ಬೆಂಗಳೂರು: ಆಕೆ ವೃತ್ತಿಪರ ಮಕ್ಕಳ ಕಳ್ಳಿ. ಕಣ್ಣು ಮುಚ್ಚಿ ಬಿಡುವುದರೊಳಗೆ ಕಣ್ಣು ಹಾಕಿದ ಕಂದಮ್ಮಗಳನ್ನು ಸದ್ದಿಲ್ಲದೇ ಕದ್ದು (child theft) ಮಾರಾಟ ಮಾಡಿಬಿಡುತ್ತಿದ್ದಳು. ಆದರೆ ಈ ಬಾರಿ ಅವಳ ನಸೀಬು ಕೆಟ್ಟಿತ್ತು, ಮಗು ಕದ್ದವಳನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು! ಆದರೆ, ಈ ಕಳವು ಮತ್ತು ಅವಳನ್ನು ಹಿಡಿದ ಸ್ಟೋರಿ ಒಂದು ಸಿನಿಮಾಕ್ಕಿಂತಲೂ ರೋಚಕ!
ಮಾ.25ರ ಬೆಳಗ್ಗೆ ಸುಮಾರು 7:30ರ ಸಮಯ ಕಲಾಸಿಪಾಳ್ಯದ ದುರ್ಗಮ್ಮ ಬೀದಿಯ ನಿವಾಸಿ ಫಾರ್ಹಿನ್ ಎಂಬುವವರು ತಮ್ಮ 42 ದಿನದ ಮಗುವಿಗೆ ಹಾಲುಣಿಸಿ ನಿದ್ರೆಗೆ ಜಾರಿದ್ದರು. ಈ ವೇಳೆ ಯಾವುದೇ ಭಯ ಭೀತಿ ಇಲ್ಲದೆ, ಆ ಮನೆಯವಳಂತೆಯೇ ಬಾಗಿಲು ತೆರೆದು ಸೀದಾ ಮನೆಯೊಳಗೆ ನುಗ್ಗಿದ ನಂದಿನಿ ಅಲಿಯಾಸ್ ಆಯೆಷಾ, ತಾಯಿಯೊಂದಿಗೆ ಬೆಚ್ಚಗೆ ಮಲಗಿದ್ದ ಮಗುವನ್ನು ಜತೆಗೆ ಪಕ್ಕದಲ್ಲಿದ್ದ ಮೊಬೈಲ್ ಅನ್ನು ಸಹ ಕದ್ದು ಪರಾರಿ ಆಗಿದ್ದಳು.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳಿ ಕರಾಮತ್ತು
ನಿದ್ರೆಯಿಂದ ಎದ್ದ ಮಗುವಿನ ತಾಯಿ ಫಾರ್ಹಿನ್, ಮಗು ಕಾಣದೇ ಇದ್ದಾಗ ಕಂಗಾಲಾಗಿದ್ದಾರೆ. ಕೂಡಲೇ ಮನೆಯೊಳಗೆ ಹಾಗೂ ಅಕ್ಕ ಪಕ್ಕದಲ್ಲೆಲ್ಲ ಹುಡುಕಾಡಿದ್ದಾರೆ. ಎಲ್ಲಿಯೂ ಮಗು ಪತ್ತೆಯಾಗದೆ ಆತಂಕಗೊಂಡು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಗು ಕಳವು ಆಗಿದೆ ಎಂದು ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡು ಸ್ಥಳಕ್ಕೆ ಬಂದ ಪೊಲೀಸರು, ಮನೆ ಅಕ್ಕಪಕ್ಕದ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದರು. ಈ ವೇಳೆ ಬುರ್ಖಾ ಧರಿಸಿ ಬಂದಿದ್ದ ಮಹಿಳೆಯೊಬ್ಬಳು ಮನೆಯೊಳಗೆ ನುಗ್ಗಿ ಮಗು ಕದ್ದಿರುವುದು ತಿಳಿದು ಬಂದಿತ್ತು.
