ಬೆಂಗಳೂರು: ಸಾವು ಬದುಕಿನ ಹೋರಾಟದಲ್ಲಿದ್ದ (Life and death) ಪುಟ್ಟ ಮಗುವಿನ ಬಗೆಗೆ ಕರುಣೆ ತೋರದೆ, ಬೆಡ್ ಇಲ್ಲ ಎಂದು ನಿರ್ಲಕ್ಷ್ಯ ತೋರಿದ ನಿಮ್ಹಾನ್ಸ್ ಆಸ್ಪತ್ರೆ (Nimhans Hospital) ವಿರುದ್ಧ ಪೋಷಕರು ಸಿಡಿದೆದಿದ್ದಾರೆ. ಮಗುವಿನ ಸಾವಿಗೆ ನಿಮ್ಹಾನ್ಸ್ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿ ಕುಟುಂಬಸ್ಥರು ಜಸ್ಟಿಸ್ ಫಾರ್ ಅಜಯ್ ಎಂಬ ಟ್ಯಾಗ್ ಲೈನ್ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.
ನಿಮ್ಹಾನ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಮಾತ್ರವಲ್ಲದೆ ಆಂಬ್ಯುಲೆನ್ಸ್ ಚಾಲಕರು ಸಾಥ್ ನೀಡಿದ್ದಾರೆ. ಘಟನೆ ಸಂಬಂಧ ಪ್ರತಿಕ್ರಿಯಿಸಿದ ಆಂಬ್ಯುಲೆನ್ಸ್ ಚಾಲಕ ಮಧು, ನಿನ್ನೆ ಬುಧವಾರ ಜೀರೋ ಟ್ರಾಫಿಕ್ ಮೂಲಕ ಮಧ್ಯಾಹ್ನ 1.45ಕ್ಕೆ ನಿಮ್ಹಾನ್ಸ್ ಆಸ್ಪತ್ರೆಗೆ ಬಂದಿದ್ದೇನೆ. ಮೊದಲೇ ಆಸ್ಪತ್ರೆಗೆ ಮಾಹಿತಿ ನೀಡಿದ್ದೇನೆ. ಆಸ್ಪತ್ರೆಗೆ ಬಂದ ನಂತರ ವೆಂಟಿಲೇಟರ್ ಬೆಡ್ ಇಲ್ಲ ಎಂದು ಮಲ್ಟಿ ಸ್ಪೆಷಲಾಟಿ ಆಸ್ಪತ್ರೆಗೆ ಹೋಗಿ ಎಂದು ಚೀಟಿ ಬರೆದುಕೊಟ್ಟರು.
ನಾವೆಲ್ಲರೂ ಗಲಾಟೆ ಮಾಡಿದ್ದಕ್ಕೆ ಬಂದು ಪರೀಕ್ಷೆ ಮಾಡಿದ್ದರು. ಬಳಿಕ ಬೆಡ್ ಹಾಗೂ ವೆಂಟಿಲೇಟರ್ ಇಲ್ಲ ಎಂದರು. ಮಗುವಿನ ತಂದೆಗೆ ಏನು ತಿಳಿದಿರಲಿಲ್ಲ. ಅವರ ಪರವಾಗಿ ನಾನು ಮಾತಾಡಿದ್ದಕ್ಕೆ ಹೊರಹೋಗುವಂತೆ ತಾಕೀತು ಮಾಡಿದರು. ಮಗುವಿಗೆ ಕೂಡಲೇ ಚಿಕಿತ್ಸೆಯನ್ನು ನೀಡಿದರೆ ಬದುಕುಳಿಯುವ ಸಾಧ್ಯತೆ ಇತ್ತು. ಆದರೆ ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ಆಕ್ರೋಶ ಹೊರಹಾಕಿದರು.
ಇನ್ನು ಪ್ರತಿಭಟನಾ ಸ್ಥಳಕ್ಕೆ ಸಚಿವರು ಬರಬೇಕು, ನಂತರವಷ್ಟೇ ಪ್ರತಿಭಟನೆಯನ್ನು ಕೈ ಬಿಡುವುದಾಗಿ ಎಚ್ಚರಿಸಿದರು. ನಿಮ್ಹಾನ್ಸ್ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದು, ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಇತ್ತ ಮಗುವಿನ ಮರಣೋತ್ತರ ಪರೀಕ್ಷೆ ವಿಳಂಬವಾಗುವ ಸಾಧ್ಯತೆ ಇದೆ. ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಬರುವವರೆಗೂ ಮರಣೋತ್ತರ ಪರೀಕ್ಷೆ ಮಾಡಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.
ಆಸ್ಪತ್ರೆಯ ವಾದವೇನು?
