Site icon Vistara News

Chitraduraga News : ಜೋಳದ ಹೊಲದಲ್ಲಿ ಮಹಿಳೆ ಶವ ಪತ್ತೆ!

Bhagya women Dead

ಚಿತ್ರದುರ್ಗ: ಇಲ್ಲಿನ ಮಹಾದೇವನಕಟ್ಟೆ ಗ್ರಾಮದ (Chitraduraga News) ಹೊರವಲಯದಲ್ಲಿ ಹೊಲದಲ್ಲಿ ಮಹಿಳೆಯ ಶವ ಪತ್ತೆ (Dead body Found) ಆಗಿದೆ. ಮೃತಳನ್ನು ಭಾಗ್ಯಮ್ಮ (52) ಎಂದು ಗುರುತಿಸಲಾಗಿದೆ.

ಮಹಾದೇವನಕಟ್ಟೆ ಗ್ರಾಮದ ವೀರಭದ್ರಪ್ಪ ಎಂಬುವವರ ಹೊಲದಲ್ಲಿ ಭಾಗ್ಯಮ್ಮರ ಶವ ಪತ್ತೆ ಆಗಿದೆ. ಎರಡು ದಿನದ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದೆ. ಹೊಲದಲ್ಲಿ ದುರ್ವಾಸನೆ ಬರುವುದನ್ನು ಗಮನಿಸಿ ಪರಿಶೀಲಿಸಿದಾಗ ಮೃತದೇಹ ಕಂಡಿದೆ.

ಕೂಡಲೇ ಈ ವಿಷಯವನ್ನು ಪೊಲೀಸರ ಗಮನಕ್ಕೆ ತರಲಾಗಿದೆ. ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್‌ ಬಂದಿದ್ದು, ಚಿತ್ರದುರ್ಗ ಎಸ್‌ಪಿ ಕುಮಾರಸ್ವಾಮಿ, ಡಿವೈಎಸ್‌ಪಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಯಾರಾದರೂ ಹತ್ಯೆ ಮಾಡಿ ಇಲ್ಲಿಗೆ ತಂದು ಬಿಸಾಡಿದ್ದ ಅಥವಾ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಾಬಹುದಾ? ಎಂಬ ಆಯಾಮದಲ್ಲಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಡಿಜೆ ಸೌಂಡ್‌ಗೆ ಇನ್ನೊಂದು ಬಲಿ! ಗಂಗಾವತಿ ಗಣೇಶ ವಿಸರ್ಜನೆ ವೇಳೆ ಯುವಕ ಸಾವು

ಕೊಪ್ಪಳ: ಡಿಜೆ ಸದ್ದಿನಿಂದಾಗಿ ಹಠಾತ್‌ ಸಾವು ಕಾಣುತ್ತಿರುವ ಪ್ರಕರಣಗಳು (killer DJ sound) ಹೆಚ್ಚುತ್ತಿವೆ. ಕೊಪ್ಪಳ ಜಿಲ್ಲೆಯ (koppal news) ಗಂಗಾವತಿ ನಗರದಲ್ಲಿ ಯುವಕನೊಬ್ಬ ಮೆರವಣಿಗೆ ವೇಳೆ ಹಠಾತ್‌ ಕುಸಿದುಬಿದ್ದು (heart failure) ಸಾವನ್ನಪ್ಪಿದ್ದಾನೆ.

ನಿನ್ನೆ ತಡರಾತ್ರಿ ಘಟನೆ ನಡೆದಿದೆ. ಸುದೀಪ್ ಸಜ್ಜನ್ (23) ಮೃತ ಯುವಕ. ಗಂಗಾವತಿಯ ಪ್ರಶಾಂತ ನಗರದ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ನಿನ್ನೆ ಇದ್ದ ಹಿನ್ನೆಲೆಯಲ್ಲಿ ಮೆರವಣಿಗೆಗೆ ಮಹಾರಾಷ್ಟ್ರದಿಂದ ಡಿಜೆ ತರಿಸಲಾಗಿತ್ತು. ಡಿಜೆ ಸಂಗೀತಕ್ಕೆ ಯುವಸಮೂಹ ಡ್ಯಾನ್ಸ್ ಮಾಡುತ್ತಿತ್ತು. ಈ ಸಂದರ್ಭದಲ್ಲಿ ಡ್ಯಾನ್ಸ್ ಮಾಡುತ್ತಲೇ ಯುವಕ ಸುದೀಪ್ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಘಟನೆ ಹಿನ್ನಲೆಯಲ್ಲಿ ಮೆರವಣಿಗೆ ಮೊಟಕು ಮಾಡಲಾಯಿತು. ಡಿಜೆ ಸದ್ದನಿಂದಾಗಿ ಹೃದಯಾಘಾತ ಆಗಿರಬಹುದು ಎಂದು ಶಂಕಿಸಲಾಗಿದೆ. ಇತ್ತೀಚೆಗೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲೂ ಡಿಜೆ ಸದ್ದಿನಿಂದಾಗಿ ಜಮೀರ್ ಪಿಂಜಾರ (22) ಎಂಬ ಯುವಕ ಮೃತಪಟ್ಟಿದ್ದ. ತುಮಕೂರಿನಲ್ಲಿ ಒಂದು ಘಟನೆ ಹೀಗೇ ನಡೆದಿದ್ದು, ಇದಕ್ಕೂ ಕಾರಣ ಡಿಜೆ ಸೌಂಡ್‌ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Bidar News : ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದು ಬಾಲಕರಿಬ್ಬರು ದುರ್ಮರಣ!

