ಬೆಂಗಳೂರು: ರಾಜ್ಯದಲ್ಲಿ ಕಾಲರಾ ಹಾಗೂ ಬಿಸಿ ಗಾಳಿಯಿಂದ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಈಗಾಗಲೇ ಹಲವು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದೆ. ಇನ್ನು ಬೆಂಗಳೂರಿನಲ್ಲಿ ಕಲುಷಿತ ನೀರಿನ ಸೇವನೆಯಿಂದ ಕಾಲರಾ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಆತಂಕ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ. ರಂದೀಪ್ ಅವರು ಸ್ಪಷ್ಟನೆ ನೀಡಿದ್ದು, ಬರೀ ವಾಂತಿ, ಭೇದಿಯನ್ನು ಕಾಲರಾ (Cholera Outbreak) ಎಂದು ತಿಳಿಯಬಾರದು. ಕಾಲರಾ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ಕಾಯಿಲೆ ಇರುವ ರೋಗಿಗಳ ಡೇಟಾ ನೀಡಲು ತಿಳಿಸಿದ್ದೇವೆ. ಹೀಟ್ ಸ್ಟ್ರೋಕ್(ಶಾಖಾಘಾತ) ನಿರ್ವಹಣೆ, ಬೆಂಕಿ ಅವಘಡ ಬಗ್ಗೆ ಎಚ್ಚರಿಕೆ ವಹಿಸಲು ಸುತ್ತೋಲೆ ಹೊರೆಡಿಸಿದ್ದೇವೆ. 341 ಹೀಟ್ ರಾಶ್ ಪ್ರಕರಣ, 212 ಹೀಟ್ ಕ್ರ್ಯಾಂಪ್, ಹೀಟ್ ಎಕ್ಸ್ಹಾಷನ್ 58 ಸೇರಿ 521 ಪ್ರಕರಣ ರಾಜ್ಯದಲ್ಲಿ ಪತ್ತೆಯಾಗಿವೆ. ಹೀಟ್ ಸ್ಟ್ರೋಕ್ನಿಂದ ಮರಣ ಆಗಿಲ್ಲ. ಕಲಬುರಗಿ, ಬಾಗಲಕೋಟೆಯಲ್ಲಿ 2 ಮರಣ ಅಗಿದೆ ಎಂಬ ಸುದ್ದಿ ಇತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಹೀಟ್ ಸ್ಟ್ರೋಕ್ನಿಂದ ಸಾವು ಸಂಭವಿಸಿಲ್ಲಾ ಎಂಬುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Voter awareness: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಮತದಾನ ಜಾಗೃತಿ; ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಮತದಾನದ ಪಾಠ
ಆಸ್ಪತ್ರೆಗಳಲ್ಲಿ ಅಗತ್ಯವಿರುವ ಔಷಧಗಳನ್ನು ಸಂಗ್ರಹಿಸಿಡಲು ತಿಳಿಸಿದ್ದೇವೆ. ಯಾವುದೇ ಹೀಟ್ ರಿಲೇಟೆಡ್ ಕಾಯಿಲೆಗಳನ್ನು ನಿಷ್ಕಾಳಜಿ ಮಾಡದಂತೆ ತಿಳಿಸಿದ್ದೇವೆ. ಶಾಖಾಘಾತ ನಿರ್ವಹಣೆಗೆ ಜಿಲ್ಲಾಸ್ಪತ್ರೆಯಲ್ಲಿ 5 ಬೆಡ್ ಹಾಗೂ ತಾಲೂಕಿನಲ್ಲಿ 2 ಬೆಡ್ ಮೀಸಲಿಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ. ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾಲರಾ ಪ್ರಕರಣ ಶೇ.50 ಏರಿಕೆ ಸತ್ಯಕ್ಕೆ ದೂರವಾದ ಮಾತು
ಕಾಲರಾ ಬಗ್ಗೆ ಪ್ರತಿಕ್ರಿಯಿಸಿ, ಬರಿ ವಾಂತಿ, ಭೇದಿಯನ್ನು ಕಾಲರಾ ಎಂದು ತಿಳಿಯಬಾರದು, ಶುದ್ಧ ನೀರಿನ ಕೊರತೆಯಿಂದಾಗಿ ಕಾಲರಾ ಬರುತ್ತದೆ. ಕಳಪೆ ಗುಣಮಟ್ಟದ ಆಹಾರ ಮತ್ತು ನೀರು ಕುಡಿಯುವುದರಿಂದ ಕಾಲರಾ ಬರುವ ಸಾಧ್ಯತೆ ಇದೆ. ಇದು ನೇರವಾಗಿ ಆಗಿ ಹರಡುವುದಿಲ್ಲ, ರೋಗಿಗಳ ಸಂಪರ್ಕ ಇರಬೇಕು ಅಥವಾ ಕಲುಷಿತ ನೀರು ಸೇವಿಸಿರಬೇಕು. ಕಾಲರಾ ಬಗ್ಗೆ ಸುಳ್ಳು ಮಾಹಿತಿ ಹರಿದಾಡುತ್ತಿದೆ, ಕಾಲರಾ ಪ್ರಕರಣಗಳು ಶೇ.50 ಏರಿಕೆ ಆಗಿಲ್ಲ, ಇದು ಸತ್ಯಕ್ಕೆ ದೂರವಾದ ಮಾತು ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದ ಮಲ್ಲೇಶ್ವರಂನ ಖಾಸಗಿ ಪಿಜಿ ನಿವಾಸಿಯಾದ 27 ವರ್ಷದ ಮಹಿಳೆಯೊಬ್ಬರಿಗೆ ಮಾರ್ಚ್ 30ರಂದು ವಾಂತಿ ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಅವರ ಮಲದ ಮಾದರಿಯನ್ನು ಪರೀಕ್ಷೆ ಮಾಡಿದಾಗ ಕಾಲರಾ ಇಲ್ಲದಿರುವುದು ದೃಢಪಟ್ಟಿದೆ. ನಂತರ ಗುಣಮುಖರಾಗಿ ತವರೂರು ಶಿರಾಗೆ ತೆರಳಿದ್ದಾರೆ. ಆದ್ದರಿಂದ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವುದೇ ಕಾಲರಾ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಮಹಿಳೆ ವಾಸವಿದ್ದ ಪಿಜಿಯಲ್ಲಿ ಒಟ್ಟು 32 ಮಹಿಳೆಯರು ವಾಸವಿದ್ದು, ಇನ್ಯಾರಿಗೂ ಇಂತಹ ತೊಂದರೆ ಕಾಣಿಸಿಕೊಂಡಿದಿಲ್ಲ. ಆಹಾರ ಅಥವಾ ನೀರಿನ ಮೂಲಗಳು ಸೋಂಕಿತರ ಮಲದಿಂದ ಮಾಲಿನ್ಯಗೊಂಡು ಅಂತಹ ಕಲುಷಿತ ನೀರಿನ ಸೇವನೆಯಿಂದ ಅತಿಸಾರ-ಕಾಲರಾದಂತಹ ವಾಂತಿ-ಭೇದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವ. ಆದರೆ, ಈ ಪ್ರಕರಣದಲ್ಲಿ ಕೇವಲ ಒಬ್ಬರಿಗೆ ಮಾತ್ರ ಇಂತಹ ಲಕ್ಷಣಗಳು ಕಾಣಿಸಿಕೊಂಡಿದ್ದು, ಇತರರಲ್ಲಿ ಇಂತಹ ಯಾವುದೇ ಲಕ್ಷಣ ಕಂಡುಬಂದಿರುವುದಿಲ್ಲ. ಪಿಜಿಯಲ್ಲಿನ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪಬ್ಲಿಕ್ ಹೆಲ್ತ್ ಇನ್ಸಿಟ್ಯೂಟ್ಗೆ ಪರೀಕ್ಷೆಗೆ ಸಲ್ಲಿಸಿದ್ದು ವರದಿ ನಿರೀಕ್ಷೆಯಲ್ಲಿದೆ ಎಂದು ಹೇಳಿದ್ದಾರೆ.
ಪ್ರಸ್ತಕ ವರ್ಷದಲ್ಲಿ 6 ಕಾಲರಾ ಪ್ರಕರಣ
ಕರ್ನಾಟಕದಲ್ಲಿ ಪ್ರಸಕ್ತ ವರ್ಷದಲ್ಲಿ ದಿನಾಂಕ ಏಪ್ರಿಲ್ 4ರವರೆಗೆ ಒಟ್ಟು 06 (ಬಿಬಿಎಂಪಿ-3, ಬೆಂಗಳೂರು ನಗರ-02, ರಾಮನಗರ-01) ಕಾಲರಾ ಪ್ರಕರಣಗಳು ದೃಢಪಟ್ಟಿದ್ದು, 05 ಪ್ರಕರಣಗಳು ಮಾರ್ಚ್ ತಿಂಗಳಲ್ಲಿಯೇ ವರದಿಯಾಗಿವೆ. ಈ ಇವೆಲ್ಲವೂ ವಿರಳ (Sporadic) ಪ್ರಕರಣಗಳಾಗಿದ್ದು, ಯಾವುದೇ ಸೋಂಕು ಹರಡುವಿಕೆ (Outbreak) ವರದಿಯಾಗಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಡಿಸೆಂಬರ್, 2023 ರಲ್ಲಿ ವರದಿಯಾದ 15 ಕಾಲರಾ ಪ್ರಕರಣಗಳೇ ರಾಜ್ಯದಲ್ಲಿ ವರದಿಯಾದ ಕೊನೆಯ cholera outbreak ಪ್ರಕರಣ ಆಗಿರುತ್ತದೆ. ಹಿಂದಿನ 3 ವರ್ಷಗಳ ಮೊದಲ ತ್ರೈಮಾಸಿಕದ ಅಂಕಿ-ಅಂಶಗಳಿಗೆ ಹೋಲಿಸಿದರ ವಾಂತಿ-ಬೇಧಿ ಹಾಗೂ ಕಾಲರಾ ಪ್ರಕರಣಗಳಲ್ಲಿ ಯಾವುದೇ ಏರಿಕೆ ಕಂಡುಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ನೀರಿನ ಅಭಾವವಾಗುವ ಹಿನ್ನೆಲೆಯಲ್ಲಿ ಹಾಗೂ ತಾಪಮಾನ ಹೆಚ್ಚಾಗುವ ಕಾರಣದಿಂದಾಗಿ ಅತಿಸಾರ-ಕಾಲರದಂತಹ ವಾಂತಿ-ಭೇದಿ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸುತ್ತೋಲೆ ಹೊರಡಿಸಿಸಲಾಗಿದೆ. ಬೇಸಿಗೆ ಕಾಲದಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡಲು ಜಿಲ್ಲಾ ಮಟ್ಟದಲ್ಲೂ ಆರೋಗ್ಯ ಶಿಕ್ಷಣದಂತಹ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಯಾವುದೇ ವಾಂತಿ-ಭೇದಿ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳು, ಒಆರ್ ಎಸ್ ಹಾಗೂ IV Fluids ಗಳ ದಾಸ್ತಾನು ಇಡಲಾಗಿದೆ. ಯಾವುದೇ Outbreak ವರದಿಯಾದಲ್ಲಿ ಪ್ರಕರಣಗಳ ನಿಯಂತ್ರಣಕ್ಕೆ ಜಿಲ್ಲಾ/ರಾಜ್ಯ ಮಟ್ಟದ ತ್ವರಿತ ಪ್ರತಿಕ್ರಿಯಾ ತಂಡಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುತ್ತವೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಆರೋಗ್ಯ ಸಂಸ್ಥೆ ಕೆ.ಆರ್.ವೃತ್ತ, ಬೆಂಗಳೂರು ಹಾಗೂ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇವು ಕಾಲರಾ ದೃಢಪಡಿಸಲು (Stool Culture ಪರೀಕ್ಷೆ) ಗುರುತಿಸಲ್ಪಟ್ಟ 2 ಪ್ರಮುಖ ಸರ್ಕಾರಿ ಪ್ರಯೋಗಾಲಯಗಳಾಗಿವೆ. ಬಿಬಿಎಂಪಿ ಹಾಗೂ ಬೆಂಗಳೂರು ನಗರ ವ್ಯಾಪ್ತಿಯ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳ ಮಲದ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಿ Stool Culture ಪರೀಕ್ಷೆಗೆ ಒಳಪಡಿಸಲಾಗುತ್ತದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ Stool Culture ಸೌಲಭ್ಯ ಒದಗಿಸಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 175 ಖಾಸಗಿ ಪ್ರಯೋಗಾಲಯಗಳು IHIP ಯಲ್ಲಿ ವರದಿ ಮಾಡುತ್ತಿದ್ದು, ಇವುಗಳಲ್ಲಿ 158 ಬಿಬಿಎಂಪಿ ಹಾಗೂ 17 ಪ್ರಯೋಗಾಲಯಗಳು ಬೆಂಗಳೂರು ನಗರ ವ್ಯಾಪ್ತಿಗೆ ಸೇರಿರುತ್ತವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Vande Bharat Express: ಚೆನ್ನೈ-ಬೆಂಗಳೂರು-ಮೈಸೂರು: ಹೀಗಿದೆ ನೋಡಿ ವಂದೇ ಭಾರತ್ ರೈಲಿನ ವೇಳಾಪಟ್ಟಿ
ಕಾಲರಾ ತಡೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ
ಕೈಗಳನ್ನು ಸ್ವಚ್ಛಗೊಳಿಸಿ ಆಹಾರ, ನೀರು ಸೇವನೆ
ಶುದ್ಧ ಕುಡಿಯುವ ನೀರು ಬಳಸುವುದು
ಚರಂಡಿ ಮತ್ತು ಕುಡಿಯುವ ನೀರಿನ ಪೈಪ್ ಒಟ್ಟಾಗದಂತೆ ನೋಡಿಕೊಳ್ಳಬೇಕು
ಕ್ಲೋರಿನೇಟೆಡ್ ಅಥವಾ ಕುದಿಸಿದ ಮತ್ತು ತಣ್ಣಗಾದ ನೀರಿನ ಬಳಕೆ
ಮನೆ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಾಡುವುದು
ಸ್ವಚ್ಛತೆ ಕಾಪಾಡದ ಸ್ಥಳಗಳಲ್ಲಿ ಆಹಾರ ಪದಾರ್ಥ ಸೇವಿಸದಿರುವುದು