ಚಿತ್ರದುರ್ಗ: ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ (Renuka swamy Murder) ಮನೆಗೆ ಭಾನುವಾರ ಬಾಳೆ ಹೊನ್ನೂರು ಮಠದ ರಂಭಾಪುರಿ ಶ್ರೀಗಳು ಭೇಟಿ ನೀಡಿದರು. ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ರೇಣುಕಾಸ್ವಾಮಿ ಪೋಷಕರು ಶ್ರೀಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು.
ಬಳಿಕ ಮಾತನಾಡಿದ ಶ್ರೀಗಳು ರೇಣುಕಾಸ್ವಾಮಿ ಕೊಲೆಯು ಅಮಾನವೀಯವಾಗಿದೆ. ಮನುಷ್ಯತ್ವ ಇಲ್ಲದಂತೆ ಕ್ರೂರಿಗಳ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಯಾವುದೇ ಪಕ್ಷದ ಸರ್ಕಾರಗಳು ಇರಲಿ ನಿರ್ದಾಕ್ಷಣ್ಯವಾಗಿ ಕ್ರಮಕೈಗೊಳ್ಳಬೇಕು. ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು. ಮೃತ ಕುಟುಂಸ್ಥರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು ಎಂದರು.
ನಟರು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು- ಜಯ ಮೃತ್ಯುಂಜಯ ಸ್ವಾಮೀಜಿ
ಕಲಾವಿದರ ಬದುಕು ಮತ್ತು ಬರಹ ಒಂದೆ ಆಗಿರಬೇಕು. ಪರದೆ ಮೇಲಿನ ನಟನೆಗೂ ಬದುಕಿಗೂ ಸಾಮೀಪ್ಯವಾಗುವಂತೆ ಬದಕುವ ಪ್ರಯತ್ನ ಮಾಡಬೇಕು. ಪರದೇ ಮೇಲೆ ಒಂದು ನಟನೆ, ಪರದೇ ಹಿಂದೆ ಒಂದು ನಟನೆ ಮಾಡಿದಾಗ ಇಂತಹ ಅವಘಡ ಆಗುತ್ತವೆ ಎಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಅವಘಡಗಳಿಗೆ ಅವಕಾಶ ಕೊಡದೆ ಪ್ರತಿಯೊಬ್ಬ ನಟರು ತಮ್ಮ ವ್ಯಕ್ತಿತ್ವ ರೂಪಿಸಿಕೋಳ್ಳಬೇಕು. ಡಾ ರಾಜಕುಮಾರ, ಡಾ ವಿಷ್ಣುವರ್ಧನ್ ಆದರ್ಶವಾಗಿದ್ದಾರೆ. ಅಂತಹ ಮಹಾನ್ ನಟರಂತೆ ಎಲ್ಲರಿಗೂ ಆದರ್ಶವಾಗಬೇಕು ಎಂದರು.
ದರ್ಶನ ವಿರುದ್ಧ ರೊಚ್ಚಿಗೆದ್ದ ಕರವೇ ಕಾರ್ಯಕರ್ತರು
ಬೆಳಗಾವಿಯಲ್ಲಿ ನಟ ದರ್ಶನ ವಿರುದ್ಧ ಕರವೇ ಕಾರ್ಯಕರ್ತರು ರೊಚ್ಚಿಗೆದ್ದರು. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಖಂಡಿಸಿ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾ ಘಟಕದಿಂದ ದರ್ಶನ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಸಣ್ಣಪುಟ್ಟ ವಿಷಯಕ್ಕೂ ಕೊಲೆಗಳಾಗುತ್ತಿವೆ. ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು. ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ ಮತ್ತು ಪವಿತ್ರಾಗೌಡ ಸೇರಿದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: Renuka Swamy Murder: ರೇಣುಕಾಸ್ವಾಮಿಗೆ 4 ಬಾರಿ ಎಲೆಕ್ಟ್ರಿಕ್ ಶಾಕ್; ಪೋಸ್ಟ್ ಮಾರ್ಟಂ ವರದಿಯಲ್ಲಿವೆ ಭಯಾನಕ ಅಂಶಗಳು!
ಚಿತ್ರರಂಗದಿಂದ ಬ್ಯಾನ್ ಮಾಡಿ
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಖಂಡಿಸಿ ಮೈಸೂರಿನ ತಿ.ನರಸೀಪುರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವ ಬಳಗಗಳ ಒಕ್ಕೂಟ ಪ್ರತಿಭಟಿಸಿದೆ. ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಒಕ್ಕೂಟದ ಸದಸ್ಯರು ನಟ ದರ್ಶನ್ ಚಿತ್ರರಂಗದಿಂದ ಬ್ಯಾನ್ ಆಗಬೇಕು ಎಂದು ಒತ್ತಾಯಿಸಿದರು.
ನಟ ದರ್ಶನ್ ಚಿತ್ರಗಳು ತೆರೆಯ ಮೇಲೆ ಬರದಂತೆ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರವು 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ಪ್ರಕರಣದಲ್ಲಿ ಯಾರ ಒತ್ತಡಕ್ಕೂ ಮಣಿಯಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