Site icon Vistara News

ಮುರುಘಾಮಠ ಪ್ರಕರಣ | ನನ್ನನ್ನು ಬಂಧಿಸಿಲ್ಲ, ಮಠಕ್ಕೆ ಹಿಂದಿರುಗುತ್ತಿರುವೆ ಎಂದ ಸ್ವಾಮೀಜಿ

ಮುರುಘಾಶ್ರೀ Sexual assault POCSO CASE ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲು

ಹಾವೇರಿ: ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಇಬ್ಬರು ಬಾಲಕಿಯರ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಸ್ವಾಮೀಜಿಯವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಸೋಮವಾರ ಬೆಳಗ್ಗೆ ಹರಿದಾಡಿತು. ಈ ಕುರಿತು ಸ್ವಾಮೀಜಿ ಸ್ಪಷ್ಟೀಕರಣ ನೀಡಿದ್ದಾರೆ.

ಹಾವೇರಿ ಜಿಲ್ಲೆಯ ಬಂಕಾಪುರ ಹೆದ್ದಾರಿ ಬಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ, ತಕ್ಷಣವೇ ಅವರನ್ನು ಚಿತ್ರದುರ್ಗಕ್ಕೆ ಕೊಂಡೊಯ್ಯಲಾಗುತ್ತದೆ ಎನ್ನಲಾಗಿತ್ತು. ಆದರೆ ಸ್ವತಃ ಸ್ವಾಮೀಜಿ ಇದನ್ನು ನಿರಾಕರಿಸಿದ್ದಾರೆ. ತಮ್ಮನ್ನು ಬಂಧನ ಮಾಡಲಾಗಿಲ್ಲ. ಪೊಲೀಸ್‌ ಭದ್ರತೆಯಲ್ಲಿ ಚಿತ್ರದುರ್ಗದ ಮಠಕ್ಕೆ ಹಿಂದಿರುಗುತ್ತಿದ್ದೇವೆ. ಬಂಧನ ಎನ್ನುವುದೆಲ್ಲ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಗೃಹ ಇಲಾಖೆ ಉನ್ನತ ಮೂಲಗಳು ಸ್ಪಷ್ಟನೆ ನೀಡಿವೆ. ಸ್ವಾಮೀಜಿಯವರನ್ನು ಬಂಧಿಸಿಲ್ಲ, ಈ ಕುರಿತು ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ಬಂಧನ ಮಾಡಲಾಗಿದೆ ಎನ್ನುವುದು ಸುಳ್ಳು ಎಂದಿವೆ.

ಚಿತ್ರದುರ್ಗದ ಪ್ರತಿಷ್ಠಿತ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿತ್ತು. ಅವರು ತಮ್ಮ ಮಠ ನಡೆಸುವ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಕಳೆದ ಕೆಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮೈಸೂರಿನ ನಜರ್‌ ಬಾದ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಮೈಸೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರ ದೂರಿನನ್ವಯ ಎಫ್‌ಐಆರ್‌ ದಾಖಲಾಗಿತ್ತು. ಸ್ವಾಮೀಜಿ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ (ಪೋಕ್ಸೊ) ಅಡಿ ಪ್ರಕರಣ ದಾಖಲಾಗಿತ್ತು.

ವಸತಿ ಶಾಲೆಯಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದು, ಇದಕ್ಕೆ ಅಲ್ಲಿನ ವಾರ್ಡನ್‌ ಸೇರಿ ಹಲವರು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಒಬ್ಬ ವಿದ್ಯಾರ್ಥಿನಿ ಮೇಲೆ ಮೂರು ವರ್ಷದಿಂದ ಇನ್ನೊಬ್ಬ ವಿದ್ಯಾರ್ಥಿನಿ ಮೇಲೆ ಒಂದೂವರೆ ವರ್ಷದಿಂದ ದೌರ್ಜನ್ಯ ನಡೆಯುತ್ತಿದೆ ಎನ್ನಲಾಗಿದೆ. ಅವರಿಬ್ಬರು ಮಹಿಳಾ ರಕ್ಷಣಾ ಸಮಿತಿ ಮತ್ತು ಸಾಂತ್ವನ ಕೇಂದ್ರವಾದ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದರು. ಸಂಸ್ಥೆಯು ಅವರಿಬ್ಬರನ್ನೂ ಕರೆಸಿಕೊಂಡು ಆಪ್ತ ಸಮಾಲೋಚನೆಯ ಮೂಲಕ ದೌರ್ಜನ್ಯದ ವಿವರಗಳನ್ನು ಪಡೆದುಕೊಂಡು ಇದೀಗ ಚಂದ್ರಕುಮಾರ್‌ ಎಂಬವರ ಮೂಲಕ ಪೊಲೀಸರಿಗೆ ದೂರು ನೀಡಿತ್ತು.

