Site icon Vistara News

Climate Plan: ರಾಜ್ಯ ಸರ್ಕಾರದ ಹವಾಮಾನ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಒಪ್ಪಿಗೆ; ಏನಿದು ಯೋಜನೆ?

Climate Plan

ಬೆಂಗಳೂರು: ಕರ್ನಾಟಕ (karnataka) ಸರ್ಕಾರ (government) 2021ರಲ್ಲಿ ಸಿದ್ಧಪಡಿಸಲಾದ ಹವಾಮಾನ ಕ್ರಿಯಾ ಯೋಜನೆ (Climate Plan) ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿದೆ. ಈ ಬಾರಿ ಕರ್ನಾಟಕದಲ್ಲಿ ಅತ್ಯಂತ ಭೀಕರ ಬರಗಾಲ (worst droughts) ಎದುರಾಗಿದೆ. ಆದರೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ನಿರೀಕ್ಷೆ ಇದೆ. ಈ ನಡುವೆ ಇದೀಗ ಹವಾಮಾನ ಕ್ರಿಯಾ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಹವಾಮಾನ ಬದಲಾವಣೆ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ 2 ಅನ್ನು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MOEF & CC) ಏಪ್ರಿಲ್ 2021ರಲ್ಲಿ ಕಳುಹಿಸಲಾಗಿತ್ತು. ಮೂರು ವರ್ಷಗಳ ಅನಂತರ ಅದನ್ನು ಕಾರ್ಯಗತಗೊಳಿಸಲು ರಾಜ್ಯಕ್ಕೆ ಅನುಮೋದನೆ ನೀಡಲಾಗಿದೆ.

42 ವಿವಿಧ ಇಲಾಖೆಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ ಅಭಿವೃದ್ಧಿ ಆಯುಕ್ತರು, ಜೂನ್‌ನಲ್ಲಿ ಮಾದರಿ ನೀತಿ ಸಂಹಿತೆ ಹಿಂಪಡೆದ ಅನಂತರ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದರೊಂದಿಗೆ ಹವಾಮಾನ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಲಿದೆ ಎಂದು ತಿಳಿಸಿದ್ದರು. ಹವಾಮಾನ ಕ್ರಿಯಾ ಯೋಜನೆ ಕಾರ್ಯಕ್ರಮಕ್ಕೆ ನಿರ್ದಿಷ್ಟ ಯೋಜನೆಗಳು, ಕಾರ್ಯಕ್ಷಮತೆ ಸೂಚಕಗಳು ಮತ್ತು ಗುರಿಗಳನ್ನು ಸಿದ್ಧಪಡಿಸಲು ನಾವು ಎಲ್ಲಾ ಇಲಾಖೆಗಳಿಗೆ ತಿಳಿಸಿದ್ದೇವೆ. ಮಾದರಿ ನೀತಿ ಸಂಹಿತೆ ಹಿಂತೆಗೆದುಕೊಂಡ ತಕ್ಷಣ ನಾವು ಸಚಿವ ಸಂಪುಟದ ಮುಂದೆ ಸಲ್ಲಿಕೆ ಮಾಡಲು ಯೋಜಿಸಿದ್ದೇವೆ ಎಂದು ಅಭಿವೃದ್ಧಿ ಆಯುಕ್ತ ಡಾ. ಶಾಲಿನಿ ರಜನೀಶ್ ಹೇಳಿದ್ದಾರೆ.

ಶೀಘ್ರ ಜಾರಿಯಾಗಬೇಕು

ಹವಾಮಾನ ವೈಪರೀತ್ಯದ ಪರಿಣಾಮ ರಾಜ್ಯದ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಕ್ರಿಯಾ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎನ್ನುತ್ತಾರೆ ತಜ್ಞರು. ಪರಿಸರ ಇಲಾಖೆಯ ಅಧಿಕಾರಿಯ ಪ್ರಕಾರ, ಕ್ರಿಯಾ ಯೋಜನೆಯಲ್ಲಿ ಸೂಚಿಸಲಾದ ಕ್ರಮಗಳನ್ನು ಸಂಯೋಜಿಸಲು ಮತ್ತು ತಮ್ಮ ಗುರಿಗಳನ್ನು ಸಲ್ಲಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ ಕಾರ್ಯನಿರ್ವಹಣೆಯೊಂದಿಗೆ ಬೇಸ್‌ಲೈನ್‌ನಂತೆ ಕಾರ್ಯನಿರ್ವಹಿಸುವ ಪಟ್ಟಿಯನ್ನು ಸಿದ್ಧಪಡಿಸಬೇಕು. ಉದಾಹರಣೆಗೆ, ಅರಣ್ಯ ಇಲಾಖೆಯು ತಾನು ಯೋಜಿಸಿರುವ ಅರಣ್ಯೀಕರಣದ ಪ್ರಮಾಣ ಮತ್ತು ಐದು ವರ್ಷಗಳಲ್ಲಿ ಗುರಿಯನ್ನು ಸಲ್ಲಿಸಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಏನೆಲ್ಲಾ ಒಳಗೊಂಡಿರುತ್ತದೆ?

