊಂದು ಕಾಡಾನೆ ಹಿಂಡು ಇದ್ದು, ಆ ತಂಡದ ಮರಿ ಇರಬಹುದು ಎಂದು ಅರಣ್ಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾಫಿ ತೋಟಕ್ಕೆ ನುಗ್ಗಿದ ಆನೆ ಹಿಂಡನ್ನು ಓಡಿಸುವಾಗ ಈ ಮರಿ ತಪ್ಪಿಸಿಕೊಂಡಿರಬಹುದು ಎನ್ನಲಾಗಿದೆ. ದಿಕ್ಕು ತೋಚದೆ ಕಾಫಿತೋಟದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ ಈ ಆನೆ ಮರಿಗೆ ನೀರು ನೀಡಿ ಅರಣ್ಯ ಅಧಿಕಾರಿಗಳು ಸಂತೈಸಿದ್ದಾರೆ.
ಮರಿ ಆನೆಯನ್ನು ಅದರ ಅಮ್ಮನ ಬಳಿ ಸೇರಿಸಲು ಅರಣ್ಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಸಾಮಾನ್ಯವಾಗಿ ಗುಂಪಿನಿಂದ ಬೇರ್ಪಟ್ಟ ಮರಿಯನ್ನು ಆನೆಗಳ ಗುಂಪು ನಂತರ ಹತ್ತಿರ ಸೇರಿಸುವುದಿಲ್ಲ. ಆನೆಗಳ ಗುಂಪು ಮರಿಯನ್ನು ಬಿಟ್ಟು ಎಲ್ಲಿಗೆ ಹೋಗಿದೆ ಎಂದು ತಿಳಿದಿಲ್ಲ. ಶತಾಯಗತಾಯ ಮರಿಯನ್ನು ಅಮ್ಮನ ಬಳಿ ಸೇರಿಸಬೇಕು ಎಂದು ಅಧಿಕಾರಿಗಳು ಯತ್ನಿಸಿದ್ದಾರೆ.
ಇದನ್ನೂ ಓದಿ: Elephant attack | ಮದವೇರಿದ ಕಾಡಾನೆ ದಾಳಿಯಿಂದ ಸಾಕಾನೆಗೆ ಗಾಯ: ದುಬಾರೆ ಆನೆ ಶಿಬಿರಕ್ಕೆ ಪ್ರವೇಶ ನಿರ್ಬಂಧ