ಬೆಂಗಳೂರು: ಮಕ್ಕಳಿಲ್ಲ ಎಂಬುದು ಎಷ್ಟು ಕೊರಗಿರುತ್ತದೋ, ಮಕ್ಕಳನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ಕೂಡ ಅಷ್ಟೇ ದುಖಃವಿರುತ್ತದೆ. ಮಗುವಿನ ಅಪಹರಣದ (Child theft) ಹಲವು ಕಥೆಗಳನ್ನು ನಾವು ಕೇಳಿರುತ್ತೇವೆ. ಕೆಲವರು ಹಣಕ್ಕಾಗಿ ಮಕ್ಕಳನ್ನು ಮಾರಾಟ ಮಾಡುವವರು ಇರುತ್ತಾರೆ, ಇನ್ನು ಕೆಲವರು ಒಂದು ಮಗು ಬೇಕೇಬೇಕು ಎಂದು ಅಡ್ಡದಾರಿ ಹಿಡಿಯುತ್ತಾರೆ. ಎರಡನೇ ಕಾರಣಕ್ಕಾಗಿ ಮಗು ಕದ್ದ ಹೆಣ್ಣುಮಗಳೊಬ್ಬಳ ಕಥೆ ಇದು,
ಇದೇ ತಿಂಗಳು ಏಪ್ರಿಲ್ 15 ರಂದು ವಾಣಿವಿಲಾಸ್ ಆಸ್ಪತ್ರೆಯಲ್ಲಿ ಆಗ ತಾನೇ ಹುಟ್ಟಿದ ನವಜಾತ ಶಿಶುವಿನ ಕಿಡ್ನ್ಯಾಪ್ ನಡೆದಿತ್ತು. ದಂಪತಿಗಳಾದ ಪ್ರಸನ್ನ ಹಾಗು ಸುಮಾ ಮಗುವನ್ನು ಕಳೆದುಕೊಂಡು ಕೊನೆಗೆ ಪೊಲೀಸರಿಗೆ ದೂರು ನೀಡಿದರು. ಪೊಲೀಸರ ಸತತ ಪ್ರಯತ್ನದಿಂದಾಗಿ ಕೊನೆಗೂ ರಾಮನಗರದಲ್ಲಿ ಮಗು ಪತ್ತೆಯಾಯಿತು. ಆ ಮಗುವನ್ನು ಕದ್ದಿದ್ದ ದಿವ್ಯಾ ರಶ್ಮಿ ಎಂಬಾಕೆಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ .
ಮಕ್ಕಳಿಲ್ಲದ ವಿಧವೆಯಾಗಿದ್ದ ಆರೋಪಿತೆ ಮಹಿಳೆ…!
ತಿಪಟೂರು ಮೂಲದ ಪ್ರಸನ್ನ ತನ್ನ ಪತ್ನಿ ಸುಧಾ ಅವರಿಗೆ ಪ್ರಸವದ ಕಾರಣದಿಂದಾಗಿ ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಗೆ ಸೇರಿಸಿದ್ದರು. ಹೆರಿಗೆ ಕೂಡ ಯಾವುದೇ ತೊಂದರೆ ಇಲ್ಲದೆ ನಡೆದಿತ್ತು. ಆದ್ರೆ ಮಗುವಿನ ಜನನವಾಗಿ ಕೆಲವೇ ಗಂಟೆಗಳಲ್ಲಿ ಮಗು ಕಾಣೆಯಾಗಿತ್ತು. ಅಲ್ಲಿ ಇಲ್ಲಿ ಹುಡುಕಾಡಿ ಮಗು ಸಿಗದಿದ್ದಾಗ ಸಿಸಿಟಿವಿಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಅದರಲ್ಲಿ ಮಹಿಳೆಯೊಬ್ಬಳು ಮಗುವನ್ನ ಕದ್ದೊಯ್ಯುತ್ತಿರುವ ದೃಶ್ಯ ಪತ್ತೆಯಾಗಿತ್ತು.
ವಿಚಾರವನ್ನು ಪೊಲೀಸರಿಗೆ ಮುಟ್ಟಿಸಿದಾಗ ಅಲರ್ಟ್ ಆದ ಖಾಕಿ ಪಡೆ, ಮಗುವಿನ ಹುಡುಕಾಟಕ್ಕೆ ವಿಶೇಷ ತಂಡ ರಚನೆ ಮಾಡಿತ್ತು. ವಾಣಿವಿಲಾಸ್ ಆಸ್ಪತ್ರೆಯಿಂದ ಶುರುವಾದ ಹುಡುಕಾಟ ಕೊನೆಗೆ ರಾಮನಗರದವರೆಗೆ ನಿಲ್ಲಿಸಿತ್ತು . ಮಗುವಿನ ಹುಡುಕಾಟಕ್ಕಾಗಿ ಮಹಿಳೆ ಸಾಗುವ ದಾರಿಯಲ್ಲಿರುವ ಸುಮಾರು 600 ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗಿತ್ತು. ನಂತರ ರಾಮನಗರದವರೆಗೂ ಸಾಗಿದ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ದಿವ್ಯಾ ರಶ್ಮಿಯನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಆಗ ಇನ್ನೊಂದು ಕಥೆ ಬೆಳಕಿಗೆ ಬಂದಿತ್ತು.
ದಿವ್ಯಾ ರಶ್ಮಿ, ಮದುವೆಯಾದ ಕೆಲವು ದಿನಗಳಲ್ಲಿಯೇ ಗಂಡನನ್ನು ಕಳೆದುಕೊಂಡಿದ್ದಳು. ಕೊನೆಗೆ ಮಗುವಿದ್ದಿದ್ದರೆ ಅದರ ಮುಖ ನೋಡಿ ಬದುಕಬಹುದಿತ್ತು ಎಂದು ಅದೆಷ್ಟೋ ಬಾರಿ ಅಂದುಕೊಂಡಿದ್ದಳು. ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯ ಮುಂದೆ ಮತ್ತೊಂದು ದಾರಿ ಇತ್ತು. ಅಡ್ಡ ದಾರಿಯಲ್ಲಿ ಮಗುವನ್ನು ಪಡೆಯುವುದು. ಆಗ ಆಕೆ ಮಗುವಿನ ಕಳ್ಳತನಕ್ಕೆ ನಿರ್ಧರಿಸಿದ್ದವಳು ನೇರವಾಗಿ ವಾಣಿವಿಲಾಸ್ ಹೆರಿಗೆ ಆಸ್ಪತ್ರೆಗೆ ಬಂದು ಪ್ರಸನ್ನ ಹಾಗು ಸುಧಾ ದಂಪತಿಯ ಮಗುವನ್ನ ಕದ್ದು ಪರಾರಿಯಾಗಿದ್ದಳು.
ಆದರೆ, ಆಕೆ ತನಗೊಂದು ಮಗು ಬೇಕೇಬೇಕು ಎನ್ನುವ ಆಸೆಯಲ್ಲಿ ಎಲ್ಲಿಂದಲೋ ಕದ್ದಾಗ ಅದು ಇನ್ನೊಂದು ಕುಟುಂಬದ ನೋವಿಗೆ ಕಾರಣವಾಗುತ್ತದೆ ಎನ್ನುವುದನ್ನು ಆಲೋಚಿಸಲಿಲ್ಲ. ಇದೀಗ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ.