ಚಿತ್ರದುರ್ಗ: ನಗರದ ಫಿಲ್ಟರ್ಸ್ ನಗರದಲ್ಲಿ ಒಮಿನಿ ಕಾರಲ್ಲಿದ್ದ ಸಿಲಿಂಡರ್ ಏಕಾಏಕಿ (Car blast) ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟದಿಂದ ಒಮ್ಮೆಲೆ ಒಮಿನಿ ಕಾರು ಹೊತ್ತಿ ಉರಿದಿದೆ. ಒಮಿನಿ ಕಾರಿಗೆ ಗ್ಯಾಸ್ ತುಂಬಿಸುವ ವೇಳೆ ಈ ಅವಘಡ ನಡೆದಿದೆ. ಅಗ್ನಿ ಅವಘಡದಲ್ಲಿ ಕಾರು ಹಾಗೂ ಪಕ್ಕದಲ್ಲಿದ್ದ ಟಿವಿಎಸ್ ಎಕ್ಸೆಲ್, ಬೈಕ್ ಎಲ್ಲವೂ ಸುಟ್ಟು ಕರಕಲಾಗಿದೆ.
ಮೆಹಬೂಬ್ ಎಂಬುವವರು ಪ್ರತಿ ನಿತ್ಯ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಅದೃಷ್ಟವಾಶತ್ ಸಿಲಿಂಡರ್ ಸ್ಪೋಟದ ಸಮಯದಲ್ಲಿ ಯಾರು ಇರಲಿಲ್ಲ. ಹೀಗಾಗಿ ದುರಂತವೊಂದು ತಪ್ಪಿದೆ.
ಸಿಲಿಂಡರ್ ಸ್ಪೋಟವಾಗುತ್ತಿದ್ದಂತೆ ಅಕ್ಕ-ಪಕ್ಕದವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಪರದಾಡಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಬೆಂಕಿಯ ಕೆನ್ನಾಲಿಯಲ್ಲಿ ಕಾರು ಸುಟ್ಟು ಕರಕಲಾಗಿದೆ.
ತಡವಾಗಿ ಬಂದ ಅಗ್ನಿಶಾಮಕ ಸಿಬ್ಬಂದಿಗೆ ತರಾಟೆ
ಇತ್ತ ಬೆಂಕಿ ಆವರಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಆದರೆ ಸ್ಥಳಕ್ಕೆ ತಡವಾಗಿ ಬಂದಿದ್ದಕ್ಕೆ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದಾರೆ. ಎಲ್ಲಾ ಸತ್ತ ಮೇಲೆ ಬರುತ್ತಿರಿ ನೀವು ಈಗ ಯಾಕೆ ಬಂದ್ದಿರಿ. ಫೋನ್ ಮಾಡಿ ಒಂದು ಗಂಟೆ ಮೇಲೆ ಸ್ಥಳಕ್ಕೆ ಬಂದಿದ್ದೀರಾ ಎಂದು ಕಿಡಿಕಾರಿದರು. ಅಕ್ಕಪಕ್ಕದ ಮನೆ ಹೊತ್ತಿ ಉರಿದಿದ್ದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Water supply : ಪೈಪ್ ವಾಲ್ವ್ ದುರಸ್ತಿ; ಅರ್ಧ ಬೆಂಗಳೂರಿಗೆ ನಾಳೆ ಕಾವೇರಿ ನೀರಿಲ್ಲ
ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದ ಕಾರು ಪಲ್ಟಿ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಭಾಗದಲ್ಲೂ ರಕ್ತಚಂದನ (Red sanders) ಸಾಗಾಟ ಜೋರಾಗಿದೆ ಎಂಬುದಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತವೊಂದು ಸಾಕ್ಷಿಯಾಗಿದೆ. ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ಇನ್ನೋವಾ ಕಾರೊಂದು (Innova Car Overturns) ರಾಷ್ಟ್ರೀಯ ಹೆದ್ದಾರಿ 44ರ ಸಾದಲಿ ಗೇಟ್ ಬಳಿ ಪಲ್ಟಿಯಾಗಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಾಯಗೊಂಡಿದ್ದಾರೆ .
ಚಿಕ್ಕಬಳ್ಳಾಪುರ ಜಿಲ್ಲೆ (Chikkaballapura News) ಬಾಗೇಪಲ್ಲಿ ತಾಲೂಕಿನ ಸಾದಲಿ ಗೇಟ್ ಬಳಿ ಘಟನೆ ನಡೆದಿದ್ದು, ಇದು ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ತಂಡ ಇದಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಜಾಲದ ಬಗ್ಗೆಯೂ ತನಿಖೆ ನಡೆಯಲಿದೆ.
ಹುಬ್ಬಳ್ಳಿಯಲ್ಲಿ ಧಗಧಗನೆ ಹೊತ್ತಿ ಉರಿದ ಅಂಗಡಿ
ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಭೀಕರ ಅಗ್ನಿ ಅವಘಡ ಅಂಭವಿಸಿದ್ದು ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಅಂಗಡಿಯೊಂದು ಹೊತ್ತಿ ಉರಿದಿದೆ. ಹುಬ್ಬಳ್ಳಿಯ ಜನತಾ ಬಜಾರ್‌ನಲ್ಲಿರುವ ಪೊಲೀಸ್ ಸ್ಟೋರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಶಿವಪ್ಪ ನಾಯಕ ಎಂಬುವವರಿಗೆ ಸೇರಿದ ಸ್ಟೋರ್ ಇದಾಗಿದ್ದು, ಅಂಗಡಿ ಬಂದ್ ಆಗಿದ್ದಾಗ ರಾತ್ರಿಯ ಹೊತ್ತು ದುರಂತ ಸಂಭವಿಸಿದೆ.
ಈ ಅಂಗಡಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆಯೇ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಬೇರೆ ಕಡೆಗೆ ಹರಡದಂತೆ ನೋಡಿಕೊಂಡರು. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತರೀಕೆರೆ ಬಳಿ ಭೀಕರ ಅಪಘಾತ: 9 ಮಂದಿ ಗಂಭೀರ
ಚಿಕ್ಕಮಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂಬತ್ತು ಮಂದಿ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಡೆದಿದೆ. ತರೀಕೆರೆ ತಾಲೂಕಿನ ಬೆಲೇನಹಳ್ಳಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದ್ದು, ಕಾರಿನಲ್ಲಿದ್ದ 9 ಜನರಿಗೆ ಗಂಭೀರ ಗಾಯಕ್ಕೊಳಗಾಗಿದ್ದಾರೆ.
ಶಿವಮೊಗ್ಗದಿಂದ ತರೀಕೆರೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ತರೀಕೆರೆಯಿಂದ ಭದ್ರಾವತಿಗೆ ತೆರಳುತ್ತಿದ್ದ ಕಾರು ಮಧ್ಯೆ ಅಪಘಾತ ಸಂಭವಿಸಿದೆ. ಸರ್ಕಾರಿ ಬಸ್ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಅದರಲ್ಲಿ ಒಂಬತ್ತು ಮಂದಿಗೂ ಗಾಯಗಳಾಗಿವೆ. ಕಾರಿನಲ್ಲಿದ್ದ 9 ಜನರು ಭದ್ರಾವತಿ ಮೂಲದವರಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