ರೈಲ್ವೇ ಕ್ವಾಟ್ರಸ್ ಬಳಿ ಓಡಾಡುತ್ತಿದ್ದಳು ಮಕ್ಕಳ ಕಳ್ಳಿ
ಇದೇ ಸಮಯದಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಮಾಗಡಿ ರಸ್ತೆ ಬಳಿ ಇರುವ ರೈಲ್ವೇ ಕ್ವಾರ್ಟ್ರಸ್ ಬಳಿ ಮಹಿಳೆಯೊಬ್ಬಳು ಮಗುವನ್ನು ಹಿಡಿದು ಓಡಾಡುತ್ತಿದ್ದಾಳೆ. ಆದರೆ ಆ ಮಗು ಆಕೆಯದ್ದಲ್ಲ ಎಂಬ ಅನುಮಾನ ವ್ಯಕ್ತಪಡಿಸಿ ಸ್ಥಳೀಯರು 112 ಸಹಾಯವಾಣಿಗೆ ಕರೆ ಮಾಡಿದ್ದರು. ಕೂಡಲೇ ಕಾರ್ಯಪ್ರವೃತರಾದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.
ಮಾಗಡಿರಸ್ತೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುಮಂಗಲಿ ಹಾಗೂ ಕ್ರೈಂ ಟೀಂ ಮಗುವನ್ನು ಹಿಡಿದು ಓಡಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರ ಸಹಾಯದಿಂದ ವಶಕ್ಕೆ ಪಡೆದರು. ವಿಚಾರಣೆ ನಡೆಸಿದಾಗ ಕಲಾಸಿಪಾಳ್ಯದಲ್ಲಿ ಕದ್ದು ಪರಾರಿಯಾಗಿದ್ದ ಕಳ್ಳಿ ಇವಳೇ ಎಂಬುದು ಖಾತ್ರಿ ಆಗಿತ್ತು.
ಇದಕ್ಕೂ ಮುನ್ನ ನಂದಿನಿ ಅಲಿಯಾಸ್ ಆಯೆಷಾ ಸ್ಥಳೀಯರು ಹಾಗೂ ಪೊಲೀಸರಿಗೆ ಲಾಕ್ ಆಗುತ್ತಿದ್ದಂತೆ ದೊಡ್ಡ ನಾಟಕವನ್ನೇ ಮಾಡಿದ್ದಾಳೆ. ಇದು ತನ್ನದೆ ಮಗು ಎಂದು ಕೂಗಾಡಿ, ಮರಕ್ಕೆ ತಲೆಯನ್ನು ಚಚ್ಚಿಕೊಂಡು ಅಳತೊಡಗಿದ್ದಾಳೆ. ಆದರೆ ಇವಳ ಯಾವ ಮೊಸಳೆ ಕಣ್ಣೀರಿಗೂ ಜಗ್ಗದ ಸ್ಥಳೀಯರು, ಕೂಡಲೇ ಮಗುವನ್ನು ಅವಳಿಂದ ಪಡೆದುಕೊಂಡಿದ್ದಾರೆ.
ಸದ್ಯ ಈ ಆಯೆಷಾ ಮುಳಬಾಗಿಲು ಮೂಲದವಳಾಗಿದ್ದು, ಆಸ್ಪತ್ರೆ, ಮನೆಯಲ್ಲಿರುವ ಮಕ್ಕಳನ್ನು ಕದಿಯುವುದು ಮಾರಾಟ ಮಾಡುವುದು ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿರುವುದು ತಿಳಿದುಬಂದಿದೆ. ಕಳೆದು ಹೋಗಿದ್ದ ಮಗುವನ್ನು ಪೋಷಕರಿಗೆ ಒಪ್ಪಿಸಿರುವ ಕಲಾಸಿಪಾಳ್ಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