Site icon Vistara News

ಮುರುಘಾಶ್ರೀಗಳಿಗೆ ಉತ್ತರಾಧಿಕಾರಿ ನೇಮಕ: ಎರಡು ವರ್ಷದ ಮೊದಲೇ ಆಗಿತ್ತು ನಿರ್ಧಾರ

ಮುರುಘರಾಜೇಂದ್ರ ಬೃಹನ್ಮಠ ಉತ್ತರಾಧಿಕಾರಿ ಆಯ್ಕೆ

ಚಿತ್ರದುರ್ಗ: ರಾಜ್ಯದ ಪ್ರಮುಖ ಧಾರ್ಮಿಕ ಸಂಸ್ಥೆಗಳಲ್ಲೊಂದಾದ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠ ಉತ್ತರಾಧಿಕಾರಿ ಆಯ್ಕೆಯಾಗಿದೆ. ಶುಕ್ರವಾರ ನಡೆದ ಶರಣ ಸಭೆಯಲ್ಲಿ ಡಾ. ಶಿವಮೂರ್ತಿ ಮುರುಘಾಶರಣರು ಉತ್ತರಾಧಿಕಾರಿ ಆಯ್ಕೆ ಮಾಡಿದರು. ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮದ ಶಿವಮೂರ್ತಯ್ಯ ಹಾಗೂ ಚಂದ್ರಕಲಾ ದಂಪತಿಗಳ ಏಕೈಕ ಪುತ್ರರಾದ ಬಸವಾದಿತ್ಯ ಅವರು ಉತ್ತರಾಧಿಕಾರಿಯಾಗಿ ಘೋಷಿಸಲ್ಪಟ್ಟಿದ್ದಾರೆ.

ಡಾ.ಶಿವಮೂರ್ತಿ ಮುರುಘಾ ಶರಣರು, ನಾಡಿನ ಅನೇಕ ಕಡೆಗಳಿಂದ ಬಂದಿದ್ದ ಮಠದ ಭಕ್ತರೆದುರು ಉತ್ತರಾಧಿಕಾರಿ ಆಯ್ಕೆಯನ್ನು ಘೋಷಿಸಿದರು. ಮಠದ ಗುರುಕುಲದಲ್ಲಿಯೇ ಇದ್ದು, ಎರಡು ವರ್ಷ ಪಿಯುಸಿ ಅಭ್ಯಸಿಸಿರುವ ಬಸವಾದಿತ್ಯ ಅವರು, ಕೆಲದಿನಗಳಿಂದ ಡಾ.ಶಿವಮೂರ್ತಿ ಮುರುಘಾ ಶರಣರ ಜತೆಗೆ ಓಡಾಟದಲ್ಲೂ ಪಾಲ್ಗೊಂಡಿದ್ದರು.

ಈ ಕುರಿತಂತೆ ಮಾತನಾಡಿದ ಮುರುಘಾ ಶರಣರು, ಮಠಕ್ಕೆ ಬಂದ ಮೇಲೆ ಸಂಪೂರ್ಣ ಅಧ್ಯಾತ್ಮಿಕತೆಯತ್ತ ವಾಲಿದ ಬಸವಾದಿತ್ಯ ಅವರು, ಗಮನ ಸೆಳೆದಿದ್ದರು. ಎರಡು ವರ್ಷದ ಹಿಂದೆಯೇ ಉತ್ತರಾಧಿಕಾರಿ ಆಯ್ಕೆಯಾಗಿತ್ತು. ಮಠದ ಆಡಳಿತದ ಸ್ಪಷ್ಟತೆಗಾಗಿ ಆಯ್ಕೆ ನಡೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಕೊಳದ ಮಠ ಪೀಠಾಧ್ಯಕ್ಷರ ಆಯ್ಕೆ ವಿವಾದ ತಾರಕಕ್ಕೆ: ಸ್ವಾಮೀಜಿ ಕುಟುಂಬದಲ್ಲಿ ಕಲಹ

ತಂದೆ ತಾಯಿಯ ಸಂತಸ

ಉತ್ತರಾಧಿಕಾರಿ ಆಯ್ಕೆಗೆ ಬಸವಾದಿತ್ಯ ಅವರ ತಂದೆ ಶಿವಮೂರ್ತಯ್ಯ ಹಾಗೂ ತಾಯಿ ಚಂದ್ರಕಲಾ ಅವರಿಗೂ ತಿಳಿಸಲಾಗಿತ್ತು. ಆದರೆ, ಉತ್ತರಾಧಿಕಾರಿ ನೇಮಕದ ಘೋಷಣೆ ತಿಳಿಸಿರಲಿಲ್ಲ. ಮೊದಲಿನಿಂದಲೂ ಮಠದ ಭಕ್ತರಾಗಿರುವ ಇವರು ಮಗ ಮುರುಘರಾಜೇಂದ್ರ ಬೃಹನ್ಮಠಕ್ಕೆ ಪೀಠಾಧಿಪತಿಯಾಗಿ ಘೋಷಣೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ದೊಡ್ಡಮ್ಮನ ಮೂಲಕ ಸಂಪರ್ಕ

