ಕೊಡಗು: ಕಳೆದ 20 ವರ್ಷಗಳಿಂದ ನಾಪೋಕ್ಲುವಿನಲ್ಲಿ ಆರ್.ಎಚ್. ಬಟ್ಟೆ ಮಳಿಗೆ ನಡೆಸುತ್ತಿದ್ದ ಎಚ್.ಕೆ. ಸಂದೀಪ್ (೪೦) ಎಂಬ ಉದ್ಯಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಪೋಕ್ಲು ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಸಂದೀಪ್ ಅವರು ಅಲ್ಲೇ ಸಾವಿಗೆ ಶರಣಾಗಿದ್ದಾರೆ.
ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ಹಡ್ಲಹಳ್ಳಿ ಗ್ರಾಮದ ನಿವಾಸಿಯಾದ ಸಂದೀಪ್ ಅವರು ನಾಪೋಕ್ಲುವಿನಲ್ಲಿ ಬಟ್ಟೆ ಅಂಗಡಿ ಮಾಡಿಕೊಂಡಿದ್ದರು. ಇತ್ತೀಚೆಗೆ ವ್ಯಾಪಾರದಲ್ಲಿ ನಷ್ಟ ಹೊಂದಿದ್ದರು, ಅಂಗಡಿಯನ್ನು ಮುಚ್ಚಿದ್ದರು. ಅದಾದ ಬಳಿಕ ಅವರು ಬದುಕು ಸಾಗಿಸಲು ಕಷ್ಟಪಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.
ಶುಕ್ರವಾರ ಬೆಳಗ್ಗೆ 7.30ಕ್ಕೆ ಸ್ನೇಹಿತ ಸಂದೇಶ್ ಎಂಬುವರಿಗೆ ಕರೆ ಮಾಡಿ 9 ಗಂಟೆಗೆ ಮನೆಗೆ ಬರಲು ತಿಳಿಸಿದ್ದರು ಸಂದೀಪ್. ಆದರೆ, ಬಂದು ನೋಡಿದಾಗ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದರು. ಸಂದೇಶ್ ಅವರು ಮಾಹಿತಿ ನೀಡಿದ ಬಳಿಕ ನಾಪೋಕ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶೀಲ ಶಂಕಿಸಿ ಪತ್ನಿಯ ಕೊಲೆ ಮಾಡಿದ ಪತಿ
ರಾಯಚೂರು: ಪತ್ನಿಯ ನಡತೆಯನ್ನು ಮದುವೆಯಾದಂದಿನಿಂದಲೂ ಶಂಕಿಸುತ್ತಿದ್ದ ಕಿರಾತಕ ಪತಿಯೊಬ್ಬ ಪತ್ನಿಯನ್ನು ಕೊಲೆಗೈದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಾದಪೂರು ಗ್ರಾಮದಲ್ಲಿ ನಡೆದಿದೆ.
ಮಮತಾ @ ಪವಿತ್ರಾ (22) ಕೊಲೆಯಾದ ಮಹಿಳೆ. ಪತ್ನಿಯ ಶೀಲ ಶಂಕಿಸಿ ಕೊಂದ ಪಾಪಿ ಪತಿ ನಾಗೇಶ್. 3-4 ವರ್ಷಗಳ ಹಿಂದಷ್ಟೇ ಈ ಜೋಡಿ ಮದುವೆಯಾಗಿತ್ತು. ಮದುವೆಯಾದ ಬಳಿಕ ಹೆಂಡತಿಯ ಬಗ್ಗೆ ನಿತ್ಯ ಅನುಮಾನ ಪಡುತ್ತಿದ್ದ ನಾಗೇಶ್, ಅನೈತಿಕ ಸಂಪರ್ಕ ಹೊಂದಿದ್ದೀಯಾ ಎಂದು ನಿತ್ಯ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಮತಾ ತವರು ಮನೆಗೆ ಮಾಹಿತಿ ಮುಟ್ಟಿಸಿದ್ದಳು. ಮನೆಯವರು ಕರೆದು ಬುದ್ಧಿವಾದ ಹೇಳಿದ್ದರೂ ನಾಗೇಶ ಕಿರುಕುಳ ಮುಂದುವರಿಸಿದ್ದ.
ನಿನ್ನೆ ಬ್ರಿಕ್ಸ್ ಕಂಪನಿಯ ಕೆಲಸ ಹೋಗಿದ್ದ ಮಮತಾಳನ್ನು ನಾಗೇಶ ಕೆಲಸದಿಂದ ಅರ್ಧಕ್ಕೆ ಕರೆತಂದಿದ್ದ. ಬಳಿಕ ಮನಬಂದಂತೆ ಮಮತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗೋಡೆಗೆ ತಲೆಯನ್ನು ಜಜ್ಜಿ ಕೊಂದುಹಾಕಿದ್ದಾನೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾತಕಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ : Mass Suicide : ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ತಂದೆ-ತಾಯಿ ಜತೆ ವಿವಾಹಿತ ಮಗಳ ದುರಂತ ಅಂತ್ಯ