Site icon Vistara News

CM Siddaramaiah: ಸದ್ಯದಲ್ಲೇ ಕ್ರೈಸ್ತ ಅಭಿವೃದ್ಧಿ ನಿಗಮ‌ ಸ್ಥಾಪನೆ: ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ಕ್ರೈಸ್ತ ಸಮುದಾಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಪಾರ ಪ್ರಗತಿ ಸಾಧಿಸಿ ನಾಡಿನ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದೆ. ಸಮುದಾಯದ ಅಭಿವೃದ್ಧಿಗಾಗಿ ಸದ್ಯದಲ್ಲೇ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ತಾಯಿ ಮೇರಿ ಜಯಂತೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ನಾವು ಬಜೆಟ್‌ನಲ್ಲೇ ಘೋಷಿಸಿದ್ದೇವೆ. ಇದಕ್ಕಾಗಿ 100 ಕೋಟಿ ರೂಪಾಯಿಗಳನ್ನು ಮೀಸಲಿಟ್ಟು, ಆದಷ್ಟು ಬೇಗ ನಿಗಮ ಸ್ಥಾಪಿಸಿ ಅದಕ್ಕೆ ಅರ್ಹ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದು ಭರವಸೆ ನೀಡಿದರು.

ಸೇಂಟ್ ಮೇರೀಸ್ ಬೆಸಿಲಿಕಾ ಚರ್ಚ್ ಭಾವೈಕ್ಯತಾ ಕೇಂದ್ರ

ಬೆಸಿಲಿಕಾ ಪ್ರಾರ್ಥನಾ ಮಂದಿರಕ್ಕೆ ಎಲ್ಲಾ ಜಾತಿ, ಧರ್ಮದವರು ಬರುತ್ತಾರೆ. ಹೀಗಾಗಿ ಇದೊಂದು ಭಾವೈಕ್ಯತಾ ಕೇಂದ್ರವಾಗಿ ರೂಪುಗೊಂಡಿದೆ. ಹೀಗಾಗಿ ನಾನು ಈ ಜಯಂತೋತ್ಸವಕ್ಕೆ ಮತ್ತು ಹಬ್ಬಕ್ಕೆ ಪ್ರತೀ ವರ್ಷ ತಪ್ಪದೆ ಹಾಜರಾಗುತ್ತೇನೆ. ಇದು ನನಗೆ ಬಹಳ ಖುಷಿಯ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ | CM Siddaramaiah: ಜಾತಿ ನಾಶವಾಗದೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದ ಸಿದ್ದರಾಮಯ್ಯ

ಭಾರತವೇ ಒಂದು ಭಾವೈಕ್ಯ ಕೇಂದ್ರ. ಇಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಮನುಷ್ಯ ದ್ವೇಷಕ್ಕೆ ಜಾಗ ಇಲ್ಲ. ಕೆಲವರು ಮನುಷ್ಯ ದ್ವೇಷವನ್ನೇ ಸಂಸ್ಕೃತಿಯನ್ನಾಗಿ ಆಚರಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಸರ್ಕಾರ ದ್ವೇಷದ ವಾತಾವರಣ ಹರಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ಭಾರತದ ಭಾವೈಕ್ಯತಾ ಪರಂಪರೆಯನ್ನು ಕಾಪಾಡಲು ಬದ್ಧವಾಗಿದೆ ಎಂದು ತಿಳಿಸಿದರು.

ಯಾವ ಧರ್ಮವೂ ಮನುಷ್ಯ ದ್ವೇಷವನ್ನು ಹೇಳುವುದಿಲ್ಲ. ಆದರೆ, ಕೆಲವು ಕಪಟಿಗಳು ಧರ್ಮದ ಹೆಸರಿನಲ್ಲಿ ಮನುಷ್ಯರನ್ನು, ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ಅನೈತಿಕ ಪೊಲೀಸ್ ಗಿರಿ ನೆಪದಲ್ಲಿ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಅವರಿಗೆ ತಕ್ಕ ಕಾನೂನಿನ ಶಾಸ್ತಿ ಆಗಲಿದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು.

ಇದನ್ನೂ ಓದಿ | HD Kumaraswamy : ಸೆ. 10ಕ್ಕೆ ಜೆಡಿಎಸ್‌ ಸಮಾವೇಶವೆಂದ ಎಚ್‌ಡಿಕೆ; ಬಿಜೆಪಿ ಜತೆಗಿನ ಮೈತ್ರಿ ಪ್ರಸ್ತಾಪ?

ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರೀಸ್ ನಿಲ್ದಾಣವೆಂದು ನಾಮಕರಣ?

ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರೀಸ್ ನಿಲ್ದಾಣ ಎಂದು ಹೆಸರಿಡಬೇಕು ಎನ್ನುವುದು ಸೇರಿ ಸಮುದಾಯದ ಮುಖಂಡರು ಮುಂದಿಟ್ಟಿರುವ ಮೂರು ಬೇಡಿಕೆಗಳ ಬಗ್ಗೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಸೇರಿ ಹಲವು ಧರ್ಮಗುರುಗಳು ಉಪಸ್ಥಿತರಿದ್ದರು.

Exit mobile version