ತುಮಕೂರು: ಕಲಬುರಗಿಯ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣದ (Shivakumar Poojary) ತನಿಖೆ ಹೊಣೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಡಿಯೊದಲ್ಲಿ ಸಚಿವ ಶರಣ ಪ್ರಕಾಶ ಪಾಟೀಲ್ ಹೆಸರು ಹೇಳಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ.
ಈ ಬಗ್ಗೆ ನಗರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣವನ್ನು ತನಿಖೆಗೆ ಸಿಐಡಿಗೆ ಆದೇಶ ಮಾಡಿದೆ. ತನಿಖಾ ವರದಿ ಬಂದ ಮೇಲೆ ಸತ್ಯಾಂಶ ಗೊತ್ತಾಗುತ್ತದೆ. ಅವರ‍್ಯಾರೋ ಸಚಿವರು ಇನ್ವಾಲ್ವ್ ಆಗಿದ್ದಾರೆ ಅಂತ ಹೇಳಿಕೆ ಕೊಡುತ್ತಿದ್ದಾರೆ. ಅದನ್ನು ಪರಿಶೀಲಿಸಬೇಕಲ್ಲವೇ, ಇದರ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಯಾರು ಹೇಳಿಕೆ ಕೊಡುತ್ತಾರೋ ಅದನ್ನೂ ಕೂಡ ತನಿಖೆಯಲ್ಲಿ ತೆಗೆದುಕೊಳ್ಳಬೇಕು. ಆ ಬಗ್ಗೆ ಪರಿಶೀಲನೆ ಮಾಡಲೆಂದೇ ಸಿಐಡಿಗೆ ಪ್ರಕರಣ ನೀಡಲಾಗಿದೆ. ವರದಿ ಏನು ಬರುತ್ತೆ ನೋಡಿಕೊಂಡು ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | KS Eshwarappa: ಕುಡಿದವನೇನೋ ಮಾತಾಡ್ತಾನೆ, ಅದಕ್ಕೆ ಉತ್ತರ ಕೊಡಬೇಕಾ; ಡಿಕೆಶಿ ಬಗ್ಗೆ ಈಶ್ವರಪ್ಪ ವ್ಯಂಗ್ಯ
ಏನಿದು ಪ್ರಕರಣ?
ಚಿಂಚೋಳಿ ತಾಲೂಕಿನ ಶಿರೋಳ್ಳಿಯ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಅ.19ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ನನ್ನ ಸಾವಿಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮತ್ತು ಕಾಂಗ್ರೆಸ್ ನಾಯಕರೇ ಕಾರಣ ಎಂದು ಕಾರ್ಯಕರ್ತರ ಹೇಳಿರುವ ಆಡಿಯೋ ಕ್ಲಿಪ್ ವೈರಲ್ ಆಗಿತ್ತು. ಹೀಗಾಗಿ ಬಿಜೆಪಿ ನಾಯಕರು ಪ್ರಕರಣವನ್ನು ಸಿಐಡಿಗೆ ನೀಡಬೇಕು ಅಂತ ಆಗ್ರಹಿಸಿದ್ದರು. ಅದೇ ರೀತಿ ಪ್ರಕರಣದಲ್ಲಿ ಸಚಿವರ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಡಾ.ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ವರದಿ: ಡಾ.ಜಿ.ಪರಮೇಶ್ವರ್
ಬರ ಪರಿಹಾರಕ್ಕಾಗಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ನಾವು ವರದಿಯನ್ನು ಸಲ್ಲಿಸಿದ್ದೇವೆ. ಮತ್ತೊಂದು ವರದಿ ಕೂಡ ರೆಡಿ ಆಗಿದೆ. 20-25 ತಾಲೂಕುಗಳನ್ನು ಬಿಟ್ಟರೆ ಉಳಿದೆಲ್ಲಾ ತಾಲೂಕುಗಳನ್ನು ಕೂಡ ಬರಪೀಡಿತ ಅಂತ ಘೋಷಣೆ ಮಾಡಿದ್ದೇವೆ. ಬೇಸಿಗೆ ಕಾಲದಲ್ಲಿ ಇನ್ನೂ ಹೆಚ್ಚು ಸಮಸ್ಯೆ ಆಗುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬರಗಾಲ ಎದುರಿಸಲು ಸರ್ಕಾರ ಹಣ ಮೀಸಲು ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಗೋಶಾಲೆಗಳನ್ನು ತೆರೆಯುವಂತೆ ಈಗಾಗಲೇ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದೆ. ಜಿಲ್ಲಾಧಿಕಾರಿಗಳ PD ಅಕೌಂಟ್‌ನಲ್ಲಿ 19 ಕೋಟಿ ರೂಪಾಯಿ ಇದೆ. ಇಡೀ ರಾಜ್ಯದಲ್ಲಿ 400-500 ಕೋಟಿ ಹಣ ಮೀಸಲು ಇಡಲಾಗಿದೆ ಎಮದು ತಿಳಿಸಿದರು.
ಇದನ್ನೂ ಓದಿ | DK Shivakumar : ಇನ್ನಷ್ಟು ಆಸ್ತಿ ಮಾಹಿತಿ ಮುಚ್ಚಿಟ್ಟರೇ ಡಿಕೆಶಿ; ಸಿಬಿಐ ಕೋರ್ಟ್‌ಗೆ ಹೇಳಿದ್ದೇನು?
ಕೊರಟಗೆರೆ ಹಾಗೂ ಮಧುಗಿರಿ ಕ್ಷೇತ್ರಗಳಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಪೊಲೀಸರು ಶಾಮೀಲು ಆರೋಪಕ್ಕೆ ಪ್ರತಿಕ್ರಿಯಿಸಿ, ತಹಸೀಲ್ದಾರ್‌ಗೆ ಈಗಾಗಲೇ ವಾರ್ನಿಂಗ್ ಕೊಟ್ಟಿದ್ದೇವೆ. ಮೊದಲಿಂದಲೂ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಗಣಿಗಾರಿಕೆ ನಡೆದುಕೊಂಡು ಬಂದಿದೆ. ಆದಷ್ಟು ಮರಳು ಗಣಿಗಾರಿಕೆಗೆ ಕಡಿವಾಣ ಹಾಕುತ್ತೇವೆ. ಜಯಮಂಗಲಿ ನದಿ ಪಾತ್ರದಲ್ಲಿ ಮರಳುಗಣಿಗಾರಿಕೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ತಿಳಿಸಿದರು.