ಚಿತ್ರದುರ್ಗ(ಹಿರಿಯೂರು): ಕ್ಷೇತ್ರಕ್ಕೆ ಪ್ರತಿ ವರ್ಷ ಐದು ಟಿಎಂಸಿ ನೀರು ನೀಡಬೇಕು ಎಂದು ಪದೇಪದೆ ಕೇಳಿದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ವೇದಿಕೆಯಿಂದಲೇ ಗದರಿದ ಸಿಎಂ ಬೊಮ್ಮಾಯಿ, ನಂತರ ಶ್ಲಾಘನೆ ವ್ಯಕ್ತಪಡಿಸಿದ ಘಟನೆ ಮಂಗಳಾರ ನಡೆಯಿತು.
ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮನ್ನು ಆಯ್ಕೆ ಮಾಡಿದ ಜನರ ಬದುಕನ್ನು ಹಸನುಗೊಳಿಸಬೇಕು ಎಂಬ ಸಂಕಲ್ಪ ನಮ್ಮದಾದರೆ, ಕಾಂಗ್ರೆಸ್‌ಗೆ ಈ ಕೃತಜ್ಞತೆ ಇಲ್ಲ. ಹತ್ತು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದ್ದು ಬಿ.ಎಸ್. ಯಡಿಯೂರಪ್ಪ ಅವರ ದಾಖಲೆ.
ಭದ್ರಾ ಮೇಲ್ದಂಡೆ ಯೋಜನೆ ಸದ್ಯದಲ್ಲೇ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಆಗಲಿದ್ದು, ನರೇಂದ್ರ ಮೋದಿಯವರ ಸರ್ಕಾರ ಹದಿನಾಲ್ಕು ಸಾವಿರ ಕೋಟಿ ರೂ. ಅನುದಾನ ನೀಡುತ್ತದೆ. ಭದ್ರಾ ಮೇಲ್ದಂಡೆ ಜತೆಗೆ ಉಪಯೋಜನೆಗಳನ್ನೂ ಕೈಗೊಳ್ಳಲು ನಾವು ಸಿದ್ಧರಿದ್ದೇವೆ ಎಂದರು.
ಸಿಎಂ ಬೊಮ್ಮಾಯಿ ಮಾತನಾಡುತ್ತಿರುವ ಸಂದರ್ಭದಲ್ಲಿ ಬಳಿ ಬಂದ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಚೀಟಿಯೊಂದನ್ನು ಇಟ್ಟು ಹೋದರು. ಅದನ್ನು ಕಂಡ ಕೂಡಲೇ ಕೋಪಗೊಂಡ ಸಿಎಂ, ಪೂರ್ಣಿಮಾ ನಿಮಗೆಲ್ಲ ಏನಾಗಿದೆ? ಐದು ಟಿಎಂಸಿ ನೀರು ಕೊಡುತ್ತೇವೆ ಎಂದ ಮೇಲೆ ಕೊಡುತ್ತೇವೆ. ಪದೇಪದೇ ಯಾಕೆ ಕೇಳ್ತೀರ? ಇದನ್ನು ಪ್ರತಿ ವರ್ಷ ಕೊಡುತ್ತೇವೆ. ಬೇಕಿದ್ದರೆ ನಿನ್ನ ಕೈಯಲ್ಲೇ ಆದೇಶ ಕೊಟ್ಟು ಕಳಿಸ್ತೇನೆ ಜನರಿಗೆ ಕೊಟ್ಟುಬಿಡು ಎಂದರು.
ನಂತರ ತುಸು ಕೋಪವನ್ನು ಇಳಿಸಿಕೊಂಡ ಬೊಮ್ಮಾಯಿ, ನಮ್ಮ ಪೂರ್ಣಿಮಕ್ಕ ಇದ್ದಾಳಲ್ಲ ಯಾವ ಕೆಲಸ ಆಗಬೇಕಾದರೂ ಪಟ್ಟು ಬಿಡುವುದೇ ಇಲ್ಲ. ಧರ್ಮಪುರಿ ಕೆಲಸಕ್ಕಾಗಿ ಯಡಿಯೂರಪ್ಪ, ನನ್ನನ್ನು ಬೆಂಬಿಡದೆ ಕೆಲಸ ಮಾಡಿಸಿಕೊಂಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ತಮ್ಮ ಶಾಸಕಿಯನ್ನು ಹೊಗಳಿದ ಕೂಡಲೆ ಸಂತಸಗೊಂಡ ಜನರು ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು.
ಚಿತ್ರದುರ್ಗದಲ್ಲಿರುವ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಬದ್ಧವಾಗಿದ್ದು, 15 ದಿನಗಳೊಳಗೆ ತಜ್ಞರ ಸಮಿತಿಯನ್ನು ಕಳುಹಿಸಿಕೊಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ಹಿಂದು-ಮುಸ್ಲಿಂ ಏಕತೆಯೇ ಮೋದಿ ಅಪೇಕ್ಷೆ: ಮುಸ್ಲಿಮರು BJP ಬೆಂಬಲಿಸಿ ಎಂದ ಯಡಿಯೂರಪ್ಪ