Site icon Vistara News

Karnataka Election 2023: ಕೈ ತಪ್ಪಿದ ಕಾಂಗ್ರೆಸ್‌ ಟಿಕೆಟ್;‌ ಪಕ್ಷೇತರ ಸ್ಪರ್ಧೆಗಾಗಿ ಡಾ.ಯೋಗೇಶ್‌ ಬಾಬುಗೆ ಒತ್ತಡ

#image_title

ಮೊಳಕಾಲ್ಮೂರು: ವಿಧಾನಸಭಾ ಚುನಾವಣೆಗೆ (Karnataka Election 2023) ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಹಲವು ಕಾಂಗ್ರೆಸ್‌ ನಾಯಕರಿಗೆ ಆಘಾತ ಉಂಟಾಗಿದೆ. ಅದೇ ರೀತಿಯ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಡಾ.ಯೋಗೇಶ್‌ ಬಾಬು ಅವರಿಗೂ ಟಿಕೆಟ್‌ ತಪ್ಪಿ ಹೋಗಿದ್ದು, ಇದೀಗ ಅವರು ಪಕ್ಷೇತರವಾಗಿ ಸ್ಪರ್ಧಿಸಲಿದ್ದಾರೆಯೇ ಎನ್ನುವ ಅನುಮಾನ ಶುರುವಾಗಿದೆ.

ಬಿಜೆಪಿ ಪಕ್ಷದಿಂದ ಶಾಸಕರಾಗಿದ್ದ ಎನ್‌.ವೈ.ಗೋಪಾಲಕೃಷ್ಣ ಅವರು ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದು, ಅವರಿಗೇ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದೆ. ಟಿಕೆಟ್‌ ಘೋಷಣೆಯಾದ ಬೆನ್ನಲ್ಲೇ ಯೋಗೇಶ್‌ ಅವರ ಅಭಿಮಾನಿಗಳು ಭಾರಿ ಆಕ್ರೋಶವನ್ನು ಹೊರಹಾಕಿದ್ದಾರೆ. ಪಕ್ಷೇತರವಾಗಿ ನಿಲ್ಲಲೇಬೇಕು ಎಂದು ಯೋಗೇಶ್‌ ಅವರ ಮೇಲೆ ಒತ್ತಡ ಹಾಕಲಾರಂಭಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ತಮಗೆ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬಿಜಿಕೆರೆ ಗ್ರಾಮದಲ್ಲಿ ಬೆಂಬಲಿಗರ ಸಭೆ ನಡೆಸುವ ಮೂಲಕ ಮುಂದಿನ ನಿರ್ಧಾರದ ಬಗ್ಗೆ ಜನಾಭಿಪ್ರಾಯ ಸಂಗ್ರಹಕ್ಕೆ ಯೋಗೇಶ್ ಬಾಬು ಮುಂದಾಗಿದ್ದಾರೆ. “ನಿರಂತರ ಪಕ್ಷ ಸಂಘಟನೆ ಮಾಡುತ್ತಾ ಬಂದು ಪಕ್ಷದಲ್ಲಿ ಪ್ರಾಮಾಣಿಕವಾಗಿ ಇರುವ ಕಾರ್ಯಕರ್ತರಿಗೆ ಬೆಲೆ ಇಲ್ಲ. ಪಕ್ಷಕ್ಕೆ ಯಾರು ಮುಖ್ಯರು ಯಾರು ಅಮುಖ್ಯರು ಎಂದು ತೋರಿಸುವ ಸಮಯ ಬಂದಿದೆ” ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವಂತೆ ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Karnataka Elections : ಚಿತ್ರದುರ್ಗದ ಕಾಂಗ್ರೆಸ್‌ ಟಿಕೆಟ್‌ ವಂಚಿತ ರಘು ಆಚಾರ್‌ ಜೆಡಿಎಸ್‌ ಸೇರ್ಪಡೆ?

ಕಾಂಗ್ರೆಸ್ ಮುಖಂಡ ಯೋಗೇಶ್ ಬಾಬು ಮಾತನಾಡಿ, “ಕಾರ್ಯಕರ್ತರೇ ನನಗೆ ಹೈಕಮಾಂಡ್. ಜನರ ತೀರ್ಮಾನವೇ ನನಗೆ ಅಂತಿಮ. ಕಾಂಗ್ರೆಸ್ ಟಿಕೆಟ್ ನನ್ನಿಂದ ಕಸಿದುಕೊಂಡಿರಬಹುದು ಆದರೆ ನಾಯಕತ್ವವನ್ನು ಕಸಿದುಕೊಳ್ಳಲು ಆಗುವುದಿಲ್ಲ. ಕಾಂಗ್ರೆಸ್ ವರಿಷ್ಠರು ನಿನ್ನದೇ ಟಿಕೆಟ್ ಎಂದು ಹೇಳಿದ್ದರು. ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣರವರಿಗೆ ಕೂಡ್ಲಿಗಿ ಟಿಕೆಟ್ ನೀಡುವುದಾಗಿ ಹೇಳಿದ್ದರು. ಇದು ರಾಹುಲ್ ಗಾಂಧಿಯವರ ಗಮನಕ್ಕೂ ಹೋಗಿತ್ತು. ಕೊನೇ ಘಳಿಗೆಯಲ್ಲಿ ಎಲ್ಲವೂ ಬದಲಾಗಿದೆ. ಈ ಬಗ್ಗೆ ನನಗೆ ತುಂಬಾ ಬೇಸರವಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಮತ್ತು ಜನರ ಅಭಿಪ್ರಾಯ ಕೇಳೋಣ. ಜನರು ಏನೇ ತೀರ್ಮಾನ ಕೈಗೊಂಡರು ನಾನು ಬದ್ಧನಾಗಿರುತ್ತೇನೆ” ಎಂದು ಹೇಳಿದ್ದಾರೆ.

Exit mobile version