ಬೆಂಗಳೂರು: ರಾಜ್ಯಾದ್ಯಂತ ಕ್ರಿಸ್‌ಮಸ್ ಹಬ್ಬ ಕಳೆಗಟ್ಟಿದ್ದು ಚರ್ಚ್‌ಗಳಲ್ಲಿ (Christmas Celebrations) ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಉದ್ಯಾನನಗರೀ ಬೆಂಗಳೂರಿನಲ್ಲಿ ಏಸುವಿನ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಕಳೆದ ಎರಡು ವರ್ಷವೂ ಕೋವಿಡ್‌ನಿಂದಾಗಿ ಕ್ರಿಸ್‌ಮಸ್ ಸೆಲೆಬ್ರೇಷನ್ ಮಂಕಾಗಿತ್ತು. ಈಗ ಕೊರೊನಾ ಹೊಸ ತಳಿಯ ಆತಂಕದ ನಡುವೆಯೂ ಬೆಂಗಳೂರಿನಲ್ಲಿ ಕ್ರಿಸ್‌ಮಸ್ ಆಚರಣೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ನಗರದ ಶಿವಾಜಿ ನಗರದಲ್ಲಿರುವ ಸೇಂಟ್ ಮೇರೀಸ್ ಬೆಸಿಲಿಕಾ ಚರ್ಚ್‌ನಲ್ಲಿ ಜನರು ಆಗಮಿಸಿ ಏಸುವಿಗೆ ಪ್ರಾರ್ಥನೆ ಸಲ್ಲಿಸಿದರು. ಬೆಂಗಳೂರು ನಿವಾಸಿ ಮೇಘಾ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಾವು ಕ್ರಿಸ್‌ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಆಗಿರಲಿಲ್ಲ. ಕೋವಿಡ್‌ನಿಂದಾಗಿ ಚರ್ಚ್‌ಗೆ ಬರಲು ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಮನೆಯಲ್ಲಿ ಸರಳವಾಗಿ ಹಬ್ಬ ಆಚರಣೆ ಮಾಡಲಾಯಿತು. ಆದರೆ ಈ ವರ್ಷ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಕುಟುಂಬ ಸಮೇತ ಬಂದು ಆಚರಣೆ ಮಾಡುತ್ತಿದ್ದೇವೆ ಎಂದರು.
ಮೈಸೂರಿನಲ್ಲಿ ಬಾಲ ಯೇಸುವಿನ ಪ್ರತಿಮೆ ಪ್ರತಿಷ್ಠಾಪನೆ
ಅರಮನೆ ನಗರಿ ಮೈಸೂರಿನಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಜೋರಾಗಿತ್ತು. ಸೆಂಟ್ ಫಿಲೋಮಿನಾ ಚರ್ಚ್ ನಲ್ಲಿ ವಿಶೇಷ ಪಾರ್ಥನೆ ಸಲ್ಲಿಸಲಾಯಿತು. ಕ್ರಿಸ್‌ಮಸ್ ಟ್ರೀ, ಬಾಲ ಯೇಸುವಿನ ಪ್ರತಿಮೆ ಪ್ರತಿಷ್ಠಾಪನೆ ಮಾಡಿ ನಮಿಸಿದರು. ಮೈಸೂರು ಪ್ರಾಂತ ಧರ್ಮಧಿಕಾರಿ ಡಾ.ಕೆ.ಎ.ವಿಲಿಯಮ್ಸ್ ಹಾಗೂ ಸಹ ಪಾದ್ರಿಗಳಿಂದ ವಿಶೇಷ ಪ್ರಾರ್ಥನೆ ನಡೆಸಲಾಯಿತು. ನಾಡಿನೆಲ್ಲೆಡೆ ಶಾಂತಿ ನೆಲಸಲಿ, ಕೋವಿಡ್ ಸಂಕಷ್ಟ ಎದುರಾಗದಿರಲಿ ಎಂದು ಪ್ರಾರ್ಥಿಸಿದರು.
ಉಡುಪಿಯಲ್ಲಿ ಬಲಿಪೂಜೆ ಅರ್ಪಣೆ
ಏಸು ಕ್ರಿಸ್ತರ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಸಂಭ್ರಮ ಸಡಗರದಿಂದ ಆಚರಿಸಿದರು. ಶನಿವಾರ ರಾತ್ರಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಏಸುವಿನ ಜನನದ ವೃತ್ತಾಂತವನ್ನು ಪರಿಚಯಿಸುವ ಗೀತ ಗಾಯನವನ್ನು ನಟನೆಯ ಮೂಲಕ ಪ್ರದರ್ಶಿಸಲಾಯಿತು. ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ಮಿಲಾಗ್ರಿಸ್ ಕೆಥೆಡ್ರಲ್ ಕಲ್ಯಾಣಪುರದಲ್ಲಿ ಬಲಿಪೂಜೆಯನ್ನು ಅರ್ಪಿಸಿ ಹಬ್ಬದ ಸಂದೇಶವನ್ನು ನೀಡಿದರು.
ಹಬ್ಬದ ಪ್ರಯುಕ್ತ ಚರ್ಚ್‌ಗಳನ್ನು ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಬಗೆಬಗೆಯ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುವಂತೆ ಮಾಡಿದ್ದರು. ಶನಿವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲ ಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತಾದಿಗಳು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವುದರ ಮೂಲಕ ಏಸು ಜನನವನ್ನು ಕ್ರೈಸ್ತ ಸಮುದಾಯದವರು ಆಚರಿಸಿದರು.
ಏಸು ಬಾಲ್ಯ ದಿನಗಳನ್ನು ನೆನಪಿಸುವ ಆಕೃತಿ
ಕೋಲಾರದ ಹೃದಯ ಭಾಗದಲ್ಲಿರುವ ಮೆಥೋಡಿಸ್ಟ್ ಚರ್ಚ್‌ನಲ್ಲಿ ಬಾಲ ಏಸುವಿನ ಬಾಲ್ಯ ದಿನಗಳನ್ನು ನೆನಪಿಸುವ ರೀತಿಯಲ್ಲಿ ಆಕೃತಿಯನ್ನು ಆಯೋಜಿಸಿದ್ದರು. ಕ್ರೈಸ್ತ ಧರ್ಮದವರು ಚರ್ಚ್‌ಗಳಿಗೆ ಬಂದು ಪ್ರಾರ್ಥನೆ ಸಲ್ಲಿಸಿದರು. ಇತ್ತ ಬಾಗಲಕೋಟೆಯಲ್ಲಿ ಬೆಳಗ್ಗೆಯಿಂದಲೇ ಏಸುವಿನ ಆರಾಧನೆಯಲ್ಲಿ ಜನರು ನಿರತರಾಗಿದ್ದರು. ಚರ್ಚ್‌ನಲ್ಲಿ ಏಸು ಕುರಿತಾದ ವಿಶೇಷ ಉಪನ್ಯಾಸಗಳನ್ನು ನೆರವೇರಿತು. ಜಿಲ್ಲೆಯ ವಿದ್ಯಾಗಿರಿ, ನವನಗರ, ಹಳೇ ಬಾಗಲಕೋಟೆ ನಗರಗಳಲ್ಲಿ ಕ್ರಿಸ್‌ಮಸ್ ಸಂಭ್ರಮ ಕಳೆಗಟ್ಟಿತ್ತು.
ಇದನ್ನೂ ಓದಿ | Janardhan Reddy | ಹೊಸ ಪಕ್ಷ ಕಟ್ಟಿದ ಜನಾರ್ದನ ರೆಡ್ಡಿ; ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಘೋಷಣೆ