Site icon Vistara News

Contaminated Water : ವಿಷ ಜಲದಿಂದ ಮೃತಪಟ್ಟವರ 5 ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ; ತಕ್ಷಣವೇ FD ಇಡಲು ಧಾವಂತ!

dinesh gundu rao

ಚಿತ್ರದುರ್ಗ: ಜಿಲ್ಲೆಯ ಕಾವಾಡಿಗರ ಹಟ್ಟಿಯಲ್ಲಿ (Kawadigara Hatti) ನಡೆದ ವಿಷ ಜಲ ದುರಂತದಲ್ಲಿ (Contaminated Water) ಮೃತಪಟ್ಟ ಆರು ಮಂದಿಯ ಪೈಕಿ ಐವರ ಕುಟುಂಬಕ್ಕೆ ಸರಕಾರ ತಲಾ 10 ಲಕ್ಷ ರೂ. ಪರಿಹಾರ ವಿತರಣೆ ಮಾಡಿದೆ. ಶನಿವಾರ ಕಾವಾಡಿಗರ ಹಟ್ಟಿಗೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ಕುಟುಂಬಗಳಿಗೆ ಪರಿಹಾರದ ಚೆಕ್‌ ನೀಡಿದರು. ಇದೇ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದರ ಇನ್ನೊಬ್ಬ ಸಚಿವ ಡಿ. ಸುಧಾಕರ್‌ (D Sudhakar) ಅವರು ಈ ಹಣವನ್ನು ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ಡೆಪಾಸಿಟ್‌ (Fixed deposit) ಇಡಿಸಲು ಧಾವಂತ ತೋರಿದರು. ಕೊನೆಗೆ ಸಚಿವರ ಸೂಚನೆಯಂತೆ ತಕ್ಷಣವೇ ಡಿಪಾಸಿಟ್‌ ಮಾಡಲಾಯಿತು!

ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಮಂಜುಳಾ, ರಘು, ಪ್ರವೀಣ್‌, ರುದ್ರಪ್ಪ ಮತ್ತು ಪಾರ್ವತಮ್ಮ ಎಂಬ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಜತೆಗೆ ರಘು ಅವರ ಸೋದರಿ ಉಷಾ ಅವರ ಹೊಟ್ಟೆಯಲ್ಲಿದ್ದ ಎಂಟು ತಿಂಗಳ ಭ್ರೂಣಶಿಶುವೂ ಮೃತಪಟ್ಟಿದೆ. ಒಟ್ಟು 160ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ನಾಲ್ಕು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕಳೆದ ಭಾನುವಾರ ರಾತ್ರಿ ವಿಷ ಜಲ ದುರಂತ ಸಂಭವಿಸಿದ್ದು, ಇನ್ನೂ ಕೆಲವರು ಅಪಾಯದ ಸ್ಥಿತಿಯಲ್ಲೇ ಇದ್ದಾರೆ. ಆದರೆ, ಇದರ ಮೂಲ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಕಲುಷಿತ ನೀರಿನ ವಿಶ್ಲೇಷಣೆಯ ವರದಿಗಳು ಒಂದೊಂದು ಒಂದೊಂದು ಕಥೆ ಹೇಳುತ್ತಿವೆ. ಇತ್ತ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಎಂಜಿನಿಯರ್‌ಗಳು ಸೇರಿದಂತೆ ಐವರನ್ನು ಅಮಾನತು ಮಾಡಲಾಗಿದೆ. ಅದರೆ, ವಿಷ ಹಾಕಿದ್ದಾನೆ ಎಂಬ ಆರೋಪ ಎದುರಿಸುತ್ತಿರುವ ವಾಟರ್‌ ಮ್ಯಾನ್‌ ಸುರೇಶ್‌ನನ್ನು ಇನ್ನೂ ವಿಚಾರಣೆ ಮಾಡಲಾಗಿಲ್ಲ.

