ಚಿತ್ರದುರ್ಗ: ಕಾವಾಡಿಗರಹಟ್ಟಿ ಜಲ ದುರಂತದ (kawadigara Hatti Water tragedy) ಅಪಾಯಗಳೇ ಇನ್ನೂ ತಗ್ಗಿಲ್ಲ. ಅದರ ನಡುವೆಯೇ ಚಿತ್ರದುರ್ಗ ಜಿಲ್ಲೆಯಲ್ಲಿ (Chithradurga News) ಇನ್ನೊಂದು ವಿಷ ಜಲ (Contaminated water) ದುರಂತ ಸಂಭವಿಸಿದೆ. ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 10 ಮಂದಿ ಅಸ್ವಸ್ಥರಾಗಿದ್ದಾರೆ. ಇವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ಮುದ್ದಾಪುರ ಹೊಸಟ್ಟಿ ಗ್ರಾಮದಲ್ಲಿ ನೀರು ಸೇವಿಸಿದ ಬಳಿಕ ಹಲವರಲ್ಲಿ ವಾಂತಿ ಬೇಧಿ ಕಾಣಿಸಿಕೊಳ್ಳುತ್ತಿದೆ. ಅವರಲ್ಲಿ 10 ಮಂದಿ ಈಗಾಗಲೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಾಧಿಕಾರಿ ಡಿ.ಎಸ್. ದೇವರಾಜ್ ಮಾಹಿತಿ ನೀಡಿದ್ದಾರೆ. ಯೋಗರಾಜ್ (38), ತಿಪ್ಪಮ್ಮ(22) ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಶುಕ್ರವಾರ ಸಂಜೆಯಿಂದಲೇ ಹಲವರಿಗೆ ಅನಾರೋಗ್ಯ ಕಾಡಿದ್ದು, ರಾತ್ರಿಯ ಹೊತ್ತಿಗೆ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲಾಸ್ಪತ್ರೆಯ ಹೊಸ ಎಂಸಿಎಚ್ ವಾರ್ಡ್ ನಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ನಡೆಯುತ್ತಿದೆ.
5 ವರ್ಷದ ಮಗು ಸೇರಿ 9 ಮಂದಿ ಅಸ್ವಸ್ಥರಾಗಿದ್ದಾರೆ. ಅವರಲ್ಲಿ ಒಬ್ಬರನ್ನು ಬಸವೇಶ್ವರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆ ಗ್ರಾಮದ ನೀರಿನ ಸ್ಯಾಂಪಲ್ ಹಾಗೂ ರೋಗಿಗಳ ಸ್ಯಾಂಪಲ್‌ಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಕವಾಡಿಗರ ಹಟ್ಟಿ ದುರಂತ ಇನ್ನೂ ಜೀವಂತವಾಗಿರುವಾಗಲೇ ಇನ್ನೊಂದು ದುರ್ಘಟನೆ ನಡೆದಿರುವುದು ಅಧಿಕಾರಿಗಳ ಮೇಲೆ ಜನರಿಗೆ ಸಿಟ್ಟು ಬರುವಂತೆ ಮಾಡಿದೆ. ಕಾವಾಡಿಗರ ಹಟ್ಟಿ ಪ್ರಕರಣದಲ್ಲೂ ಕಲುಷಿತ ನೀರಿನ ಮೂಲ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಯಾರ ಬಂಧನವೂ ಆಗಿಲ್ಲ. ಕೇವಲ ಟೆಸ್ಟ್‌ಗಳ ಹಂತದಲ್ಲೇ ಅದು ನಿಂತಿದೆ.
ಒಟ್ಟು ಏಳು ಮಂದಿಯ ಪ್ರಾಣ ಕಳೆದ ದುರಂತದ ಬಗ್ಗೆ ಜಿಲ್ಲಾಡಳಿತ ಮೌನವಾಗಿರುವುದು, ಜನಪ್ರತಿನಿಧಿಗಳು ಕೂಡಾ ತೋರಿಕೆಯ ಮಾತು ಆಡುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯ ಎಷ್ಟೋ ಗ್ರಾಮದಲ್ಲಿ ವಿಷ ಜಲ ಹರಿಯುತ್ತಿದೆ. ಅದು ಕುಡಿಯುವ ನೀರಿಗೆ ಮಿಶ್ರಣವಾಗಿ ಸಮಸ್ಯೆ ಸೃಷ್ಟಿಸುತ್ತಿದೆಯಾ ಎನ್ನುವ ಬಗ್ಗೆಯೂ ಪರಿಶೀಲನೆ ನಡೆದಂತಿಲ್ಲ.
ಇದನ್ನೂ ಓದಿ: Contaminated Water : ಕಾವಾಡಿಗರ ಹಟ್ಟಿ ವಿಷಜಲ ದುರಂತಕ್ಕೆ ಇನ್ನೊಂದು ಬಲಿ; ಒಟ್ಟು ಸಾವಿನ ಸಂಖ್ಯೆ 6+1ಕ್ಕೆ ಏರಿಕೆ
ಕಾವಾಡಿಗರಹಟ್ಟಿಯ ದುರಂತ ಏನಾಯಿತು?
ಚಿತ್ರದುರ್ಗ ತಾಲೂಕಿನ ಕಾವಾಡಿಗರ ಹಟ್ಟಿಯಲ್ಲಿ ಆವತ್ತು ನೀರು ಕುಡಿದವರಲ್ಲಿ 250ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದು, ಇನ್ನೂ ಹಲವರು ಅಲ್ಲೇ ಇದ್ದಾರೆ. ದುರಂತ ನಡೆದ ದಿನವೇ ಮಂಜುಳಾ ಎಂಬವರು ಮೃತಪಟ್ಟರೆ, ಮರುದಿನ ಬೆಂಗಳೂರಿಗೆ ಬಂದಿದ್ದ ರಘು ಪ್ರಾಣ ಕಳೆದುಕೊಂಡಿದ್ದಾರೆ. ಮುಂದೆ ರುದ್ರೇಶ್, ಪ್ರವೀಣ್, ಪಾರ್ವತಮ್ಮ, ಹೀಗೆ ಒಟ್ಟು ಆರು ಮಂದಿ ಹಾಗೂ ರಘು ಅವರ ಸಹೋದರಿ ಉಷಾ ಅವರ ಹೊಟ್ಟೆಯಲ್ಲಿದ್ದ ಮಗು ಕೂಡಾ ಮೃತಪಟ್ಟಿದೆ.
ಇಲ್ಲಿನ ವಾಟರ್‌ಮ್ಯಾನ್ ಸುರೇಶ್ ಈ ಹಟ್ಟಿಯ ಎಸ್‌ಟಿ ಯುವಕ ತನ್ನ ಮಗಳನ್ನು ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕೆ ವಿಷ ಬೆರೆಸಿದ್ದಾನೆ ಎಂಬ ಆರೋಪವಿದ್ದರೂ ಜಿಲ್ಲಾಡಳಿತ ಇದರ ಬಗ್ಗೆ ಇನ್ನೂ ಗಮನವನ್ನೇ ಕೊಟ್ಟಿಲ್ಲ. ಒಟ್ಟು ಐದು ಮಂದಿ ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡಿದ್ದು ಬಿಟ್ಟರೆ ಯಾವ ನ್ಯಾಯವೂ ಸಿಕ್ಕಿಲ್ಲ.