ಹೇಗೆ ದೌರ್ಜನ್ಯ, ಯಾರೆಲ್ಲ ಭಾಗಿಗಳು?
ಡಾ. ಶಿವಮೂರ್ತಿ ಮುರುಘಾಶರಣರಲ್ಲದೆ, ಅವರಿಗೆ ಸಹಕಾರ ನೀಡಿದ ಆರೋಪದಲ್ಲಿ ವಸತಿ ಶಾಲೆಯ ವಾರ್ಡನ್‌ ಆಗಿರುವ ರಶ್ಮಿ, ಮಠಕ್ಕೆ ಸಂಬಂಧಿಸಿದ ಬಸವಾದಿತ್ಯ, ಲಾಯರ್‌ ಗಂಗಾಧರ್‌ ಮತ್ತು ಲೀಡರ್‌ ಪರಮಶಿವಯ್ಯ ಅವರ ವಿರುದ್ಧ ದೂರು ದಾಖಲಾಗಿದೆ.

ಈ ಇಬ್ಬರು ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಸ್ವಾಮೀಜಿಗಳ ಬಳಿಗೆ ಕಳುಹಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಸ್ವಾಮೀಜಿ ಬಳಿಗೆ ಹೋಗಲು ಒಪ್ಪದಿದ್ದರೆ ಹಾಸ್ಟೆಲ್ ಸಿಬ್ಬಂದಿಯೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎನ್ನಲಾಗಿದೆ. ಅದಕ್ಕಿಂತಲೂ ಗಂಭೀರವಾದ ಇನ್ನೊಂದು ಆರೋಪವೆಂದರೆ ವಿದ್ಯಾರ್ಥಿನಿಯರನ್ನು ಹೀಗೆ ಲೈಂಗಿಕವಾಗಿ ಬಳಸಿಕೊಳ್ಳುವ ಮುನ್ನ ಕುಟುಂಬಸ್ಥರಿಗೆ ಸಹಾಯ ಹಸ್ತ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಹಣ್ಣು, ಸಿಹಿಯಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ಅತ್ಯಾಚಾರ ನಡೆಸುತ್ತಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಕಿರುಕುಳವನ್ನು ಪ್ರಶ್ನಿಸಿದ ಕಾರಣಕ್ಕೆ ಈ ವಿದ್ಯಾರ್ಥಿನಿಯರನ್ನು ಹಾಸ್ಟೆಲ್ ನಿಂದ ಹೊರ ಹಾಕಲಾಗಿದೆ ಎನ್ನಲಾಗಿದೆ.

ಭಾನುವಾರ ಇಬ್ಬರೂ ವಿದ್ಯಾರ್ಥಿನಿಯರನ್ನು ಚಿತ್ರದುರ್ಗಕ್ಕೆ ಕರೆತಂದಿದ್ದ ಪೊಲೀಸರು ಹೇಳಿಕೆ ಪಡೆದಿದ್ದರು. ಮೈಸೂರಿನಲ್ಲಿ ದೂರು ನೀಡುವ ವೇಳೆ ನೀಡಿದ ಹೇಳಿಕೆಯನ್ನೇ ಬಾಲಕಿಯರು ಪುನರಾವರ್ತಿಸಿದ್ದರು ಎನ್ನಲಾಗಿದೆ.

Exit mobile version