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಸಿದ್ಧಪಡಿಸಿದ ಕ್ರಿಯಾ ಯೋಜನೆಯು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಹಲವಾರು ಮಧ್ಯಸ್ಥಿಕೆಗಳು ಮತ್ತು ಮೌಲ್ಯಮಾಪನ ತಂತ್ರಗಳನ್ನು ಸೂಚಿಸುತ್ತದೆ. ಕೃಷಿ, ತೋಟಗಾರಿಕೆ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು 10 ಇತರ ಕ್ಷೇತ್ರಗಳಲ್ಲಿ ಕ್ರಮಗಳನ್ನು ಜಾರಿಗೆ ತರಲು 2025 ಮತ್ತು 2030 ರ ನಡುವೆ ರಾಜ್ಯಕ್ಕೆ 52,827 ಕೋಟಿ ರೂಪಾಯಿ ಅಗತ್ಯವಿದೆ ಎಂದು ಯೋಜನೆ ಸೂಚಿಸುತ್ತದೆ.

ಹಣಕಾಸು ಅಂದಾಜು ಹೆಚ್ಚಳ ಸಾಧ್ಯತೆ

ಅರಣ್ಯೀಕರಣದಿಂದ ನವೀಕರಿಸಬಹುದಾದ ಶಕ್ತಿಯ ಬಳಕೆಯವರೆಗೆ, ಯೋಜನೆಯು ಪ್ರತಿಯೊಂದು ಇಲಾಖೆಗೆ ಕ್ರಮಗಳನ್ನು ಸೂಚಿಸುತ್ತದೆ.

ಹಣಕಾಸಿನ ಅಂದಾಜುಗಳನ್ನು 2021ರಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಈಗ ಹೆಚ್ಚಾಗಿರಬಹುದು. ಕ್ರಿಯಾ ಯೋಜನೆಯು ಹಣವನ್ನು ಸಂಗ್ರಹಿಸಲು ಹಲವಾರು ಹಣಕಾಸು ವಿಧಾನಗಳನ್ನು ರೂಪಿಸುತ್ತದೆ. ನಾವು ಇಲಾಖೆ-ನಿರ್ದಿಷ್ಟ ಯೋಜನೆಗಳನ್ನು ಹೊಂದಬಹುದು ಎಂದು ಕ್ರಿಯಾ ಯೋಜನೆ ತಯಾರಿಕೆಯ ಭಾಗವಾಗಿದ್ದ ಪ್ರೊ. ಕೃಷ್ಣ ರಾಜ್ ಹೇಳಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.


ಖಾಸಗಿ ಹೂಡಿಕೆಗಳನ್ನು ಆಕರ್ಷಿಸುವುದರಿಂದ ಹಿಡಿದು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಗಳ ಉತ್ತಮ ಬಳಕೆಗೆ, ಯೋಜನೆಯು ವಿವಿಧ ಹಣಕಾಸು ವಿಧಾನಗಳನ್ನು ವಿವರಿಸುತ್ತದೆ.ಬರ ಮತ್ತು ಪ್ರವಾಹಗಳ ಆವರ್ತನ ಹೆಚ್ಚಾಗಿದೆ. ತಾಪಮಾನ ಮತ್ತು ಮಳೆಯ ಮಾದರಿಗಳು ಅನಿರೀಕ್ಷಿತವಾಗಿವೆ. ಇವುಗಳು ಅನೇಕ ಕ್ಷೇತ್ರಗಳ ಮೇಲೆ, ವಿಶೇಷವಾಗಿ ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಕೃಷಿಯ ಮೇಲೆ ಪರಿಣಾಮ ಬೀರಿದರೆ, ಅದು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಕ್ರಮವನ್ನು ಕಾರ್ಯಗತಗೊಳಿಸುವುದು ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಬರ ಪರಿಸ್ಥಿತಿ ಮತ್ತು ನೀರಿನ ಕೊರತೆಯಿಂದಾಗಿ ಅಧಿಕಾರಿಗಳು ಮತ್ತು ನಾಗರಿಕರಲ್ಲಿ ಜಾಗೃತಿ ಹೆಚ್ಚಾಗಿದೆ ಮತ್ತು ಆದ್ದರಿಂದ ಈ ಕ್ರಮಕ್ಕೆ ಇದು ಸರಿಯಾದ ಸಮಯ ಎಂದು ಪರಿಸರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Politics: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ? ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಹತ್ವದ ಸುಳಿವು!

ಏನು ಕ್ರಮ ?

ಕೃಷಿಗೆ ಶುಷ್ಕ- ಋತುವಿಗೆ ಸಂಬಂಧಿಸಿದ ವಿವಿಧ ಬೆಳೆ ಯೋಜನೆ, ನಿಖರವಾದ ನೀರಾವರಿ ತಂತ್ರಜ್ಞಾನ ಅಳವಡಿಕೆ. ಅರಣ್ಯಕ್ಕೆ ಹವಾಮಾನಕ್ಕೆ ಪೂರಕವಾದ ಅರಣ್ಯೀಕರಣ ಕಾರ್ಯಕ್ರಮಗಳು, ಜಾನುವಾರುಗಳ ಸಮಗ್ರ ರೋಗಗಾಲ ಮೇಲೆ ಕಣ್ಗಾವಲು ಮತ್ತು ತಕ್ಷಣ ಪ್ರತಿಕ್ರಿಯೆ ನೀಡಲು ಕ್ರಮ. ಅಂತರ್ಜಲ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು. ಶಕ್ತಿ ಮೂಲಗಳಲ್ಲಿ ನವೀಕರಿಸಬಹುದಾದ ವಸ್ತುಗಳ ಮೇಲೆ ಹೆಚ್ಚಿನ ಗಮನ ಹರಿಸುವುದು ಮೊದಲಾದವುಗಳನ್ನು ಹವಾಮಾನ ಕ್ರಿಯಾ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.

Exit mobile version