Site icon Vistara News

Black trips insect | ಮೆಣಸಿನ ಕಾಯಿ ಬೆಳೆಗಾರರ ಸಂಕಷ್ಟದ ಉರಿ ಹೆಚ್ಚಿಸಿದ ಬ್ಲ್ಯಾಕ್‌ ಟ್ರಿಪ್ಸ್‌ ಕೀಟ, ಭಾರಿ ನಷ್ಟ

ಶಶಿಧರ್ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ಕಿರುಗಾತ್ರದ ಬ್ಲ್ಯಾಕ್‌ ಟ್ರಿಪ್ಸ್ ಕೀಟ (Black trips insect) ಮೆಣಸಿನಕಾಯಿ ಬೆಳೆಗಾರರ ಸಂಕಷ್ಟದ ಉರಿ ಹೆಚ್ಚಿಸಿದೆ. ನಿರೀಕ್ಷೆಗಿಂತ ಹೆಚ್ಚಿನ ಮಳೆ ಮತ್ತು ಈ ಬಾರಿಯ ಅಕಾಲಿಕ ತೂಫಾನ್‌ನಿಂದಾಗಿ ತಂಪಿನ ವಾತಾವರಣ ರೈತರ ಮೆಣಸಿನಕಾಯಿ ಬೆಳೆಯ ನಿರೀಕ್ಷೆಗೆ ತಣ್ಣೀರು ಎರಚಿದೆ, ಕೋಟ್ಯಾಂತರ ರೂ. ನಷ್ಟಕ್ಕೆ ಕಾರಣವಾಗಿದೆ.

ಬಳ್ಳಾರಿ ಭಾಗದ ನೀರಾವರಿ ಪ್ರದೇಶದ ಪ್ರಮುಖ ಬೆಳೆ ಮೆಣಸಿನಕಾಯಿ. ಇದು ಗಣಿನಾಡಿನ ಪ್ರಮುಖ ವಾಣಿಜ್ಯ ಬೆಳೆಯು ಹೌದು. ಹೆಚ್ಚಿನ ಆದಾಯ ತಂದು ಕೊಡುವ ಬೆಳೆಯೆಂದು ಹೆಚ್ಚಿನ ರೈತರು ಮೆಣಸಿನ ಕಾಯಿ ಮೊರೆ ಹೋಗುತ್ತಾರೆ, ಆದರೆ ಕಳೆದ ಎರಡು ವರ್ಷದಿಂದ ಈ ಬೆಳೆಯನ್ನು ನೆಚ್ಚಿದ ರೈತರು ಕೈ ಸುಟ್ಟು
ಕೊಂಡಿದ್ದಾರೆ.

ಮೆಣಸಿನ ಕಾಯಿ ಬೆಳೆಯನ್ನೇ ನಾಶ ಮಾಡಿ ಬೇರೆ ಬೆಳೆ ಬೆಳೆಯುವ ಪರಿಸ್ಥಿತಿ ನಿಮಾಣವಾಗಿದೆ.

ವಾತಾವರಣ ತಂಪು ರೈತರ ಬದುಕಲ್ಲಿ ಸುನಾಮಿ
ತುಂಗಭದ್ರಾ ಜಲಾಶಯದ ನೀರು ನೆಚ್ಚಿಕೊಂಡು ಇಲ್ಲಿನ ರೈತರು ಮೆಣಸಿನ ಕಾಯಿ ಬಿತ್ತನೆ ಮಾಡಿದ್ದಾರೆ, ನೀರಿಗೆ ಕೊರತೆಯಿಲ್ಲ‌. ಆದರೆ, ಕಳೆದ ವರ್ಷ ನಿರೀಕ್ಷೆಗಿಂತ ಹೆಚ್ಚಿನ ಮಳೆಯಿಂದಾಗಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಹಾನಿಯಾಗಿತ್ತು. ಇದರಿಂದಾಗಿ ಈ ವರ್ಷ ಬಿತ್ತನೆ ಪ್ರಮಾಣ 32 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿತ್ತು. ಆದರೂ ಈ ವರ್ಷವು ಚಂಡಮಾರುತ ಮೋಡ ಮುಸುಕಿದ ವಾತಾವರಣ ಮತ್ತು ತೂಫಾನ್‌ನಿಂದಾಗಿ ಈ ವರ್ಷದಲ್ಲಿ ಶೇ‌.40ರಷ್ಟು ಬೆಳೆಯು ಬ್ಲ್ಯಾಕ್‌ ಟ್ರಿಪ್ಸ್ ನಿಂದ ಹಾನಿಯಾಗಿದೆ ಎಂಬುದು ರೈತರ ಗೋಳಾಗಿದೆ‌.