ಮಗು ಸಾವಿನ ಕುರಿತು ನಿಮ್ಹಾನ್ಸ್ ಆಸ್ಪತ್ರೆ ವೈದ್ಯರು ಪ್ರತಿಕ್ರಿಯಿಸಿದ್ದಾರೆ. ಇಡೀ ಆಸ್ಪತ್ರೆಯಲ್ಲಿ ಒಟ್ಟು 43 ವೆಂಟಿಲೇಟರ್ ಐಸಿಯು ಬೆಡ್ ಇದೆ. 16 ವೆಂಟಿಲೇಟರ್ ಬೆಡ್ಗಳು ತುರ್ತು ಚಿಕಿತ್ಸಾ ಘಟಕದಲ್ಲಿದ್ದು, ಉಳಿದ ಬೆಡ್ ಐಸಿಯುನಲ್ಲಿದೆ. ನಿತ್ಯ ವೆಂಟಿಲೇಟರ್ ಬೆಡ್ಗೆ 50 ರೋಗಿಗಳು ತುರ್ತು ಚಿಕಿತ್ಸೆಗೆ ಬರುತ್ತಾರೆ. ವೆಂಟಿಲೇಟರ್ ಬೆಡ್ಗಳ ಸಂಖ್ಯೆ ಹೆಚ್ಚಳ ಮಾಡುವುದು ತುರ್ತು ಅವಶ್ಯಕತೆ ಇದೆ. ಒಮ್ಮೆ ವೆಂಟಿಲೇಟರ್ ಬೆಡ್ಗೆ ದಾಖಲಾಗುವ ರೋಗಿಯನ್ನು ಕನಿಷ್ಠ ಪಕ್ಷ 24 ಗಂಟೆ ದಾಖಲು ಮಾಡಬೇಕಾಗುತ್ತದೆ ಎಂದರು.
ಹೃದಯಾಘಾತದಿಂದ ಮೃತಪಟ್ಟಿದ ಮಗು
ಮಗು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಹಾನ್ಸ್ ಆಸ್ಪತ್ರೆಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಆಗಿದೆ. ಮಗು ಆಸ್ಪತ್ರೆಗೆ ಬಂದಾಗ ತೀರಾ ಚಿಂತಾಜನಕ ಸ್ಥಿತಿಯಲ್ಲಿತ್ತು. ನಿನ್ನೆ ಮಧ್ಯಾಹ್ನ 12.45ಕ್ಕೆ ಹಾಸನ ಆಸ್ಪತ್ರೆಯಿಂದ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ನಂತರ 2.30ಕ್ಕೆ ನಿಮ್ಹಾನ್ಸ್ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ಮಗುವಿನ ಸ್ಥಿತಿ ಆಗಲೇ ಚಿಂತಾಜನಕವಾಗಿತ್ತು. ಮಗುವಿನ ತಲೆಗೆ ಗಂಭೀರ ಪೆಟ್ಟಾಗಿತ್ತು, ಆರೋಗ್ಯದಲ್ಲೂ ಏರುಪೇರು ಕಂಡು ಬಂದಿತ್ತು. ನಂತರ ಮಗುವನ್ನು ಸಿಟಿ ಬ್ರೈನ್ ಸ್ಕ್ಯಾನ್ ಮಾಡಿದಾಗ ಹಲವಾರು ದೋಷಗಳು ಕಂಡು ಬಂದಿತ್ತು. ನಿಮ್ಹಾನ್ಸ್ನಲ್ಲಿ ಬೆಡ್ ಇಲ್ಲ ಎಂದು ನಮ್ಮ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಅಷ್ಟರಲ್ಲಿ ಮಧ್ಯಾಹ್ನ 3 ಗಂಟೆಗೆ ಮಗುವಿಗೆ ಹೃದಯಾಘಾತವಾಗಿದೆ. ನಮ್ಮ ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೇ ಮಗು 04: 05 ಕ್ಕೆ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Fraud Case : ಬಿಟ್ಟೋದ ಗಂಡನ್ನ ಸೇರಿಸ್ತೀನಿ ಅಂತ FDA ಅಧಿಕಾರಿ ಮಹಿಳೆಗೆ ಲಕ್ಷ ಲಕ್ಷ ಮೋಸ!
ಏನಿದು ಘಟನೆ?
