ಕಾರವಾರ: ಪ್ರಕೃತಿಯ ಉಳಿವಿಗಾಗಿ ಯುವತಿಯೊಬ್ಬರು ಬೈಕ್ (Bike Jatha) ಮೇಲೆ ಏಕಾಂಗಿಯಾಗಿ ರಾಜ್ಯ ಸುತ್ತಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಲಗೋಡು ಮೂಲದ ಕುಂದಾಪುರ ನಿವಾಸಿ ಸಾಕ್ಷಿ ಹೆಗಡೆ ಈ ರೀತಿಯ ಸಾಹಸಕ್ಕೆ ಮುಂದಾಗಿರುವ ಯುವತಿ.
ಪುಷ್ಪಾ ಮತ್ತು ಶಿವರಾಮ ಹೆಗಡೆ ದಂಪತಿಯ 3ನೇ ಪುತ್ರಿಯಾಗಿರುವ ಸಾಕ್ಷಿ, ಕ್ಲೀನ್ ಕರ್ನಾಟಕ ಮತ್ತು ಗ್ರೀನ್ ಕರ್ನಾಟಕ ಧ್ಯೇಯದೊಂದಿಗೆ ಪ್ರಕೃತಿ ಉಳಿವಿಗಾಗಿ ಬೈಕ್ ಮೇಲೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಕುಂದಾಪುರದಿಂದ ಸುಮಾರು 6 ಸಾವಿರ ಕಿ.ಮೀ ದೂರದ ಕಾಶ್ಮೀರಕ್ಕೂ ಹೋಗಿ ಬಂದಿರುವ ಯುವತಿ, ಇದೀಗ ಕರ್ನಾಟಕದೆಲ್ಲಡೆ ಜಾಗೃತಿ ಮೂಡಿಸಲು ಅಣಿಯಾಗಿದ್ದಾರೆ.
ಇದನ್ನೂ ಓದಿ | Vistara ವಿಶ್ಲೇಷಣೆ | 8 ವರ್ಷದಲ್ಲಿ ಕರ್ನಾಟಕಕ್ಕೆ ಜನಸಂಖ್ಯೆ ಗಂಡಾಂತರ: ಮೋಹನದಾಸ್ ಪೈ ವರದಿಯಲ್ಲಿ ಬಹಿರಂಗ
ಕುಂದಾಪುರದ ಭಂಡಾರಕರ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಸಾಕ್ಷಿ, ಕುಂದಾಪುರದ ಮನೆಯಿಂದ ಹೊರಟು, ಇಂಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಪ್ರಯಾಣವನ್ನು ಮುಂದುವರಿಸಿದ್ದಾರೆ. ಅಕ್ಟೋಬರ್ 16 ರಂದು ಕುಂದಾಪುರದಿಂದ ಬೈಕ್ ಜಾಗೃತಿ ಪ್ರಾರಂಭಿಸಿದ್ದು, ಒಂದು ತಿಂಗಳು ರಾಜ್ಯದ 31 ಜಿಲ್ಲೆಗಳಲ್ಲಿ ಸಂಚರಿಸಲಿದ್ದಾರೆ. ನಂತರ ನವೆಂಬರ್ 16 ರಂದು ದಕ್ಷಿಣ ಕನ್ನಡವನ್ನು ತಲುಪಿ ನವೆಂಬರ್ 17 ರಂದು ಉಡುಪಿಗೆ ವಾಪಸಾಗಲಿದ್ದಾರೆ. ಒಂದು ತಿಂಗಳ ಕಾಲ 4 ಸಾವಿರ ಕಿಲೋ ಮೀಟರ್‌ಗಳ ಪಯಣದ ಉದ್ದೇಶ ಹೊಂದಿದ್ದಾರೆ.
