Site icon Vistara News

Karnataka Election 2023: ಟಿಕೆಟ್ ನೀಡಿದ‌ ಕಾಂಗ್ರೆಸ್‌ ವರಿಷ್ಠರಿಗೆ ನನ್ನ ಧನ್ಯವಾದ: ವೀರೇಂದ್ರ ಪಪ್ಪಿ

#image_title

ಹಿರಿಯೂರು: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವು ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್‌ ನೀಡಿದೆ. ತಮ್ಮ ಮೇಲೆ ನಂಬಿಕೆ ಇಟ್ಟ ಪಕ್ಷದ ಹಿರಿಯ ಮುಖಂಡರಿಗೆ (Karnataka Election 2023) ನಾನು ಧನ್ಯವಾದವನ್ನು ಹೇಳಬಯಸುತ್ತೇನೆ ಎಂದು ವೀರೇಂದ್ರ ಪಪ್ಪು ಹೇಳಿದ್ದಾರೆ.

ಟಿಕೆಟ್ ಘೋಷಣೆಯಾದ ಮೊದಲ ಬಾರಿಗೆ ಚಿತ್ರದುರ್ಗ ಕ್ಷೇತ್ರಕ್ಕೆ ತೆರಳುವಾಗ ಸಾಗರ್ ಡಾಬಾ ಬಳಿ ಕಾರ್ಯಕರ್ತರನ್ನು ಭೇಟಿ ಮಾಡಿದ ಅವರು, ಖುಷಿಯನ್ನು ಹಂಚಿಕೊಂಡರು.

“ನಾನು ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೇನೆ. ನನ್ನ ವ್ಯಕ್ತಿತ್ವವನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಮೂಲಕ ಹೊಸ ಜವಾಬ್ದಾರಿ ನೀಡಿದೆ. ನನಗೆ ಟಿಕೆಟ್ ಕೊಟ್ಟ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ವರಿಷ್ಠರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ವೀರೇಂದ್ರ ಪಪ್ಪಿ ಹೇಳಿದರು.

“ಚುನಾವಣೆ ಚಟುವಟಿಕೆ ಕಳೆದ 40 ದಿನಗಳಿಂದ ನಡೆಯುತ್ತಿದೆ. ಕ್ಷೇತ್ರದಲ್ಲಿ ನಿರಂತರವಾಗಿ ಮತದಾರರ ಸಂಪರ್ಕದಲ್ಲಿ ಇದ್ದುಕೊಂಡು ಕ್ಷೇತ್ರಾದ್ಯಂತ ಒಂದು ಸುತ್ತಿನ ಪ್ರಚಾರ ಕೈಗೊಳ್ಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೇರೆ ಪಕ್ಷದಿಂದ ಸ್ಪರ್ಧಿಸಿ 50 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೆ. ನಾನು ಆ ಪಕ್ಷದಲ್ಲಿದ್ದಾಗ ಬೆಂಬಲಿಸಿದ್ದ ಕಾರ್ಯಕರ್ತರು ಈಗಲೂ ಸಹ ನನ್ನ ಬೆಂಬಲಕ್ಕೆ ನಿಂತಿರುವುದರಿಂದಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ನಿಶ್ಚಿತ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ISRO: ಚಿತ್ರದುರ್ಗದ ಅದೃಷ್ಟದ ನೆಲೆಯಲ್ಲಿ ಯಶಸ್ವಿಯಾದ ಮಾನವರಹಿತ ರಿಯೂಸೆಬಲ್ ರಾಕೆಟ್‌ ಪರೀಕ್ಷೆ

“ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, 40% ಕಮಿಷನ್, ಜನ ಸಾಮಾನ್ಯರ ವಿರೋಧಿ ಆಡಳಿತ ಇವೆಲ್ಲವನ್ನೂ ನೋಡಿರುವ ಜನರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ. ಬಡವರ ಪರವಾಗಿ ನುಡಿದಂತೆ ನಡೆಯುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ” ಎಂದು ಹೇಳಿದರು.

ಮಾಜಿ ಎಂಎಲ್ಸಿ ರಘು ಆಚಾರ್ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆ ಕ್ಷೇತ್ರದಲ್ಲಿ ಅಸಮಾಧಾನ ಉಂಟಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪಪ್ಪಿ, “ಅಸಮಾಧಾನ ಎಂಬುದು ಕಾಂಗ್ರೆಸ್ ಪಾರ್ಟಿಯಲ್ಲಿ ಎಲ್ಲೂ ಕಂಡು ಬಂದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಹೊಂದಾಣಿಕೆಯಿಂದ ಇದ್ದೇವೆ. ಪಕ್ಷದ ತತ್ವ ಸಿದ್ಧಾಂತದ ಮೇಲೆ ನಾವೆಲ್ಲರೂ ನಿಂತಿದ್ದೇವೆ. ಅಸಮಾಧಾನ ಇದೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಯಾವುದೇ ರೀತಿಯ ಅಸಮಾಧಾನ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜಯ ಸಿಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Election 2023: ಕಾಂಗ್ರೆಸ್‌ 2ನೇ ಪಟ್ಟಿ ಪ್ರಕಟ; ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಉಡುಪಿಯಲ್ಲಿ ಭಿನ್ನಮತ ಸ್ಫೋಟ

ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್ ದೊರೆತ ಹಿನ್ನೆಲೆಯಲ್ಲಿ ಅಭಿಮಾನಿಗಳು ಅವರನ್ನು ಸನ್ಮಾನಿಸಿ ಶುಭ ಕೋರಿದರು. ಈ ವೇಳೆ ಹರ್ತಿಕೋಟೆ ತಿಪ್ಪೇಸ್ವಾಮಿ, ಬೀರೆನಹಳ್ಳಿ ಶಿವಣ್ಣ, ತೇಜು, ಗಿಡ್ಡೋಬನಹಳ್ಳಿ ಅಶೋಕ್, ಅರುಣ್, ಹೂವಿನಹೊಳೆ ಸಂಜಯ್, ಮಹಾಂತೇಶ್, ಶಂಭು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Exit mobile version