ರಾಯಚೂರು: ಎಷ್ಟೇ ಕಾನೂನಿನ ಅರಿವು ಮೂಡಿಸಿದರೂ, ನೈತಿಕತೆಯ ಪಾಠ ಹೇಳಿದರೂ ಬಾಲ್ಯ ವಿವಾಹದ (Child Marriage) ಪಿಡುಗು ಮಾತ್ರ ನಿಂತಿಲ್ಲ. ಮಸ್ಕಿ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ೨ ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿದ್ದು, ೮ ವರ್ಷದ ಹಾಗೂ ೧೨ ವರ್ಷದ ಬಾಲಕಿಯರ ವಿವಾಹವನ್ನು ಕದ್ದು ಮುಚ್ಚಿ ನೆರವೇರಿಸಲಾಗಿದೆ.
ಗೊಲ್ಲರಹಟ್ಟಿ ಗ್ರಾಮದಲ್ಲಿ ಫೆಬ್ರವರಿ 2ರಂದೇ ವಿವಾಹ ನೆರವೇರಿದ್ದು, ತಡವಾಗಿ ಬೆಳಕಿಗೆ ಬಂದಿದೆ. 8 ವರ್ಷದ ಹಾಗೂ 12 ವರ್ಷ ವಯಸ್ಸಿನ ಮಕ್ಕಳಿಗೆ ವಿವಾಹ ಮಾಡುತ್ತಿರುವ ವಿಷಯ ಸ್ಥಳೀಯರಿಗೆ ಗೊತ್ತಾಗಿದೆ. ಈ ಬಗ್ಗೆ ಶೃತಿ ಸಂಸ್ಥೆಗೆ ಸ್ಥಳೀಯರೊಬ್ಬರು ದೂರವಾಣಿ ಕರೆ ಮಾಡಿ ವಿಷಯವನ್ನು ತಿಳಿಸಿದ್ದರು.
ಕರೆ ಆಧರಿಸಿ ಶೃತಿ ಸಂಸ್ಥೆಯ ಸದಸ್ಯರು ಗ್ರಾಮಕ್ಕೆ ಭೇಟಿ ನೀಡಿದ್ದರು. ಆದರೆ, ಅಷ್ಟರಲ್ಲಾಗಲೇ ಮದುವೆ ಕಾರ್ಯವನ್ನು ನೆರವೇರಿಸಲಾಗಿತ್ತು. ಪೋಷಕರು ತರಾತುರಿಯಲ್ಲಿ ವಿವಾಹವನ್ನು ನೆರವೇರಿಸಿದ್ದರು. ಮದುವೆ ಬಳಿಕ ಬಾಲಕಿಯರನ್ನು ದೂರದ ಊರಿಗೆ ಸ್ಥಳಾಂತರ ಮಾಡಿಬಿಟ್ಟಿದ್ದರು. ಇತ್ತ ಗೊಲ್ಲರಹಟ್ಟಿಗೆ ಬಂದ ಶೃತಿ ಸಂಸ್ಥೆ ಸದಸ್ಯರು ಮಕ್ಕಳನ್ನು ತೋರಿಸುವಂತೆ ಕೇಳಿದರು. ಆದರೆ, ಮೊದಲಿಗೆ ಪೋಷಕರು ಸಬೂಬು ಹೇಳಿದರು. ಆದರೂ ಪಟ್ಟುಬಿಡದಿದ್ದರಿಂದ ಕೆಲವು ಗಂಟೆಗಳ ಬಳಿಕ ಬೇರೆ ಊರಿನಿಂದ ಅವರನ್ನು ಕರೆತಂದರು.
ಇದನ್ನೂ ಓದಿ: Appu Namana | ಕರ್ನಾಟಕ ರತ್ನ ಕಾರ್ಯಕ್ರಮಕ್ಕೆ ಜನಸಾಗರ, ಮೋಡಿ ಮಾಡಿದ ವಿಜಯಪ್ರಕಾಶ್ ಗಾಯನ
ಬಾಲ ಮಂದಿರಕ್ಕೆ ಬಾಲಕಿಯರ ಶಿಫ್ಟ್
ಇಬ್ಬರು ಹೆಣ್ಣು ಮಕ್ಕಳು ಬಂದ ಬಳಿಕ ಅವರನ್ನು ಶೃತಿ ಸಂಸ್ಥೆಯ ಸದಸ್ಯರು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಆಪ್ತ ಸಮಾಲೋಚನೆ ಮಾಡಿ ಏನಾಗಿದೆ ಎಂಬ ಬಗ್ಗೆ ಕೇಳಿದ್ದಾರೆ. ಈ ವೇಳೆ ತಮಗೆ ವಿವಾಹವನ್ನು ಮಾಡಿರುವ ಬಗ್ಗೆ ಮಕ್ಕಳು ಬಾಯಿಬಿಟ್ಟಿದ್ದಾರೆ. ಮಕ್ಕಳ ಹೇಳಿಕೆ ಆಧರಿಸಿ ಅವರಿಬ್ಬರನ್ನೂ ಈಗ ಬಾಲ ಮಂದಿರಕ್ಕೆ ಸ್ಥಳಾಂತರ ಮಾಡಲಾಗಿದೆ. ಅಲ್ಲದೆ, ಪೋಷಕರಿಗೆ ಬುದ್ಧಿ ಹೇಳಲಾಗಿದೆ. ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈಗ ಪೊಲೀಸ್ ವಿಚಾರಣೆ ನಡೆಯುತ್ತಿದೆ.