ರಾಜ್ಯದ 31 ಜಿಲ್ಲೆಗಳಿಗೂ ಸಾಕ್ಷಿ ಒಬ್ಬಂಟಿಯಾಗೇ ಬೈಕ್‌ನಲ್ಲಿ ಸಂಚರಿಸಲಿದ್ದಾರೆ. ಕಲಿಕೆಯ ಜತೆ ಸಂಪಾದನೆಗಾಗಿ ಮನೆ ಸಮೀಪದ ವೈದ್ಯಕೀಯ ಕ್ಲಿನಿಕ್‌ನಲ್ಲಿ ಅರೆಕಾಲಿಕ ಕೆಲಸ ನಿರ್ವಹಿಸುತ್ತಿದ್ದಾರೆ. ಕ್ಲಿನಿಕ್‌ನಲ್ಲಿ ದೊರೆತ ಸಂಬಳದಲ್ಲಿ ಬೈಕ್ ಕೊಳ್ಳುವ ಕನಸು ಕಂಡಿದ್ದರು. ಹಾಗೇ ಸ್ವಲ್ಪ ಹಣ ಸಂಗ್ರಹಿಸಿ ಸಾಲ ಮಾಡಿ ಬೈಕ್ ಕೊಂಡರು. 125CC ಪಲ್ಸರ್ ಬೈಕ್‌ನಲ್ಲಿ ಕುಂದಾಪುರ ಪೇಟೆಗೆ ಆರಂಭದಲ್ಲಿ ಹೋಗುವಾಗ, ಏಕಕಾಲದಲ್ಲಿ ಎರಡೂ ಕಾಲು ನೆಲಕ್ಕೆ ತಾಗದೇ ಇರುವುದನ್ನು ನೋಡಿ ಇತರ ವಾಹನ ಸವಾರರು ತಮಾಷೆ ಮಾಡಿ, ಗೇಲಿ ಮಾಡಿದರೂ ತಲೆಕೆಡಿಸಿಕೊಳ್ಳದೇ ಹಠ ಹಿಡಿದು ಬೈಕ್‌ನಲ್ಲೇ ಸಾವಿರಾರು ಕಿ.ಮೀ. ಹೋಗಲು ಸಜ್ಜಾದರು.
12 ದಿನಗಳಲ್ಲಿ 6 ಸಾವಿರ ಕಿ.ಮೀ. ದೂರ ಒಂಟಿಯಾಗಿ ದೇಶದ ಹಲವೆಡೆ ಬೈಕ್ ಓಡಿಸಿದ್ದ ಸಾಕ್ಷಿ, ಈಗ ಮತ್ತೆ ಕರ್ನಾಟಕ ಸಂಚರಿಸಲು ಸಜ್ಜಾಗಿದ್ದಾರೆ. ಇಡಗುಂಜಿಯ ನಿವೃತ್ತ ಶಿಕ್ಷಕ ಗಣಪತಿ ಭಟ್ಟ ಮತ್ತು ಎಂ.ಆರ್.ಹೆಗಡೆ ಕೋಡ್ಸಣಿ, ಸಾಕ್ಷಿ ತಂದೆ ಶಿವರಾಮ ಹೆಗಡೆ ಇಡಗುಂಜಿಯಲ್ಲಿ ಪ್ರೋತ್ಸಾಹಿಸಿ ಬೀಳ್ಕೊಟ್ಟರು.
ಕುಂದಾಪುರದಿಂದ ಕಾಶ್ಮೀರದವರೆಗೆ 13 ದಿನದಲ್ಲಿ ತಲುಪಿದ್ದೆ. ಮಹಿಳಾ ಸಬಲಿಕರಣ ಉದ್ದೇಶದ ಜತೆಗೆ ಸ್ವಚ್ಛ ಕರ್ನಾಟಕ ಮತ್ತು ಗ್ರೀನ್ ಕರ್ನಾಟಕ ಎನ್ನುವ ಧ್ಯೇಯದೊಂದಿಗೆ ಹುಟ್ಟೂರಿನಿಂದ ಆರಂಭಿಸಿ ರಾಜ್ಯದ 31 ಜಿಲ್ಲೆಗಳಲ್ಲೂ ಸಂಚರಿಸಲಿದ್ದೇನೆ. ಪುಣ್ಯಕ್ಷೇತ್ರ ಇಡಗುಂಜಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಯಾಣ ಆರಂಭಿಸಿದ್ದೇನೆ.
| ಸಾಕ್ಷಿ ಹೆಗಡೆ, ಬೈಕ್‌ನಲ್ಲಿ ಜಾಗೃತಿ ಜಾಥಾ ಮಾಡುತ್ತಿರುವ ಯುವತಿ
ಇದನ್ನೂ ಓದಿ | Kantara Collection | 18 ದಿನದಲ್ಲಿ ₹150 ಕೋಟಿ ಕ್ಲಬ್ ಸೇರಿತಾ ಕಾಂತಾರ?