ಬ್ಲಾಕ್ ಟ್ರಿಪ್ಸ್ ಗೆ ರೈತರು ತತ್ತರ
ತಂಪಿನ ವಾತಾವರಣದಲ್ಲಿ ಮೆಣಸಿನಕಾಯಿಗೆ ಬ್ಲಾಕ್ ಟ್ರಿಪ್ಸ್‌ ಕೀಟದ ಬಾಧೆ ಹೆಚ್ಚಾಗಲಿದೆ. ಸಾಮಾನ್ಯವಾಗಿ ನಾಲ್ಕೈದು‌ ದಿನಗಳಿಗೊಮ್ಮೆ ಕೀಟನಾಶಕ ಸಿಂಪಡಿಸುತ್ತಿದ್ದ ರೈತರು ಬ್ಲಾಕ್ ಟ್ರಿಪ್ಸ್ ನಿಂದಾಗಿ ಎರಡು ದಿನಗಳಿಗೊಮ್ಮೆ ಸಿಂಪಡಿಸುವ ಅನಿವಾರ್ಯತೆ ಎದುರಾಗಿದೆ. ಈ ಕೀಟ ಬಾಧೆಯಿಂದ ಬೆಳೆ ರಕ್ಷಣೆ ಮಾಡಲಾಗದೆ ರೈತ ಕಂಗಾಲಾಗಿದ್ದಾನೆ.

ಪರ್ಯಾಯ ಬೆಳೆ ಮೊರೆ
ಮೆಣಸಿನಕಾಯಿ ಬೆಳೆಗೆ ಎಕರೆಯೊಂದಕ್ಕೆ 1 ಲಕ್ಷಕ್ಕೂ ಹೆಚ್ಚು ವ್ಯಯಿಸಬೇಕು. ಆದರೆ ಬ್ಲಾಕ್‌ ಟ್ರಿಪ್ಸ್ ನಿಂದ ಬೆಳೆ ಹಾನಿಯ ಆತಂಕ ರೈತರನ್ನು ಕಾಡುತ್ತಿರುವುದರಿಂದ ಪರ್ಯಾಯ ಬೆಳೆಗೆ ರೈತರು ಮೊರೆ ಹೋಗಿದ್ದಾರೆ. ಬಾಡುತ್ತಿರುವ ಮೆಣಸಿನಕಾಯಿ ಬೆಳೆಯ ಮಧ್ಯೆಯೇ ಜೋಳ, ಮುಸುಕಿನ ಜೋಳ ಮತ್ತು ಸಜ್ಜೆ ಬಿತ್ತನೆ ಮಾಡಿ, ಮೆಣಸಿನಕಾಯಿ ಬೆಳೆ ಹಾನಿಯಿಂದ ಹೊರ ಬರುವ ಪ್ರಯತ್ನ ಮಾಡುತ್ತಿದ್ದಾನೆ.