ಜಿಲ್ಲಾಡಳಿತ, ವೈದ್ಯಾಧಿಕಾರಿ ಮೇಲೆ ಗ್ರಾಮಸ್ಥರ ಆರೋಪ

ಇದರ ನಡುವೆ ಘಟನೆ ಬೆಳಕಿಗೆ ಬಂದು ಐದು ದಿನಗಳ ನಂತರ ಶನಿವಾರ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮತ್ತು ಇನ್ನೊಬ್ಬ ಸಚಿವ ಡಿ. ಸುಧಾಕರ್‌ ಅವರು ಪ್ರದೇಶಕ್ಕೆ ಭೇಟಿ ನೀಡಿದ್ದಾರೆ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ಸಚಿವ ದಿನೇಶ್‌ ಗುಂಡೂರಾವ್‌ ಅವರ ಮುಂದೆ ಗ್ರಾಮಸ್ಥರು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ಅಸ್ವಸ್ಥರಾಗಿರುವವರು ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾಸ್ಪತ್ರೆಯ ವೈದ್ಯರು ಎಲ್ಲ ಔಷಧಗಳನ್ನು ಹೊರಗಿನ ಮೆಡಿಕಲ್‌ಗಳಿಗೇ ಬರೆಯುತ್ತಾರೆ, ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಘಟನೆಯ ಬಗ್ಗೆ ಸರಿಯಾಗಿ ನಡೆಸುತ್ತಿಲ್ಲ, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆಪಾದಿಸಲಾಯಿತು. ನಮಗೆ ನ್ಯಾಯ ಬೇಕು, ಪರಿಹಾರ ಬೇಕು ಎಂದು ಸಚಿವರ ಮುಂದೆ ಗ್ರಾಮಸ್ಥರು ಆಗ್ರಹಿಸಿದರು.

ಜಿಲ್ಲಾ ಸರ್ಜನ್‌ ಬಸವರಾಜ್‌ ಸಸ್ಪೆಂಡ್‌

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವೇಳೆಯೂ ದಿನೇಶ್‌ ಗುಂಡೂರಾವ್‌ ಅವರ ಮುಂದೆ ಸೌಲಭ್ಯಗಳ ಬಗ್ಗೆ ದೂರು ನೀಡಲಾಯಿತು. ಜಿಲ್ಲಾ ಸರ್ಜನ್‌ ಬಸವರಾಜ್‌ ಅವರು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ವಿಸ್ತಾರ ನ್ಯೂಸ್‌ ಕೂಡಾ ವರದಿ ಮಾಡಿತ್ತು. ಇದೆಲ್ಲವನ್ನೂ ಪರಿಗಣಿಸಿದ ದಿನೇಶ್‌ ಗುಂಡೂ ರಾವ್‌ ಅವರು ಸರ್ಜನ್‌ ಬಸವರಾಜ್‌ ಅವರನ್ನು ಅಮಾನತು ಮಾಡುವಂತೆ ಸೂಚಿಸಿದರು. ಮುಂದಿನ ವಾರ ಒಂದು ತಂಡ ಕಳಿಸುವೆ. ಆಸ್ಪತ್ರೆಯ ಎಲ್ಲ ಕುಂದು ಕೊರತೆಗಳ ಬಗ್ಗೆ ವರದಿ ಪಡೆಯುವೆ. ವರದಿ ಬಂದ ಬಳಿಕ ಆಸ್ಪತ್ರೆಗೆ ಬೇಕಾದ ಎಲ್ಲ ಮೂಲ ಸೌಕರ್ಯ ಒದಗಿಸುತ್ತೇನೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದರು.