ಬಸವಾದಿತ್ಯ ಅವರ ದೊಡ್ಡಮ್ಮ ದಾಕ್ಷಾಯಿಣಿ ಅವರಿಗೆ ಚಿತ್ರದುರ್ಗದ ಮುರುಘಾ ಮಠದೊಂದಿಗೆ 30 ವರ್ಷದ ನಂಟಿದೆ. ಪ್ರತಿ ತಿಂಗಳು ನಡೆಯುವ ಶರಣ ಸಂಗಮಕ್ಕೆ ಬರುವ ಅವರು, ಬಸವಾದಿತ್ಯ ಅವರಿಗೆ ಮುರುಘರಾಜೇಂದ್ರ ಮಠದ ನಂಟು ಬೆಳೆಯಲು ಕಾರಣ. ಆ ನಂಟು ಇಲ್ಲಿಯವರೆಗೂ ನಡೆದು ಬಂದದ್ದು ಖುಷಿಯ ವಿಚಾರ ಎಂದರು.

ಚುರುಕು ವಿದ್ಯಾರ್ಥಿ

ಮುರುಘಾ ಮಠದ ಆಡಳಿತದಡಿ ನಡೆಯುವ ಗುರುಕುಲದಲ್ಲಿ ಇದ್ದುಕೊಂಡೇ ದ್ವಿತೀಯ ಪಿಯುಸಿ ಓದಿರುವ ಬಸವಾದಿತ್ಯ ಅವರು, ಚುರುಕು ವಿದ್ಯಾರ್ಥಿ ಎಂದೇ ಶಿಕ್ಷಕರಿಂದ ಹೆಸರು ಗಳಿಸಿಕೊಂಡವರು. ಮುಂದೆ ಫಿಲಾಸಫಿ, ಕ್ರಿಮಿನಾಲಜಿ, ಜರ್ನಲಿಸಂ ಓದುವ ಇಂಗಿತ ಹೊಂದಿರುವ ಬಸವಾದಿತ್ಯ ಅವರು ಸಮಾಜಕ್ಕೆ ಖಂಡಿತ ಬೇಕಾದವರಾಗುತ್ತಾರೆ ಎನ್ನುತ್ತಾರೆ ಬಸವಾದಿತ್ಯ ಅವರಿಗೆ ಕಲಿಸಿದ ಉಪನ್ಯಾಸಕರು.

ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠಕ್ಕೆ ದೊಡ್ಡ ಇತಿಹಾಸವಿದೆ. ಭಾರತದ ಶೂನ್ಯ ಪೀಠಗಳಲ್ಲೇ ಅಗ್ರಗಣ್ಯ ಹಾಗೂ ಯಜಮಾನಿಕೆಯ ಸ್ಥಾನದಲ್ಲಿದೆ. ಇಂತಹ ಮಠಕ್ಕೆ ಬಸವಾದಿತ್ಯ ಅವರ ಉತ್ತರಾಧಿಕಾರಿ ಘೋಷಣೆಗೆ ನಾಡಿನ ವಿವಿಧೆಡೆಯಿಂದ ಬಂದಿದ್ದ ಮಠದ ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

21ನೇ ಪೀಠಾಧಿಪತಿ

ಮಠದ 21ನೇ ಪೀಠಾಧಿಪತಿಯಾಗಿ ಬಸವಾದಿತ್ಯ ಅವರು ಕಾರ್ಯನಿರ್ವಹಿಸಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, 21ನೇ ಶತಮಾನದಲ್ಲಿ ಮಠದ 21ನೇ ಪೀಠಾಧಿಪತಿಯಾಗಿ ನೇಮಕವಾಗುವ ಅವಕಾಶವನ್ನು ಶ್ರೀಗಳು ನೀಡಿದ್ದಾರೆ. ಮಠ ಹಾಗೂ ಭಕ್ತರ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ | ನಾನು ಬದುಕಿದ್ದೇನೆ, ಬದುಕಿದ್ದೇನೆ, ಬದುಕಿದ್ದೇನೆ; ಕೈಲಾಸದಿಂದಲೇ ಘೋಷಿಸಿದ ನಿತ್ಯಾನಂದ ಸ್ವಾಮಿ ..!

Exit mobile version