Site icon Vistara News

ಗಣಿ ನಾಡಿನಲ್ಲಿ ಕ್ಲಾಕ್ ಟವರ್ ರಾಜಕೀಯ: ಬಿಜೆಪಿಗೆ ಪ್ರತಿಷ್ಠೆ, ಕಾಂಗ್ರೆಸ್‌ಗೆ ಪ್ರತಿಭಟನೆಯ ಅಸ್ತ್ರ

ಕ್ಲಾಕ್ ಟವರ್

| ಶಶಿಧರ್ ಮೇಟಿ, ಬಳ್ಳಾರಿ
ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪ ಸಾಮಾನ್ಯ. ಇಲ್ಲಿಯ ಗಡಿಯಾರದ ಗೋಪುರ ವಿಚಾರದಲ್ಲಿಯೂ ಇದೇ ಆಗುತ್ತಿದೆ. ಎರಡು ಪಕ್ಷಗಳು ಪರಸ್ಪರ ಕೆಸರೆರಚಾಟ ತೊಡಗಿವೆ. ಅಭಿವೃದ್ಧಿ ಹೆಸರಿನಲ್ಲಿ ಪ್ರತಿಷ್ಠೆ, ಚುನಾವಣೆ ಹೆಸರಿನಲ್ಲಿ ಪ್ರತಿಭಟನೆ, ಇದಕ್ಕೆ ಗಡಿಯಾರದ ಗೋಪುರ ಸೇತುವೆಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕ್ಲಾಕ್‌ ಟವರ್‌ ನಿರ್ಮಾಣವನ್ನು ಬಿಜೆಪಿ ಪ್ರತಿಷ್ಠೆಯಾಗಿಸಿಕೊಂಡಿದ್ದರೆ ಕಾಂಗ್ರೆಸ್ ಪ್ರತಿಭಟನೆ ಅಸ್ತ್ರ ವಾಗಿಸಿಕೊಂಡಿದೆ.

ಇದು ಟವರ್ ಕ್ಲಾಕ್ ರಾಜಕೀಯ
1964ರಲ್ಲಿ ನಿರ್ಮಿಸಿರುವ ಗಡಿಯಾರದ ಗೋಪುರವು 2008ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾತ್ರೋ ರಾತ್ರಿ ಅನಧಿಕೃತವಾಗಿ ತೆರವುಗೊಳಿಸಿದ್ದು ಇಡೀ ರಾಜ್ಯದಲ್ಲಿಯೇ ಸದ್ದು ಮಾಡಿತ್ತು. ವಿಧಾನ ಸಭೆಯಲ್ಲಿ ಪ್ರತಿಧ್ವನಿಸಿ, ಹೋರಾಟಗಳು ನಡೆಯಿತು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ, ಕಳೆದ 13 ವರ್ಷದಿಂದ ಆರೋಪಿಗಳು ಪತ್ತೆಯಾಗಿಲ್ಲ. ನಂತರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಣ್ಣದಾದ ಟವರ್ ಕ್ಲಾಕ್ ಗಡಿಗಿ ಚೆನ್ನಪ್ಪ ಸರ್ಕಲ್‌ನಲ್ಲಿ ತಲೆಎತ್ತಿತು. ಈಗ ಸಚಿವ ಬಿ.ಶ್ರೀರಾಮುಲು ಅವರು 7 ಕೋಟಿ ರೂ.ವೆಚ್ಚದಲ್ಲಿ ಲೆಬನಾನ್ ಮಾದರಿಯ ಟವರ್ ಕ್ಲಾಕ್ ನಿರ್ಮಾಣಕ್ಕೆ ಹಳೆಯ (ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಮಿಸಿದ) ಟವರ್ ಕ್ಲಾಕ್ ತೆರವು ಗೊಳಿಸಿರುವುದು ವಿವಾದಕ್ಕೆ ಕಿಡಿಯಾಗಿದೆ.

