ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಶ್ರೀ ಮುರುಘಾಶರಣದಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಇಬ್ಬರು ವಿದ್ಯಾರ್ಥಿನಿಯರನ್ನು ಬಾಲಭವನದಲ್ಲಿ ಕೂಡಿ ಹಾಕಲಾಗಿದ್ದು, ಅವರನ್ನು ಬಂಧಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಚಿತ್ರದುರ್ಗದ ಡಿಸಿ ವೃತ್ತದಲ್ಲಿ ಮಂಗಳವಾರ ಧರಣಿ ನಡೆಯಿತು.
ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ನೊಂದ ಬಾಲಕಿಯರಿಗೆ ಸ್ವಾತಂತ್ರ್ಯ ನೀಡಬೇಕು, ಮಕ್ಕಳು ಇಚ್ಛಿಸುವ ಸ್ಥಳಕ್ಕೆ ಸ್ಥಳಾಂತರಿಸಬೇಕು, ಸಂತ್ರಸ್ತ ಬಾಲಕಿಯರು ಶಿಕ್ಷಣ ಮುಂದುವರೆಸಲು ಅವಕಾಶ ನೀಡಬೇಕು ಎನ್ನುವುದು ಪ್ರತಿಭಟನಾಕಾರರ ಆಗ್ರಹವಾಗಿತ್ತು.
ಪ್ರತಿಭಟನೆಯ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಒಡನಾಡಿ ಸಂಸ್ಥೆಯ ಪರಶುರಾಮ್, ಮಕ್ಕಳ ಜೊತೆ ಆಪ್ತ ಸಮಾಲೋಚನೆ ನಡೆಸಲು ನ್ಯಾಯಾಲಯ ಅನುಮತಿ ಕೊಟ್ಟಿದೆ. ನ್ಯಾಯಾಲಯದ ಆದೇಶವನ್ನು ಇವರು ಧಿಕ್ಕರಿಸಿದ್ದಾರೆ ಎಂದರು. ಮಕ್ಕಳ ಆತಂಕವನ್ನು ಸಮಾಧಾನ ಮಾಡುವ ಪ್ರಕ್ರಿಯೆ ನಡೆದಿಲ್ಲ. ಅವರಿಗೆ ಆಪ್ತ ಸಮಾಲೋಚನೆ ಮಾಡುವ ಅವಕಾಶವನ್ನೂ ನೀಡಲಾಗುತ್ತಿಲ್ಲ ಎಂದರು.
ʻʻಸಂತ್ರಸ್ತ ಮಕ್ಕಳ ಜೊತೆ ಓದುತ್ತಿದ್ದ ಮಕ್ಕಳನ್ನು ಬೇರೆಡೆ ಕಳುಹಿಸಿದ್ದು ಯಾಕೆ? ಬೇರೆ ಮಕ್ಕಳ ಶಿಕ್ಷಣಕ್ಕಾಗಿ ಬೇರೆಡೆ ವರ್ಗಾವಣೆ ಮಾಡುವ ಹಕ್ಕು ಕೊಟ್ಟವರು ಯಾರು? ಸಂತ್ರಸ್ತ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸುವ ಮೂಲಕ ತಬ್ಬಲಿಗಳಾಗಿ ಮಾಡಿದ್ದಾರೆ. ಜೆಜೆ-40 ಆಕ್ಟ್ ಪ್ರಕಾರ ಮಕ್ಕಳಿಗೆ ನಿರಂತರ ಆಪ್ತ ಸಮಾಲೋಚನೆ ಇರಬೇಕು. ಆದರೆ, ಅದೆಲ್ಲವನ್ನೂ ನಿರಾಕರಿಸಲಾಗುತ್ತಿದೆʼʼ ಎಂದಿದ್ದಾರೆ ಪರಶುರಾಮ್.
ʻʻಒಂದು ಕ್ರೌರ್ಯದ ಜಗತ್ತಿನಲ್ಲಿ ನಾವಿದ್ದೇವೆ ಎಂದು ಗೊತ್ತಾಗ್ತಿದೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಇದು ನಮ್ಮ ಮಕ್ಕಳ ಸಮಸ್ಯೆ ಎಂದು ಹೋರಾಟ ಮಾಡುತ್ತೇವೆ. ನ್ಯಾಯದ ಪರಿಧಿಯಲ್ಲಿ ಇವರು ಕೆಲಸ ಮಾಡದಿದ್ರೆ ಹಳ್ಳಿಗಳಿಗೆ ಪಾದಯಾತ್ರೆ ಮಾಡುತ್ತೇವೆʼʼ ಎಂದುಎಚ್ಚರಿಸಿದರು.