ಏನಿದು ಬ್ಲಾಕ್ ಟ್ರಿಪ್ಸ್?
ಟ್ರಿಪ್ಸ್ ಅಥವಾ ಥ್ರೈಪ್ ಎಂತಲೂ ಕರೆಯುತ್ತಾರೆ. ಇದರ ಗಾತ್ರವು ಸಾಮಾನ್ಯವಾಗಿ ಸಾಕಷ್ಟು ಚಿಕ್ಕದಾಗಿದೆ (ಉದ್ದ 2 ಮಿಮೀ)‌. ಕಪ್ಪು ಡ್ರೈವ್ ಹಸಿರುಮನೆ ಸಸ್ಯಗಳು ಮತ್ತು ಇತರ ತೋಟಗಾರಿಕಾ, ಹಣ್ಣುಗಳು ಮತ್ತು ತರಕಾರಿ ಬೆಳೆಗಳಿಗೆ ಅತ್ಯಂತ ಗಂಭೀರವಾದ ಹಾನಿಕಾರಕ ಕೀಟಗಳಾಗಿವೆ. 2021ರಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮೆಣಸಿನಕಾಯಿ ಹಾನಿಗೆ ಕಾರಣವಾಗಿತ್ತು. ಇದು ಮಣ್ಣಿನಲ್ಲಿ ಸಸಿಗಳ ಮೇಲೆ ಕಂಡುಬರುತ್ತದೆ, ವಾತಾವರಣದಲ್ಲಿ ತಂಪು ಹೆಚ್ಚಾದಂತೆ ಕೀಟದ ಬಾಧೆ ಹೆಚ್ಚಾಗುತ್ತಾ ಹೋಗುತ್ತದೆ. ಈ‌ಗ ಮೆಣಸಿನಕಾಯಿಗೆ ಉತ್ತಮ ಬೆಲೆ ಇದೆ, ಆದರೆ ಮಾರಾಟ ಮಾಡಲು ಬ್ಲಾಕ್ ಟ್ರಿಪ್ಸ್ ಕೀಟದಿಂದ ಮಾರಾಟಕ್ಕೆ ಮೆಣಸಿನ ಕಾಯಿಯೇ ಇಲ್ಲದಂತಾಗಿದೆ.

ರೈತರು ಹೇಳುವುದೇನು?
ಬ್ಲಾಕ್ ಟ್ರಿಪ್ಸ್ ಕೀಟ ಬಾಧೆಯಿಂದ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ. ತಂಪಿನ ವಾತಾವರಣದಿಂದ ಕೀಟ ಬಾಧೆ ಹೆಚ್ಚಾಗಲಿದೆ. ಇದರಿಂದಾಗಿ ನಾಲ್ಕೈದು ದಿನಗಳಿಗೊಮ್ಮೆ ಸಿಂಪಡಣೆ ಮಾಡುತ್ತಿದ್ದ ಕೀಟನಾಶಕವನ್ನು ಟ್ರಿಪ್ಸ್ ನಿಂದ ಎರಡು‌ ದಿನಕ್ಕೊಮ್ಮೆ ಮಾಡಬೇಕಾಗಿದೆ. ಆದರೂ ನಮ್ಮ ಹೊಲದಲ್ಲಿ ಮೆಣಸಿನಕಾಯಿ ಒಣಗಿ ಹೋಗಿದೆ. ಇದಕ್ಕೆ ಪರ್ಯಾಯ ಬೆಳೆ ಬಿತ್ತನೆ ಮಾಡಲಾಗಿದೆ ಎನ್ನುತ್ತಾರೆ ಬಾದನಹಟ್ಟಿ ಭವಾನಿ ಕ್ಯಾಂಪ್‌ನ ಮೆಣಸಿನ ಕಾಯಿ ಬೆಳೆಗಾರರಾದ ಕರೆ ಗೌಡ ಮತ್ತು ಪ್ರಸಾದ.

ಇದನ್ನೂ ಓದಿ | ಭಾರೀ ಮಳೆ-ಬಿರುಗಾಳಿಗೆ ಕೊಪ್ಪಳದಲ್ಲಿ 5,599 ಪ್ರದೇಶದ ಕೃಷಿ ಬೆಳೆ ಹಾನಿ

Exit mobile version