ಇದನ್ನೂ ಓದಿ | ಬಾಕಿ ಬಿಲ್‌ ಕುರಿತ ದಾಖಲೆಗಳು ನನ್ನ ಬಳಿ ಇವೆ, ಕಾಲ ಬಂದಾಗ ಬಿಚ್ಚಿಡುವೆ: ಸಚಿವ ಸಿ.ಸಿ. ಪಾಟೀಲ್‌

ಸಚಿವರ ಸಮ್ಮುಖದಲ್ಲಿಯೇ ತೆರವು
2008ರಲ್ಲಿ ಅನಧಿಕೃತವಾಗಿ ಹಳೆಯ ಟವರ್ ಕ್ಲಾಕ್ ತೆರವುಗೊಳಿಸಿದ್ದು ಇಡೀ ರಾಜ್ಯ ರಾಜಕೀಯ ವಲಯದಲ್ಲಿ ಸದ್ದು ಮಾಡಿ, ರಿಪಬ್ಲಿಕ್ ಆಫ್ ಬಳ್ಳಾರಿಗೆ ಇದು ಸಾಕ್ಷಿ ಎಂದು ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತುತ್ತಾಗಿತ್ತು. ಇಂತಹ ಪ್ರಸಂಗ ಎದುರಾಗದಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸಮ್ಮುಖದಲ್ಲಿಯೇ ಟವರ್ ಕ್ಲಾಕ್‌ ಅನ್ನು ತೆರವುಗೊಳಿಸಿದ್ದಾರೆ. ಇದಕ್ಕೆ ಎನ್ಒಸಿ ಪಡೆಯಲಾಗಿದೆ, ಆದರೆ ಕಾಂಗ್ರೆಸ್‌ ಈ ವಿಚಾರದಲ್ಲಿ ಡಬಲ್‌ ಗೇಮ್‌ ಆಡುತ್ತಿದೆ ಎಂದು ಬಿಜೆಪಿ ಶಾಸಕರ ಆರೋಪವಾಗಿದೆ.

ಬಿಜೆಪಿಗೆ ಸೆಡ್ಡು ಹೊಡೆಯುವ ಕಾಂಗ್ರೆಸ್ ಪ್ರಯತ್ನ
ಟವರ್‌ ಕ್ಲಾಕ್ ತೆರವುಗೊಳಿಸಿದ ಮೇಲೆ ರಾತ್ರೋರಾತ್ರಿ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರು ಮಾಹಿತಿ ಇಲ್ಲದೆ ತೆರವುಗೊಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇದಕ್ಕೆ ಪುಷ್ಟಿ ನೀಡುವಂತೆ ಬೆಳಗ್ಗೆ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಮತ್ತು ಪಾಲಿಕೆಯ ಮೇಯರ್, ಕಾಂಗ್ರೆಸ್ ಸದಸ್ಯರು ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಪಾಲಿಕೆಯ ಮೇಯರ್ ಗಮನಕ್ಕಿಲ್ಲದೆ ತೆರವುಗೊಳಿಸಿದ್ದಾರೆ. ಅವರ ಹಕ್ಕನ್ನು ಜಿಲ್ಲಾಡಳಿತ ಚ್ಯುತಿ ತಂದಿದೆ ಎಂದು ಆರೋಪಿಸುವ ಮೂಲಕ ಟವರ್‌ ಕ್ಲಾಕ್‌ ತೆರವು ಪ್ರಕರಣವು ಕಾಂಗ್ರೆಸ್‌ಗೆ ರಾಜಕೀಯ ದಾಳವಾಯಿತು. ಇನ್ನು ಮಾಜಿ ಕೆಪಿಸಿಸಿ ಅಧ್ಯಕ್ಷ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅವರು ಮಾಹಿತಿ ಇಲ್ಲದೆ ಟವರ್ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ, ಪಾಲಿಕೆ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರ ಒಡಗೂಡಿ ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ವೃತ್ತದಲ್ಲಿ ರಾಜಕೀಯ ದಾಳ ಉರುಳಿಸಿದ ಪಕ್ಷಗಳು
ನಿತ್ಯವು ಹಲವು ಹೋರಾಟಗಳಿಗೆ ಸಾಕ್ಷಿಯಾಗುತ್ತಿದ್ದ ಗಡಿಗಿ ಚೆನ್ನಪ್ಪ ವೃತ್ತವು, ಇದೀಗ ತನ್ನಲ್ಲಿರುವ ಗಡಿಯಾರ ಗೋಪುರ ತೆರವಿನ ವಿಚಾರಕ್ಕೆ ಅಕ್ಷರಶಃ ರಾಜಕೀಯ ಶಕ್ತಿ ಪ್ರದರ್ಶನದ ವೇದಿಕೆಯಾಗಿದ್ದು ಮಾತ್ರ ಸತ್ಯ. ರಾತ್ರಿ ಶ್ರೀರಾಮುಲು ಬಂದು ಟವರ್ ಕ್ಲಾಕ್ ತೆರವುಗೊಳಿಸಿದರೆ, ಬೆಳಗ್ಗೆ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಬಂದು ತೆರವು ಗೊಳಿಸಿರುವ ಪ್ರದೇಶದಲ್ಲಿಯೇ ಪ್ರತಿಭಟನೆ ಮಾಡಿದರು. ನಂತರದಲ್ಲಿ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಬಂದು ಎನ್ಒಸಿ ಪಡೆಯಲಾಗಿದೆ, ಕಾಂಗ್ರೆಸ್ ಡಬಲ್‌ಗೇಮ್‌ ಆಡುತ್ತಿದೆ ಎಂದು ಕಾಂಗ್ರೆಸ್ ಪ್ರತಿಭಟನೆಗೆ ಟಾಂಗ್ ನೀಡುವ ಪ್ರಯತ್ನ ಮಾಡಿದರು. ಇದಾದ ಸ್ವಲ್ಪ ಹೊತ್ತಿನ ನಂತರ ಅಲ್ಲಂ ವೀರಭದ್ರಪ್ಪನವರು ಡಿಸಿಗೆ ಮನವಿ ಕೊಡುತ್ತಾರೆ, ಹೀಗೆ ಗಡಿಗಿ ಚೆನ್ನಪ್ಪ ವೃತ್ತವು ಬುಧವಾರ ವಿವಾದ ವಸ್ತುವಾಗಿ ರಾಜ್ಯದ ಗಮನ ಸೆಳೆಯಿತು.

