ಉಡುಪಿ: ಪೆನ್ನು, ಪುಸ್ತಕ ಹಿಡಿದು ಶಾಲೆಯಲ್ಲಿ ಆಟ ಪಾಠ ಎಂದು ಇರಬೇಕಾದ ಮಕ್ಕಳು ಕೈಯಲ್ಲಿ ಗುದ್ದಲಿ, ಪಿಕಾಸಿ ಹಿಡಿದು ರೋಡ್ ರಿಪೇರಿಗೆ ಬೀದಿಗಿಳಿದಿದ್ದರು. ಅದೂ ಮಕ್ಕಳ ದಿನದ ಸಂದರ್ಭದಲ್ಲಿ ಎಂಬುದು ಮತ್ತೊಂದು ವಿಶೇಷ.
ಗುಂಡಿಯಿಂದ ಕೂಡಿದ ರಸ್ತೆಯಲ್ಲಿ ನಿತ್ಯವೂ ಶಾಲೆಗೆ ಹೋಗಲು ಆಗದೇ ಮಕ್ಕಳು ಸಂಕಷ್ಟವನ್ನು ಎದುರಿಸುತ್ತಿದ್ದರು. ಪೋಷಕರು ಮಕ್ಕಳ ಕಷ್ಟ ನೋಡಲಾಗದೇ ರಸ್ತೆ ದುರಸ್ತಿ ಮಾಡುವಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಮಕ್ಕಳೇ ಮಕ್ಕಳ ದಿನಾಚರಣೆಯಂದು (Children’s Day) ಕಾರ್ಯಾಚರಣೆಗೆ ಇಳಿದರು.
ಇಲ್ಲಿನ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮ ಮೂಡಣ ಬೈಲು ರಸ್ತೆಯಲ್ಲಿ ಮಕ್ಕಳೇ ಸೇರಿ ತಾವು ಓಡಾಡುವ ರಸ್ತೆಯನ್ನು ದುರಸ್ತಿ ಮಾಡಿದರು. ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದ ಕಾರಣ ಮಕ್ಕಳೆಲ್ಲರೂ ಒಟ್ಟಾಗಿ ಸೇರಿದ್ದು, ಪರಿಕರಗಳನ್ನು ಹಿಡಿದು ತಾವು ನಿತ್ಯ ಸಂಚರಿಸುವ ರಸ್ತೆಯನ್ನು ದುರಸ್ತಿ ಮಾಡಿದರು.
ಅಂದಹಾಗೇ ಈ ರಸ್ತೆಯು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರಲಿದ್ದು, ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ಜನಪ್ರತಿನಿಧಿ, ಅಧಿಕಾರಿಗಳು ಕಂಡರೂ ಕಾಣದಂತೆ ನೆಪಗಳನ್ನು ಹೇಳುತ್ತಾ ಸುಮ್ಮನಾಗುತ್ತಿದ್ದರು. ಡಾಂಬರ್ ಹಾಕಿದ್ದ ರಸ್ತೆಯು ಸಂಪೂರ್ಣ ಕಿತ್ತು ಹೋಗಿದ್ದ ಕಾರಣ ಮಕ್ಕಳು ಶಾಲೆಗೆ ಹೋಗಿ ಬರಲು ತೊಡಕಾಗಿತ್ತು. ಸೈಕಲ್‌ನಲ್ಲಿ ಬರುವ ವೇಳೆ ಸಾಕಷ್ಟು ಬಾರಿ ಬ್ರೇಕ್ ಹಾಕಿದಾಗ ಸ್ಕಿಡ್ ಆಗಿ ಬಿದ್ದು ಪೆಟ್ಟು ಮಾಡಿಕೊಂಡಿದ್ದೂ ಇದೆ. ಪೋಷಕರ ಜತೆ ದ್ವಿಚಕ್ರ ವಾಹನದಲ್ಲಿ ಹೋಗುವಾಲೂ ಸಮಸ್ಯೆಯನ್ನು ಎದುರಿಸಿದ್ದಾರೆ.
ಹೀಗಾಗಿ ವ್ಯವಸ್ಥೆಯಿಂದ ಬೇಸತ್ತ ಅದೇ ಗ್ರಾಮದ ಶಾಲಾ-ಕಾಲೇಜು ಮಕ್ಕಳು, ಎಲ್ಲರೂ ಸೇರಿ ಹಾರೆ, ಗುದ್ದಲಿ ಹಿಡಿದು ಗುಂಡಿಯಿಂದ ಕೂಡಿದ ರಸ್ತೆಯನ್ನು ಸಮತಟ್ಟು ಮಾಡಿದರು. ಈ ಮೂಲಕ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.
ಇದನ್ನೂ ಓದಿ | ಮಕ್ಕಳ ಕಥೆ: ಹುಲ್ಲನ್ನು ಚಿನ್ನ ಮಾಡುವ ಕಿನ್ನರ!