ಹಿರಿಯೂರು: ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ಮಾಜಿ ಸಚಿವ, ಹಿರಿಯೂರು ಕಾಂಗ್ರೆಸ್ ಅಭ್ಯರ್ಥಿ (Karnataka Election) ಡಿ. ಸುಧಾಕರ್ ಹೇಳಿದರು.
ಬುಧವಾರ ಚುನಾವಣಾ ಕಛೇರಿಗೆ ತೆರಳಿ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2018ರಲ್ಲಿ ಸೋತರೂ ಕ್ಷೇತ್ರದ ಶಾಸಕನ ಹೇಗೆಯೇ ಜನರ ಜತೆ ನಿಂತಿದ್ದೇನೆ. ಪ್ರತಿ ವಾರ ಹಳ್ಳಿಗಳಲ್ಲಿ ಸುತ್ತಾಡಿದ್ದೇನೆ. ನನ್ನ ಕಚೇರಿಯಲ್ಲಿ ಕುಳಿತು ಜನರ ಕಷ್ಟಗಳನ್ನು ಆಲಿಸಿ, ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸಿದ್ದೇನೆ. ಈ ಕ್ಷೇತ್ರದ ಮತದಾರರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ, ತಾಲೂಕಿನ ಜನತೆಗೆ ಸ್ವಚ್ಛ ಮತ್ತು ದಕ್ಷ ಆಡಳಿತವನ್ನು ಕೊಡುತ್ತೇನೆ. ಭ್ರಷ್ಟಾಚಾರ ರಹಿತವಾಗಿ, ಬಡವರಿಗೆ ನ್ಯಾಯಯುತ ಆಡಳಿತ ಕೊಡುತ್ತೇನೆ” ಎಂದರು.
“ಎದುರಾಳಿ ಆಗಿರುವುದು ಯಾವ ಪಕ್ಷ ಎಂದು ನನಗೆ ಗೊತ್ತಿಲ್ಲ. ಹಿಂದೆ ಹತ್ತು ವರ್ಷಗಳ ಕಾಲ ಶಾಸಕರಾಗಿದ್ದಾಗ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗಿದೆ. ನಾನೇ ಗೆಲ್ಲುತ್ತೇನೆ ಎಂದು ಕ್ಷೇತ್ರದಲ್ಲಿ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಒಳ್ಳೇ ಮಾರ್ಜಿನ್‌ನಿಂದ ಗೆಲ್ಲುತ್ತೇನೆ. ನನ್ನ ಕ್ಷೇತ್ರದ ಮತದಾರರು ಅಭೂತಪೂರ್ವ ಗೆಲುವು ಕೊಡುತ್ತಾರೆ ಎಂಬ ನಿರೀಕ್ಷೆ ಇದೆ” ಎಂದು ಗೆಲುವಿನ ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Elections 2023 : ನಾಮಪತ್ರ ಸಲ್ಲಿಕೆಗೆ ಸುಧಾಕರ್ ರೆಡಿ; ಅಮ್ಮ, ಮನೆ ದೇವರ ಆಶೀರ್ವಾದ ಪಡೆದ ಆರೋಗ್ಯ ಸಚಿವ
ಇದಕ್ಕೂ ಮುನ್ನ ನಗರದ ತೇರು ಮಲ್ಲೇಶ್ವರ ದೇವಾಲಯ, ನೇಕ್ ಬಿಬಿ ದರ್ಗಾ, ಚರ್ಚ್, ಮಸೀದಿ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ತೆರಳಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಾವಿರಾರು ಕಾರ್ಯಕರ್ತರೊಂದಿಗೆ ನಗರದ ರಂಜಿತಾ ಹೋಟೆಲ್‌ನಿಂದ ರೋಡ್ ಶೋ ನಡೆಸಿದರು. ಮಾಜಿ ಸಚಿವ ಡಿ.ಸುಧಾಕರ್ ಅವರಿಗೆ ಪತ್ನಿ ಹರ್ಷಿಣಿ ಸುಧಾಕರ್, ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು.
2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿ, ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿ ಸಚಿವರಾಗಿದ್ದ ಸುಧಾಕರ್ ಅವರು 2013ರಲ್ಲಿ ದಿವಂಗತ ಮಾಜಿ ಸಚಿವ ಎ. ಕೃಷ್ಣಪ್ಪ ವಿರುದ್ಧ ಕೂದಲೆಳೆ ಅಂತರದಲ್ಲಿ ಮತ್ತೊಮ್ಮೆ ಜಯ ಸಾಧಿಸಿದ್ದರು. ನಂತರ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸೋಲು ಕಂಡಿದ್ದರು. ಇದೀಗ ಐದನೇ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.