Site icon Vistara News

ಗಾಯಗೊಂಡ ಪ್ರಾಣಿ ಪಕ್ಷಿಗಳಿಗೆ ಆಶ್ರಯದಾತೆ ಈ ಹೆಣ್ಣು ಮಗಳು

ವಾತ್ಸಲ್ಯ ತೋರುವ ಯುವತಿ

ಚಿತ್ರದುರ್ಗ: ಕೋಟೆನಾಡಿನಲ್ಲಿ ಸ್ಫೂರ್ತಿ ಎಂಬ ಯುವತಿ ಗಾಯಗೊಂಡು ನರಳುವ, ಬೀದಿಪಾಲಾಗಿರುವ ದನಕರು, ಬೀದಿನಾಯಿ, ಕುದುರೆ ಹಾಗೂ ಹಾವುಗಳಿಗೆ ಸ್ವಲ್ಪವೂ ಅಳುಕಿಲ್ಲದೇ ಶುಶ್ರೂಷೆ‌ ಮಾಡುತ್ತಾರೆ. ಈ ಯುವತಿ ಚಿಕ್ಕಂದಿನಿಂದಲೇ ಪ್ರಾಣಿದಯೆಯನ್ನು ಮೈಗೂಡಿಸಿಕೊಂಡಿದ್ದಾರೆ.

ಗಾಯಗೊಂಡು ಮೂಕ ವೇದನೆ ಅನುಭವಿಸುವ ಪ್ರಾಣಿಪಕ್ಷಿಗಳ ಪಾಲಿಗೆ ಈ ಯುವತಿ ದಯಾಮಯಿ. ಮೂಕ ಜೀವಿಗಳನ್ನು ತನ್ನ ಸ್ವಂತ ಕುಟುಂಬದ ಸದಸ್ಯರಂತೆ ಕಾಣುವ ಇವರು, ಎಲ್ಲಿಯೇ ಪ್ರಾಣಿಪಕ್ಷಿಗಳಿಗೆ ಅಪಘಾತವಾದರೂ ತಕ್ಷಣ ಅಲ್ಲಿಗೆ ಹಾಜರಾಗುತ್ತಾರೆ.

ಗಾಯಗೊಂಡ ಮೂಕಜೀವಿಗಳ ವೇದನೆ ಅರ್ಥೈಸಿಕೊಂಡು, ನಿಸ್ವಾರ್ಥದಿಂದ ಚಿಕಿತ್ಸೆ ನೀಡುತ್ತಾರೆ.
ಅವುಗಳ ಗಾಯ ಸಂಪೂರ್ಣ ಗುಣವಾಗುವವರೆಗೆ ಪ್ರೀತಿಯಿಂದ ಆಹಾರ, ಚಿಕಿತ್ಸೆ ನೀಡಿ ಮಗುವಿನಂತೆ ಆರೈಕೆ ಮಾಡುತ್ತಾರೆ.

ಇಲ್ಲಿಯವರೆಗೆ ಸಾವಿರಾರು ದನಕರುಗಳು, ನೂರಾರು ಬೀದಿ ನಾಯಿಗಳು ಹಾಗೂ ಕುದುರೆಗಳು, ಅಪಾಯಕಾರಿ ಎಂದು ಅನಿಸಿಕೊಳ್ಳುವ ಹಾವು ಹಾಗೂ ಹದ್ದಿಗೂ ಚಿಕಿತ್ಸೆ ನೀಡಿ ಅಪರೂಪದ ಆರೋಗ್ಯದಾತೆ ಎನಿಸಿದ್ದಾರೆ. ಹೀಗಾಗಿ ಆ ಪ್ರಾಣಿ, ಪಕ್ಷಿಗಳಿಗೂ ಕೂಡ ಈಕೆಯ ಕಂಡರೆ ಬಲು ಪ್ರೀತಿ ಎಂದು ಸ್ಫೂರ್ತಿ ಹೇಳುತ್ತಾರೆ.

ಸ್ಫೂರ್ತಿಯ ನಿಸ್ವಾರ್ಥ ಸೇವೆ ಕಂಡು ಪ್ರೇರಣೆ ಪಡೆದ ಜೈನ ಸಮುದಾಯದ 27 ಜನ ಯುವಕರು ಸಹ ಈಕೆಗೆ ಸಾಥ್ ನೀಡ್ತಿದ್ದಾರೆ. ಜೈನ್ ಪೀಪಲ್ ಫಾರ್ ಪೀಪಲ್ಸ್ ಅಂತ ಸಂಘಟನೆ ಕಟ್ಟಿಕೊಂಡು, ಬೀದಿಯಲ್ಲಿ ಅನಾಥವಾಗಿ ಬದುಕುವ ಪ್ರಾಣಿಗಳ ಪಾಲಿಗೆ ಆಶ್ರಯದಾತರೆನಿಸಿದ್ದಾರೆ. ಅಲ್ಲದೆ ಕೋವಿಡ್ ಸಂಕಷ್ಟದ ವೇಳೆ‌ಯಲ್ಲಿ ಸಹ, ಮೂಕ ಜೀವಿಗಳಿಗೆ ಅಗತ್ಯ ಆಹಾರ, ಚಿಕಿತ್ಸೆ ಹಾಗೂ ಆರೈಕೆ ಮಾಡಿ, ಆಹಾರವಿಲ್ಲದೆ ಮೂಕ ಜೀವಿಗಳು ಸಾವನ್ನಪ್ಪದಂತೆ ಎಚ್ಚರ ವಹಿಸಿದ್ದಾರೆ.

ಇದೆಲ್ಲಾ ಸೇವೆಗೂ ಈ ಯುವಕರು ಹಾಗು ಯುವತಿ ತಮ್ಮ‌ ಸ್ವಂತ ಹಣವನ್ನೇ ಬಳಸಿರುವುದು ವಿಶೇಷ. ಇವರೆಲ್ಲ ಕೋಟೆನಾಡಲ್ಲೊಂದು ʼಅನಿಮಲ್ ರೆಸ್ಕ್ಯು ಸೆಂಟರ್ʼ ತೆರೆಯುವ ಮಹದಾಸೆ ಹೊಂದಿದ್ದಾರೆ. ಇದಕ್ಕೆ‌ ಸರ್ಕಾರ ಪ್ರೋತ್ಸಾಹಿಸಿದರೆ ಮೂಕಜೀವಿಗಳ ಪಾಲನೆಗೊಂದು ಸ್ಫೂರ್ತಿ ಸಿಕ್ಕಂತಾಗುತ್ತದೆ ಎಂದು ಪೀಪಲ್ಸ್ ಫಾರ್ ಪೀಪಲ್ಸ್ ಸಂಘಟನೆ ಸದಸ್ಯ ದಿಲೀಪ್‌ ಹೇಳುತ್ತಾರೆ.

ಇದನ್ನೂ ಓದಿ: ಪ್ರಾಣಿ ದಯಾ ಮಾರ್ಗಸೂಚಿ ಪಾಲನೆಗೆ ನಿರ್ದೇಶನ ಕೋರಿ ಹೈಕೋರ್ಟ್‌ಗೆ ಅರ್ಜಿ: ಸರಕಾರಕ್ಕೆ ನೋಟಿಸ್‌

Exit mobile version