ಇಷ್ಟೆಲ್ಲಾ ಬೆಳವಣಿಗೆಯು ಮಾತ್ರ ರಾಜಕೀಯ ಕಾರಣಕ್ಕೆ ಎನ್ನುವ ಸತ್ಯ ಜನರು ಬಲ್ಲರು! ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಅಸ್ತ್ರ ಪ್ರಯೋಗಿಸಿದರೆ, ಪಾಲಿಕೆಯ ಅಧಿಕಾರ ಅಸ್ತ್ರ ಇಟ್ಟುಕೊಂಡು ಕಾಂಗ್ರೆಸ್ ಪ್ರತಿಭಟನೆ ಮಾಡಿದೆ. ಆದರೆ, ಬಳ್ಳಾರಿ ಜನರು ಮಾತ್ರ ಇಬ್ಬರ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಯಾವುದೇ ಪಕ್ಷವು ಮುಂದಿನ ಅಧಿಕಾರದ ದೃಷ್ಟಿಕೋನಕ್ಕಿಂತ ಆತ್ಮಸಾಕ್ಷಿಯಿಂದ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಟ್ಟರೆ ಮಾತ್ರ ಮತದಾರರ ಮನ ಗೆಲ್ಲಲು ಸಾಧ್ಯ ಎಂಬುವುದು ಯಾವುದೇ ಪಕ್ಷ ಒಲವು ತೋರದ, ಕಾರ್ಯಕರ್ತರಲ್ಲದ ಮತದಾರರ ಅಭಿಪ್ರಾಯವಾಗಿದೆ.

ಇದನ್ನೂ ಓದಿ | 40 ಪರ್ಸೆಂಟ್ ಕಮಿಷನ್‌ ಸಾಕ್ಷ್ಯವಿದ್ದರೆ ಬಹಿರಂಗಪಡಿಸಲಿ : ಈಶ್ವರಪ್ಪ ಸೇರಿ ಬಿಜೆಪಿ ನಾಯಕರ ಕಿಡಿ

Exit mobile version