ಚಿತ್ರದುರ್ಗ: ಆ ಕುಟುಂಬದ ಸದಸ್ಯರು ಮನೆಯ ಹಿರಿಜೀವ ಕಳೆದುಕೊಂಡ ದುಃಖದಲ್ಲಿದ್ದರು. ಬೆಂಗಳೂರಿನಿಂದ ಸಿರುಗುಪ್ಪಕ್ಕೆ ಅಜ್ಜಿಯ ಮೃತದೇಹವನ್ನು ಕೊಂಡೊಯ್ಯುತ್ತಿದ್ದರು. ಈ ವೇಳೆ ಕಾರಿನ ಟೈಯರ್ ಸ್ಫೋಟಗೊಂಡು (Road Accident) ಪಲ್ಟಿಯಾಗಿದೆ. ವಿಧಿ ಅದೆಷ್ಟು ಕ್ರೂರಿ ಅಂದರೆ ಸ್ಥಳದಲ್ಲೇ ಮೂವರು ಮೃತಪಟ್ಟರೆ, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ರಾಂಪುರದ ಗ್ರ್ಯಾಂಡ್ ಪೋರ್ಡ್ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಬಳ್ಳಾರಿಯ ಸಿರುಗುಪ್ಪ ತಾಲೂಕಿನ ದೇಸನೂರು ಮೂಲದ ಸುರೇಶ್ (40) , ಮಲ್ಲಿಕಾರ್ಜುನ (25), ಭೂಮಿಕ (9) ಮೃತರು. ನಾಗಮ್ಮ (31), ತಾಯಮ್ಮ (56), ಧನರಾಜ್ (39) ಹಾಗೂ ಚಾಲಕ ಶಿವು (26) ಗಾಯಾಳುಗಳು.
ಸುರೇಶ್ ಅವರ ಅಜ್ಜಿ ಹುಲಿಗಮ್ಮ (66) ಬೆಂಗಳೂರಲ್ಲಿ ಮೃತಪಟ್ಟಿದ್ದರು. ಶವ ಸಂಸ್ಕಾರಕ್ಕಾಗಿ ಬೆಂಗಳೂರಿನಿಂದ ದೇಸನೂರಿಗೆ ಸುರೇಶ್ ಕುಟುಂಬ ತೆರಳುತಿದ್ದಾಗ ಕಾರಿನ ಟೈರ್ ಒಮ್ಮೆಲೆ ಸ್ಫೋಟಗೊಂಡಿತ್ತು, ವೇಗವಾಗಿ ಇದ್ದರಿಂದ ಚಾಲಕನ ನಿಯಂತ್ರಣಕ್ಕೆ ಸಿಗದೇ ಪಲ್ಟಿಯಾಗಿತ್ತು.
ಕಾರಿನಿಂದ ಬಿದ್ದ ಮೂವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಜೀವ ಬಿಟ್ಟರೆ, ಮತ್ತೆ 4 ಮಂದಿಯ ಸ್ಥಿತಿ ಗಂಭೀರವಾಗಿದೆ. ಅವರನ್ನೆಲ್ಲ ರಾಂಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪಿಎಸ್ಐ ಪರಶುರಾಮ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Electric shock : ಕಬ್ಬಿನ ಗದ್ದೆಯಲ್ಲಿ ಕಟ್ ಆಗಿ ಬಿದ್ದ ವಿದ್ಯುತ್ ತಂತಿ ತುಳಿದು ಕೃಷಿ ಕಾರ್ಮಿಕ ಸಾವು
ತಿಥಿ ಕಾರ್ಯಕ್ಕೆ ಹೋದವರು ಸಾವಿನ ಮನೆ ಸೇರಿದ್ರು
ಬೆಂಗಳೂರಿನಿಂದ ಹೊಸಪೇಟೆಗೆ ತಿಥಿ ಕಾರ್ಯಕ್ಕೆ ಎಂದು ಹೊರಟಿದ್ದ ಕುಟುಂಬವೊಂದು ಕೋಟೆ ನಾಡಿನ ಹೈವೇಯಲ್ಲಿ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕೋಟೆ ನಾಡು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮುಂದೆ ಹೋಗುತ್ತಿದ್ದ ಬೃಹತ್ ಹಾಲಿನ ಟ್ಯಾಂಕರ್‌ಗೆ ಹಿಂಬದಿಯಿಂದ ಕಾರುವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ನಿರ್ಮಲ (55), ವಿನುತ (40) ಮೃತಪಟ್ಟರೆ, ಆಸ್ಪತ್ರೆಯಲ್ಲಿ ಎರಡು ವರ್ಷದ ಯಶಸ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಈ ಹೆದ್ದಾರಿಯಲ್ಲಿ ಪದೇಪದೆ ಸರಣಿ ಅಪಘಾತಗಳು ಸಂಭವಿಸುತ್ತಿದೆ. ಇದೇ ಜಾಗದಲ್ಲಿ ಕಳೆದ ತಿಂಗಳು ಸಹ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದರು. ಇಂದು ಸಹ ಮೂವರು ಬಲಿಯಾಗಿದ್ದು, 32 ವರ್ಷದ ರಶ್ಮಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಈ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತಗಳಿಗೆ ಕಾರಣ ಏನು ಎಂಬುದನ್ನು ತಿಳಿದು ಬಂದಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