ಇದನ್ನೂ ಓದಿ: Contaminated Water : ವಿಷ ಜಲ ದುರಂತಕ್ಕೆ 6ನೇ ಬಲಿ; ತಾಯಿಯ ಗರ್ಭದೊಳಗೇ ಪ್ರಾಣಬಿಟ್ಟ 8 ತಿಂಗಳ ಭ್ರೂಣಶಿಶು

ಪರಿಹಾರ ಹಣ ಬ್ಯಾಂಕ್‌ ಎಫ್‌ಡಿ, ಸಾಲ ಮನ್ನಾ ಭರವಸೆ

ಮೃತ ಐವರ ಮನೆಗೆ ಭೇಟಿ ನೀಡಿದ ಸಚಿವ ದಿನೇಶ್‌ ಗುಂಡೂ ರಾವ್‌ ಅವರು 10 ಲಕ್ಷ ರೂ. ಪರಿಹಾರದ ಚೆಕ್‌ ವಿತರಿಸಿದರು. ಈ ಸಂದರ್ಭದಲ್ಲಿ ಅಲ್ಲೇ ಉಪಸ್ಥಿತರಿದ್ದ ಇನ್ನೊಬ್ಬ ಸಚಿವ ಡಿ. ಸುಧಾಕರ್‌ ಅವರು ಈ ಹಣವನ್ನು ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ಡೆಪಾಸಿಟ್‌ ಇಡುವಂತೆ ಮನವೊಲಿಸಲು ಸಫಲರಾದರು. ಜಿಲ್ಲಾ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿರುವ ಡಿ. ಸುಧಾಕರ್‌ ಅವರು ಜಿಲ್ಲಾ ಬ್ಯಾಂಕ್‌ನಲ್ಲಿ ಡೆಪಾಸಿಟ್‌ ಇಟ್ಟರೆ ರೆಗ್ಯುಲರ್‌ ಬಡ್ಡಿಗಿಂತ ಎರಡು ಶೇಕಡಾ ಹೆಚ್ಚುವರಿ ಬಡ್ಡಿ ನೀಡಲಾಗುವುದು, ಬಡ್ಡಿಯ ಹಣವನ್ನು ತಿಂಗಳು ತಿಂಗಳು ಅವರವರ ಖಾತೆಗೆ ನೀಡಲಾಗುವುದು ಎಂದರು. ಜತೆಗೆ ಸಹಕಾರ ಸಂಘಗಳಲ್ಲಿರುವ ಬಡ್ಡಿ ಮನ್ನಾ ಮಾಡುವುದಾಗಿಯೂ ಭರವಸೆ ನೀಡಿದರು.

ಡಿ. ಸುಧಾಕರ್‌ ಅವರು ಈ ವಿಷಯದಲ್ಲಿ ಎಷ್ಟು ಕ್ವಿಕ್‌ ಆಗಿದ್ದರೆಂದರೆ ಕೂಡಲೇ ಹಣವನ್ನು ಡೆಪಾಸಿಟ್‌ ಮಾಡಿಬಿಟ್ಟರು. ಮೃತಪಟ್ಟ ಮಂಜುಳಾ ಅವರ ಪುತ್ರಿ ಸಾಕ್ಷಿಯ ಹೆಸರಲ್ಲಿ, ಮೃತ ರಘು ಅವರ ಪರಿಹಾರವನ್ನು ವಿಮಲಮ್ಮ ಹೆಸರಲ್ಲಿ, ಪ್ರವೀಣ ಅವರ ಕುಟುಂಬಕ್ಕೆ ನೀಡಿದ ಹಣವನ್ನು ತಾಯಿಯ ಹೆಸರಿನಲ್ಲಿ, ಪಾರ್ವತಮ್ಮ ಅವರ ಪರಿಹಾರವನ್ನು ಮಗ ವೆಂಕಟೇಶ ಹೆಸರಲ್ಲಿ ಡಿಸಿಸಿ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡಲಾಯಿತು. ಬ್ಯಾಂಕ್‌ ಸಿಬ್ಬಂದಿ ಚೆಕ್ ಪಡೆದು ದಾಖಲೆಗಳಿಗೆ ಸಹಿ ಹಾಕಿಸಿಕೊಂಡರು.

Exit mobile version