ಭದ್ರಾವತಿಯಲ್ಲಿ ಹಿಂದೂ ಯುವಕನಿಗೆ ಪುಂಡರಿಂದ ಇರಿತ

ಶಿವಮೊಗ್ಗ: ರಾಗಿಗುಡ್ಡದ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಉಂಟಾದ ಗಲಭೆಯ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಶಿವಮೊಗ್ಗದ ಸಮೀಪ ಭದ್ರಾವತಿಯಲ್ಲಿ ಇನ್ನೊಂದು ಹಲ್ಲೆ ಪ್ರಕರಣ ನಡೆದಿದ್ದು, ಕೋಮು ಉದ್ವಿಗ್ನತೆಗೆ ಕಾರಣವಾಗುವ ಸೂಚನೆಗಳು ಕಾಣಿಸಿವೆ. ಹಿಂದೂ ಯುವಕನೊಬ್ಬನಿಗೆ ಅನ್ಯ ಕೋಮಿನ ಪುಂಡರು ಇರಿದಿದ್ದಾರೆ.

ಸ್ಥಳೀಯರಾದ ನಂದಕುಮಾರ (32) ಎಂಬ ಯುವಕನಿಗೆ ಪುಂಡರು ಚೂರಿಯಿಂದ ಇರಿದಿದ್ದಾರೆ. ಭದ್ರಾವತಿಯ ಹನುಮಂತನಗರದ ಬಡಾವಣೆಯಲ್ಲಿ ಘಟನೆ ನಡೆದಿದೆ. ಚೂರಿಯಿಂದ ಬೆನ್ನಿನ ಮೇಲೆ ಯುವಕರ ಗುಂಪು ಇರಿದಿದ್ದು, ಗಾಯಗೊಂಡ ಯುವಕ ಭದ್ರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕರೆ ಮಾಡಲು ನಿನ್ನ ಮೊಬೈಲ್ ಕೊಡು ಎಂದು ಯುವಕರ ಗುಂಪು ಕೇಳಿತ್ತು. ನಂದಕುಮಾರ ಮೊಬೈಲ್‌ ಕೊಡಲು ನಿರಾಕರಿಸಿದಾಗ ಆತನ ಮೇಲೆ ಪುಂಡರು ಹಲ್ಲೆ ನಡೆಸಿದ್ದರು. ಇದರ ಬಗ್ಗೆ ದೂರು ನೀಡಲು ನಂದಕುಮಾರ ಪೊಲೀಸ್‌ ಠಾಣೆಗೆ ತೆರಳಿದ್ದು, ಠಾಣೆಯಿಂದ ವಾಪಸ್ ಬರುತ್ತಿದ್ದಾಗ ಚೂರಿಯಿಂದ ಹಲ್ಲೆ ನಡೆಸಿದ್ದಾರೆ.

ಅನ್ಯಕೋಮಿನ ಯುವಕರಿಂದ ಹಲ್ಲೆ ನಡೆದಿರುವ ಸುದ್ದಿ ತಿಳಿದ ಹಿಂದೂ ಕಾರ್ಯಕರ್ತರು ರಾತ್ರೋರಾತ್ರಿ ಆಸ್ಪತ್ರೆ ಮುಂದೆ ಜಮಾಯಿಸಿದರು. ಪುಂಡರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಶಿವಮೊಗ್ಗದ ರಾಗಿಗುಡ್ಡದಲ್ಲಿ ಉಂಟಾದ ಸನ್ನಿವೇಶದ ಪರಿಣಾಮವಾಗಿ ಶೀಘ್ರವೇ ಎಚ್ಚೆತ್ತುಕೊಂಡಿರುವ ಪೊಲೀಸರು, ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ. ಎಎಸ್ಪಿ ಅನಿಲಕುಮಾರ ಭೂಮರಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಯುವಕನಿಂದ ಮಾಹಿತಿ ಪಡೆದಿದ್ದಾರೆ. ಸ್ಥಳದ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಪುಂಡರ ತಲಾಶೆಗೆ ಬಲೆ ಬೀಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version