ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯಲ್ಲಿ ನಿರಂತರ ಮಳೆ ಜನರಿಗೆ ನರಕವನ್ನೆ ಸೃಷ್ಟಿಸಿದೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿದಿದ್ದರಿಂದ(Rain News) ಜನ ಜೀವನ ಅಸ್ತವ್ಯಸ್ತವಾಗಿದೆ. ಸತತ ಮಳೆಯಿಂದ ನೀರು ರಸ್ತೆಗಳು, ಮನೆಗಳು ಜಲಾವೃತವಾಗಿವೆ.
ಭಾರಿ ಮಳೆಗೆ ಗೋಕಾಕ್ ತಾಲೂಕಿನಲ್ಲಿರುವ ಗೋಕಾಕ್ ಫಾಲ್ಸ್‌ನ ಬಳಿಯ ಗುಡ್ಡ ರಸ್ತೆ ಮೇಲೆ ಕುಸಿದಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಬಳಿಕ ರಸ್ತೆ ಮೇಲೆ ಬಿದ್ದಿರುವ ಗುಡ್ಡದ ಮಣ್ಣನ್ನು ತೆರವುಗೊಳಿಸಲಾಯಿತು. ಗೋಕಾಕ್ ಫಾಲ್ಸ್ ಬಳಿಯ ಗಾಂಧಿ ಪ್ರತಿಮೆ ಬಳಿ ಬೆಟ್ಟದಿಂದ ಅಪಾರ ಪ್ರಮಾಣದ ನೀರು ಧುಮುಕುತ್ತಿದ್ದು, ಗೋಕಾಕ್ ಹಾಗೂ ಫಾಲ್ಸ್ ಬಳಿಯ ಜನರಲ್ಲಿ ಆತಂಕ ಮೂಡಿಸಿದೆ.
ಸತತ ಒಂದು ಗಂಟೆಯ ಮಳೆಗೆ ಗೋಕಾಕ್ ತಾಲೂಕಿನ ಜನ ತತ್ತರಿಸಿದ್ದಾರೆ. ಮಾಣಿಕವಾಡಿ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಗಿದೆ. ಮನೆಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, ಮಳೆ ನೀರು ಹೊರಹಾಕುವುದರಲ್ಲಿ ಗ್ರಾಮದ ಜನ ತೊಡಗಿದ್ದಾರೆ.
ಒಂದೇ ಗಂಟೆಯ ಮಳೆಗೆ ರಸ್ತೆಗಳೂ ಸಂಪೂರ್ಣ ಹಾಳಾಗಿದ್ದು, ಬೈಕ್ ಹಾಗೂ ಕಾರು ಚಲಾಯಿಸಲು ಸವಾರರು ಪರದಾಡುವಂತಾಗಿದೆ. ಚರಂಡಿ ಅವ್ಯವಸ್ಥೆಯಿಂದ ಮನೆಗೆ ನೀರು ನುಗ್ಗಿದೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Bengaluru Rain | ಮುಳುಗಡೆಯಾದ ಬೆಂಗಳೂರು: ದೇಶದ ರಾಜಧಾನಿವರೆಗೂ ಚರ್ಚೆ