ಬೆಂಗಳೂರು: ಒಂದು ಲೀಟರ್ ಬಾಟಲಿಗೆ ₹20 ಕೊಟ್ಟು ನೀರು ಕುಡಿಯುವ ಜನರು, ಅವರದ್ದೇ ಮನೆ ಟೆರೇಸ್ ಮೇಲೆ ಬೀಳುವ ಪರಿಶುದ್ಧ ಮಳೆ ನೀರನ್ನು ಸಂಗ್ರಹಿಸಿ ಬಳಕೆ ಮಾಡಲು ಮನಸ್ಸು ಮಾಡುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಬುಧವಾರ ಬೇಸರ ವ್ಯಕ್ತಪಡಿಸಿದ್ದಾರೆ.
ನಗರ ನೀರು ಸರಬರಾಜು ಸುಧಾರಣೆಗಳ ಅನುಭವಗಳು ಹಾಗೂ ಇವುಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವ ಕುರಿತ ಕಾರ್ಯಾಗಾರವನ್ನು ಉದ್ದೇಶಿಸಿ ಭಾಷಣ ಮಾಡಿದರು.
ನಮ್ಮ ರಾಜ್ಯ ಕರ್ನಾಟಕವು ನಗರೀಕರಣದ ಬೆಳವಣಿಗೆಯಲ್ಲಿ ಹಿಂದೆ ಬಿದ್ದಿಲ್ಲ. ಕರ್ನಾಟಕದ ನಗರ ಪ್ರದೇಶಗಳಲ್ಲಿ ಸ್ಥಾಪಿತವಾಗಿರುವ ವಾಣಿಜ್ಯ, ಉದ್ಯಮ ಕೈಗಾರಿಕೆಗಳು, ವಾಸಿಸುತ್ತಿರುವ ನಗರ ವಾಸಿಗಳಿಗೆ ನೀರು ಸರಬರಾಜು ಮಾಡುವುದೇ ಒಂದು ದೊಡ್ಡ ಸವಾಲಾಗಿತ್ತು. ಪ್ರತಿಯೊಬ್ಬ ನಿವಾಸಿಗೂ ನೀರನ್ನು ಒದಗಿಸುವುದು ಮೂಲಭೂತ ಸೌಕರ್ಯಗಳಲ್ಲಿ ಒಂದು ಎಂದು ತಿಳಿದು ಅಧಿಕಾರಕ್ಕೆ ಬಂದಂತಹ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿವೆ. ಕರ್ನಾಟಕ ರಾಜ್ಯದ ಹಲವಾರು ನಗರಗಳಲ್ಲಿ ನೀರಿನ ಬೇಡಿಕೆಯನ್ನು ಆಧರಿಸಿ ಸರ್ಕಾರ ಹಲವಾರು ನೀರು ಸರಬರಾಜು ಯೋಜನೆಗಳನ್ನು ಜಾರಿಗೆ ತಂದಿದೆ.
ಇದನ್ನೂ ಓದಿ | ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅನಂತಕುಮಾರ್ ಅವರ ಕೊಡುಗೆ ಅಪಾರ: CM ಬಸವರಾಜ ಬೊಮ್ಮಾಯಿ ಶ್ಲಾಘನೆ
2013ರಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯಲ್ಲಿ ನಿರಂತರ ನೀರು ಸರಬರಾಜು ಯೋಜನೆಯನ್ನು ಡಿ.ಬಿ.ಒ.ಟಿ. ಮಾದರಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆಯನ್ನು ಸರ್ಕಾರ ನೀಡಿರುತ್ತದೆ. ಕಾಮಗಾರಿ ಅನುಷ್ಠಾನದ ಅವಧಿ 5 ವರ್ಷವಾಗಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣೆ ಜವಾಬ್ದಾರಿ 7 ವರ್ಷಗಳಾಗಿರುತ್ತದೆ. ಇದನ್ನು ಗುತ್ತಿಗೆದಾರರೇ ನಿರ್ವಹಿಸಬೇಕಾಗಿರುತ್ತದೆ. ಅದನ್ನು ಹಸ್ತಾಂತರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ನಗರ ಪ್ರದೇಶಗಳು ದಿನೇ ದಿನೇ ಬೆಳೆಯುತ್ತಿವೆ. ಬಡಾವಣೆಗಳ ನಿರ್ಮಾಣಗಳು ಸಹ ಸಾಕಷ್ಟು ಹೆಚ್ಚಾಗಿವೆ. ಈ ಎಲ್ಲದಕ್ಕೂ ನೀರು ಪೂರೈಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ನದಿ ಮೂಲಗಳಿಂದ ನೀರನ್ನು ತಂದು ನಗರ ಪ್ರದೇಶಗಳಿಗೆ ಪೂರೈಸಲಾಗುತ್ತಿದೆ. ನೂರಾರು ಕಿಲೋಮೀಟರ್ ದೂರದಿಂದ ತಂದು ಪೂರೈಸುವ ಶ್ರಮದ ಬಗ್ಗೆ ಜನಕ್ಕೆ ಅರ್ಥವಾಗಬೇಕಿದೆ. ಮಳೆ ನೀರು ಕೋಯ್ಲು (ರೈನ್ ವಾಟರ್ ಹರ‍್ವೆಸ್ಟಿಂಗ್) ಮಾಡಬೇಕೆಂದು ಸರ್ಕಾರದ ಆದೇಶ ಇದ್ದರೂ ಮನೆ ಕಟ್ಟುವ ಬಹುತೇಕರು ಮಾಡುತ್ತಿಲ್ಲ. ನೀರು ಎಷ್ಟು ಅತ್ಯಮೂಲ್ಯ ಎನ್ನುವ ಜಲಜ್ಞಾನ ಇಲ್ಲದಿರುವುದರಿಂದ ನೀರಿನ ಸದ್ಬಳಕೆ, ಸಂಗ್ರಹಣೆ ಮತ್ತು ಮರುಬಳಕೆಗೆ ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸೆಲ್ಫಿ ತೆಗೆಯಲು ಹೋದ ಕಾಲೇಜು ವಿದ್ಯಾರ್ಥಿಗಳಿಬ್ಬರು ನೀರುಪಾಲು