ಹಿರಿಯೂರು: ರಾಜ್ಯಾದ್ಯಂತ ಚುನಾವಣಾ (Karnataka Election 2023) ನೀತಿ ಸಂಹಿತೆ ಜಾರಿಯಾಗಿದೆ. ಹೀಗಿರುವಾಗ ಜಾತ್ರೆ, ಹಬ್ಬ, ಉತ್ಸವಗಳಂತಹ ಧಾರ್ಮಿಕ ಕೆಲಸ ಕಾರ್ಯಗಳಿಗೆ ಅದಕ್ಕೆ ಸಂಬಂಧಿಸಿದ ಮುಖಂಡರು ಮಾತ್ರ ಲಿಖಿತ ರೂಪದಲ್ಲಿ ಅರ್ಜಿ ಪಡೆದು ಷರತ್ತು ಬದ್ಧವಾಗಿ ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳ ಮೂಲಕ ಅನುಮತಿ ಪಡೆಯಬಹುದಾಗಿದೆ ಎಂದು ತಾಲೂಕು ತಹಸೀಲ್ದಾರ್ ಪ್ರಶಾಂತ್ ಕೆ. ಪಾಟೀಲ್ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಚುನಾವಣಾ ಅಧಿಕಾರಿ ಕೆ.ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿ, “ಬ್ಯಾನರ್ ಹಂಚಲು, ರ‍್ಯಾಲಿ ಮಾಡಲು, ಧ್ವನಿವರ್ಧಕ ಬಳಕೆ, ವಿಡಿಯೊ ಚಿತ್ರೀಕರಣ, ವಾಹನ ಸಂಚಾರ, ಏರ್ ಬಲೂನ್ ಸೇರಿದಂತೆ ಯಾವುದೇ ಚುನಾವಣೆ ಸಂಬಂಧಿತ ಚಟುವಟಿಕೆಗಳಿಗೆ ಸುವಿಧ ಏಕಗವಾಕ್ಷಿ ಕೇಂದ್ರ ಡಿಟಿಪಿ ಸೆಂಟರ್, ಜೆರಾಕ್ಸ್ ಸೆಂಟರ್‌ನಲ್ಲಿ 48 ಘಂಟೆಗಳ ಮುಂಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬೇಕು. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದರು.
ಇದನ್ನೂ ಓದಿ: Hiriyuru News: ಹಿರಿಯೂರು ಬಿಜೆಪಿ ಶಾಸಕಿಗೆ ಬಿಗ್ ಶಾಕ್; ಪಕ್ಷ ತೊರೆದು ಕೈ ಹಿಡಿಯಲಾರಂಭಿಸಿದ ಆಪ್ತರು!
“ತಾಲೂಕಿನಲ್ಲಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಎಸ್.ಎಸ್.ಟಿ ಮದ್ದಿಹಳ್ಳಿ, ಪಿಡಿ ಕೋಟೆ, ಗೊಲ್ಲಹಳ್ಳಿ, ಗೋಕುಲನಗರ, ಗುಲಾಲ್ ಟೋಲ್, ರಂಜಿತಾ ಹೋಟೆಲ್ ಮುಂಭಾಗ ಸೇರಿದಂತೆ 6 ಕಡೆ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಒಬ್ಬ ಪೊಲೀಸ್ ಅಧಿಕಾರಿ, ವಿಡಿಯೊಗ್ರಾಫರ್, ಒಬ್ಬರು ಎಸ್.ಎಸ್.ಟಿ ಅಧಿಕಾರಿ ಇರುತ್ತಾರೆ. ಯಾವುದೇ ಲೆಕ್ಕ, ಆಧಾರವಿಲ್ಲದ ಹಣ, ವಸ್ತುಗಳನ್ನು ಸಾಗಣೆ ಮಾಡಿದರೆ ಎಫ್.ಐ.ಆರ್ ದಾಖಲಿಸಿ, ಹಣವನ್ನು ಇಲಾಖೆ ವಶಕ್ಕೆ ಪಡೆಯಲಾಗುತ್ತದೆ. ಎಂ3 ವರ್ಷನ್ ಇವಿಎಂ ವಿಷನ್‌ಗಳು ಹೈದರಾಬಾದ್‌ನಿಂದ ಚಿತ್ರದುರ್ಗಕ್ಕೆ ಬಂದಿವೆ. ನಮ್ಮ ತಾಲೂಕಿಗೆ ಇವಿಎಂ ವಿಷನ್‌ಗಳು ನಾಳೆ ಬರಲಿವೆ. ಅವುಗಳನ್ನು ಬಾಲಕಿಯರ ಪಿಯು ಕಾಲೇಜಿನಲ್ಲಿ ಸಂಗ್ರಹಿಸಿಡಲಾಗುತ್ತದೆ. ಈ ಸ್ಥಳದಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದು, ಪೊಲೀಸ್ ಇಲಾಖೆ ಹಾಗೂ ಮಿಲಿಟರಿ ಇಲಾಖೆಗಳ ಕಾವಲಿನಲ್ಲಿ ಇಡಲಾಗುತ್ತದೆ” ಎಂದರು.