ಚಿಕ್ಕಮಗಳೂರಿನ ಬಸವನಗುಡಿ ನಿವಾಸಿ ವೆಂಕಟೇಶ್ ಹಾಗೂ ಜ್ಯೋತಿ ದಂಪತಿಯ ಒಂದುವರೆ ವರ್ಷದ ಮಗು ಮೇಲಿಂದ ಬಿದ್ದು ತಲೆಗೆ ಗಾಯವಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಈ ಮಗುವನ್ನು ನಿಮ್ಹಾನ್ ಆಸ್ಪತ್ರೆಗೆ ಸ್ಪಷ್ಟ ಮಾಹಿತಿ ನೀಡಿಯೇ ಹಾಸನದ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್ನಲ್ಲಿ ತರಲಾಗಿತ್ತು. ಆದರೆ, ಮಗು ನಿಮ್ಹಾನ್ಸ್ ಆಸ್ಪತ್ರೆ ತಲುಪಿ ಗಂಟೆಗಳು ಕಳೆದರೂ ಬೆಡ್ ನೀಡದೆ, ಚಿಕಿತ್ಸೆ ನೀಡದೆ ಅಂತಿಮವಾಗಿ ಮಗು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿ, ಇವರು ವೈದ್ಯರೋ, ರಕ್ಕಸರೋ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು.
ಚಿಕ್ಕಮಗಳೂರಿನ ಬಸವನಗುಡಿ ನಿವಾಸಿ ವೆಂಕಟೇಶ್ ಹಾಗೂ ಜ್ಯೋತಿ ಅವರ ಪುಟ್ಟ ಮಗು ಮಂಗಳವಾರ (ನ.28) ಆಟವಾಡುವಾಗ ಹತ್ತು ಅಡಿ ಎತ್ತರದಿಂದ ಕೆಳಗೆ ಬಿದ್ದಿತ್ತು. ಆಟವಾಡುವಾಗ ಮೆಟ್ಟಿಲಿನಿಂದ ಬಿದ್ದಿತ್ತು ಎಂದು ಕೆಲವರು ಹೇಳಿದರೆ, ತಾಯಿಯ ಕೈಯಿಂದಲೇ ಬಿದ್ದಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಹೀಗೆ ಬಿದ್ದಾಗ ಮಗುವಿನ ತಲೆಗೆ ಗಂಭೀರವಾದ ಗಾಯಗಳಾಗಿವೆ. ತಕ್ಷಣವೇ ಮಗುವನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗುವಿನ ಪರಿಸ್ಥಿತಿ ಗಂಭೀರವಾಗಿದ್ದರಿಂದ, ಅದರಲ್ಲೂ ತಲೆಗೆ ಗಾಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು.
ಹಾಸನ ಆಸ್ಪತ್ರೆಯ ವೈದ್ಯರು ನಿಮ್ಹಾನ್ಸ್ನ ವೈದ್ಯರು ಮತ್ತು ಆಡಳಿತ ವಿಭಾಗಕ್ಕೆ ಕರೆ ಮಾಡಿ ಮಗುವನ್ನು ಕರೆ ತರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ನಡುವೆ, ಹಾಸನ ಪೊಲೀಸರು ಮಗುವಿನ ರವಾನೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಕಳುಹಿಸಿದರು. ಹಾಸನದಿಂದ ಬೆಂಗಳೂರಿಗೆ ಕೇವಲ ಒಂದು ಗಂಟೆ 40 ನಿಮಿಷದಲ್ಲಿ ತಲುಪಿತ್ತು.
ಬೆಡ್ ಇಲ್ಲ, ಚಿಕಿತ್ಸೆಯೂ ಇಲ್ಲ!
ಆಂಬ್ಯುಲೆನ್ಸ್ ಏನೋ ಅತ್ಯಂತ ವೇಗವಾಗಿ ಮಗುವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ತಲುಪಿಸಿತು. ಆದರೆ, ಇಲ್ಲಿ ಬಂದು ಕೇಳಿದರೆ ಬೆಡ್ ಇಲ್ಲ ಎಂದು ಸಬೂಬು ಹೇಳಲಾಯಿತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ಕಂದಮ್ಮಗೆ ವೈದ್ಯರು ಚಿಕಿತ್ಸೆ ನೀಡಲೇ ಇಲ್ಲ.
ದಯವಿಟ್ಟು ಮಗುವಿಗೆ ಬೆಡ್ ಕೊಡಿ, ಚಿಕಿತ್ಸೆ ಶುರು ಮಾಡಿ ಎಂದು ಪೋಷಕರು ಎಷ್ಟೇ ಬೊಬ್ಬೆ ಹಾಕಿದರೂ, ಕಣ್ಣೀರು ಹಾಕಿದರೂ ಅವಕಾಶ ಸಿಗಲೇ ಇಲ್ಲ. ಬರುವ ಮೊದಲೇ ಮಾಹಿತಿ ನೀಡಿದ್ದರೂ ಬೆಡ್ ಖಾಲಿಯಿಲ್ಲ ಎಂದು ಆಸ್ಪತ್ರೆಯ ಆವರಣದಲ್ಲಿ ಆಂಬ್ಯುಲೆನ್ಸ್ನಲ್ಲೇ ಉಳಿಸಲಾಯಿತು. ಅಂತಿಮವಾಗಿ ಮಗು ಪ್ರಾಣವನ್ನೇ ಕಳೆದುಕೊಂಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