“ತಾಲೂಕಿನಲ್ಲಿ 285 ಚುನಾವಣಾ ಬೂತ್‌ಗಳಿದ್ದು, 28 ಸೆಕ್ಟರ್ ಟೀಂಗಳನ್ನು ಮಾಡಲಾಗಿದೆ. ಒಬ್ಬ ಸೆಕ್ಟರ್ ಆಫೀಸರ್‌ಗೆ ಸುಮಾರು 10-12 ಬೂತ್‌ಗಳನ್ನು ನೀಡಲಾಗಿದೆ. ಸೆಕ್ಟರ್ ಆಫೀಸರ್‌ಗಳು ತಮ್ಮ ಬೂತ್‌ಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾರೆ. ಈಗಾಗಲೇ ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಕೋ-ಆಪರೇಟಿವ್ ಸೊಸೈಟಿ, ಸಹಕಾರ ಸಂಘಗಳು, ಜ್ಯುವೆಲರಿ ಅಂಗಡಿ, ಬ್ಯಾಂಕ್‌ಗಳು, ಗಿರವಿ ಅಂಗಡಿಗಳು, ಪೆಟ್ರೋಲ್ ಬಂಕ್‌ಗಳಿಗೆ ಸಭೆ ಕರೆದು ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ: Road accident : ಹಿರಿಯೂರು ಬಳಿ ಬಸ್, ಟಾಟಾ ಏಸ್, ಲಾರಿಗಳ ಸರಣಿ ಅಪಘಾತ; ಒಬ್ಬ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ
ತಾಲೂಕು ಚುನಾವಣಾ ಅಧಿಕಾರಿಗಳಾದ ಕೆ.ತಿಮ್ಮಪ್ಪ ಮಾತನಾಡಿ, “ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಹಣ, ಸೀರೆಗಳು, ಮದ್ಯಪಾನ ಹಂಚುವುದನ್ನು ನಿಷೇಧಿಸಲಾಗಿದೆ. ಈಗಾಗಲೇ ಮದ್ಯ ಮಾಲೀಕರು ಹಾಗೂ ಟೆಕ್ಸ್‌ಟೈಲ್ ವ್ಯಾಪಾರಿಗಳಿಗೆ ಸಭೆ ನಡೆಸಿ, ಯಾವುದೇ ರೀತಿಯ ಬಟ್ಟೆ, ಮದ್ಯ ಹಂಚಿಕೆ ಮಾಡುವಂತಿಲ್ಲ, ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಚುನಾವಣಾ ಕೇಂದ್ರದಿಂದ 200 ಮೀಟರ್ ಒಳಗಡೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳ 3 ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಸುವಿಧ ಮೂಲಕ 54 ಅರ್ಜಿಗಳು ಬಂದಿದ್ದು, ಅದರಲ್ಲಿ 8 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಸುವಿಧ ಸರ್ವರ್ ತೊಂದರೆಯಾದಲ್ಲಿ ಚುನಾವಣಾ ಅಧಿಕಾರಿಗಳಿಂದ ಭೌತಿಕ ಅರ್ಜಿ ಪಡೆದುಕೊಳ್ಳಬಹುದಾಗಿದೆ” ಎಂದು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ತಾಲೂಕು ತಹಸೀಲ್ದಾರ್ ಪ್ರಶಾಂತ್ ಪಾಟೀಲ್, ತಾಲೂಕು ಚುನಾವಣಾ ಅಧಿಕಾರಿ ಕೆ.ತಿಮ್ಮಪ್ಪ, ಚುನಾವಣಾ ಅಧಿಕಾರಿ ಶಿವಪ್ರಕಾಶ್, ಎಇಒ ಶಶಿಧರ್ ಬಾಲರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.