ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ (CLT Exam) ಉತ್ತೀರ್ಣರಾಗಿರಲೇಬೇಕೆಂದು ಸರ್ಕಾರ ನಿಗದಿಪಡಿಸಿದ್ದ ಗಡುವನ್ನು ಮತ್ತೆ ವಿಸ್ತರಿಸಲಾಗಿದೆ.
ಕಳೆದ ಮೇ 5ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಸರ್ಕಾರಿ ನೌಕರರು ದಿನಾಂಕ 31-12-2022ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ಉತ್ತೀರ್ಣರಾಗದೇ ಇದ್ದಲ್ಲಿ ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿಗಳಿಸಲು ಅನರ್ಹರಾಗುತ್ತಾರೆ ಎಂದು ತಿಳಿಸಲಾಗಿತ್ತು. ಈ ಸಂಬಂಧ ಜ.13 ರಂದು ಅಧಿಸೂಚನೆ ಹೊರಡಿಸಿರುವ ಸರ್ಕಾರ ಮಾರ್ಚ್ 31, 2023ರ ವರೆಗೆ ಗಡುವನ್ನು ಮತ್ತೆ ವಿಸ್ತರಿಸಿದೆ.
ಈ ನಡುವೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಪರೀಕ್ಷೆಯ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದೆ. ನಮ್ಮ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ. ಶೀಘ್ರದಲ್ಲಿಯೇ ಅಧಿಕೃತ ಸರ್ಕಾರಿ ಆದೇಶ ಹೊರ ಬೀಳಲಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಗಡುವು ವಿಸ್ತರಿಸಿದ ಸರ್ಕಾರಿ ಆದೇಶ ಇಲ್ಲಿದೆ
ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು, 2012 ರಲ್ಲಿ “ಈ ನಿಯಮದ ಪ್ರಾರಂಭದ ದಿನಾಂಕದಿಂದ ಹತ್ತು ವರ್ಷಗಳ ಅವಧಿಯೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿಗೆ ಅನರ್ಹರಾಗುತ್ತಾರೆʼʼ ಎಂದು ತಿಳಿಸಲಾಗಿತ್ತು. 2014ರ ಡಿಸೆಂಬರ್‌ನಲ್ಲಿಯೇ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ (ಡಿಪಿಎಆರ್ 104 ಇ-ಆಡಳಿತ 2014) ಹೊರಡಿಸಿತ್ತು. ಇದಕ್ಕೆ ಕಳೆದ ಮೇನಲ್ಲಿ ತಿದ್ದುಪಡಿ ತಂದು, “ಹತ್ತು ವರ್ಷಗಳ ಅವಧಿಯೊಳಗೆʼʼ ಎಂಬುದಕ್ಕೆ ಬದಲಾಗಿ, “ಯಾವುದೇ ಸರ್ಕಾರಿ ನೌಕರನು ದಿನಾಂಕ:31-12-2022ರೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿಗಳಿಸಲು ಅನರ್ಹನಾಗತಕ್ಕದ್ದಲ್ಲʼʼ ಎಂದು ಹೇಳಲಾಗಿತ್ತು. ಈಗ ತಿದ್ದುಪಡಿ ಅಧಿಸೂಚನೆ ಹೊರಡಿಸಿ, ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.
ರಾಜ್ಯ ಸರ್ಕಾರದ 5.40 ಲಕ್ಷ ನೌಕರರ ಪೈಕಿ ಸುಮಾರು 3.50 ಲಕ್ಷ ನೌಕರರು ಈ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಿದೆ. ಈ ಪರೀಕ್ಷೆ ಬರೆಯಲು 2.55 ಲಕ್ಷಕ್ಕೂ ಹೆಚ್ಚು ನೌಕರರು ನೋಂದಣಿ ಮಾಡಿಕೊಂಡಿದ್ದರೂ 1.5 ಲಕ್ಷ ನೌಕರರು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆಯಾಗಿ ಸುಮಾರು ನಾಲ್ಕು ಲಕ್ಷ ನೌಕರರು ಇನ್ನೂ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕಿದೆ.
ಏನಿದು ಪರೀಕ್ಷೆ?
ಕಿಯೋನಿಕ್ಸ್ ಸಂಸ್ಥೆಯು ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ ಆನ್ ಲೈನ್ ನಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸುತ್ತಿದೆ. ಇದಕ್ಕಾಗಿ ವಿಶೇಷವಾದ ವೆಬ್‌ಸೈಟ್ ಪ್ರಾರಂಭಿಸಲಾಗಿದೆ. ನೌಕರರು ಇದರಲ್ಲಿ ಮೊದಲಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಯಶಸ್ವಿಯಾಗಿ ಹೆಸರು ನೊಂದಾಯಿಸಿಕೊಂಡವರು, ಮುಂದೆ ಪರೀಕ್ಷೆಯ ಸ್ಲಾಟ್ ಅನ್ನು ಬುಕ್ ಮಾಡಿಕೊಂಡು ನಿಗದಿತ ದಿನದಂದು ಈ ಪರೀಕ್ಷೆ ಬರೆಯಬಹುದಾಗಿರುತ್ತದೆ. ಆನ್‌ಲೈನ್‌ನಲ್ಲಿ ಮಾತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ವೆಬ್ ವಿಳಾಸ ಇಂತಿದೆ: https://clt.karnataka.gov.in
ಮೊದಲ ಬಾರಿಗೆ ಉಚಿತವಾಗಿ ಈ ಪರೀಕ್ಷೆ ಬರೆಯಬಹುದಾಗಿರುತ್ತದೆ. ಒಂದು ವೇಳೆ ಇದರಲ್ಲಿ ಉತ್ತೀರ್ಣರಾಗದೇ ಇದ್ದಲ್ಲಿ, ಮುಂದೆ ಪರೀಕ್ಷೆ ಬರೆಯಲು 359 ರೂ. ಹಾಗೂ ಬ್ಯಾಂಕ್ ಸೇವಾ ಶುಲ್ಕವನ್ನು ನೌಕರರು ಪಾವತಿಸ ಬೇಕಾಗಿರುತ್ತದೆ. ಶುಲ್ಕ ಪಾವತಿಸಿದ ದಿನಾಂಕದಿಂದ 90 ದಿನಗಳೊಳಗೆ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
ಕಷ್ಟವಿರುತ್ತದೆ ಈ ಪರೀಕ್ಷೆ
ಬಹುತೇಕ ಸರ್ಕಾರಿ ನೌಕರರು ಈ ಪರೀಕ್ಷೆ ಬರೆಯಲು ಆಸಕ್ತಿ ತೋರದೇ ಇರುವುದಕ್ಕೆ “ಈ ಪರೀಕ್ಷೆ ಕಷ್ಟʼʼ ಎಂಬ ಪ್ರಚಾರವೇ ಕಾರಣವಾಗಿದೆ. ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಇ-ಆಡಳಿತ ಜಾರಿಗೆ ಬಂದಿದ್ದರೂ, ಕಂಪ್ಯೂಟರ್ ಸಾಕ್ಷರತೆ ವಿಷಯಲ್ಲಿ ನೌಕರರು ಹಿಂದೆ ಬಿದ್ದಿದ್ದಾರೆ. ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ನೌಕರರೇ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಹೀಗೆ ಪರೀಕ್ಷೆ ಬರೆದವರು, ಪರೀಕ್ಷೆ ಕಷ್ಟವಿತ್ತು ಎಂದು ಹೇಳುತ್ತಿರುವುದರಿಂದ ಪರೀಕ್ಷೆ ಬರೆಯಲು ಬೇರೆಯವರು ಉತ್ಸಾಹ ತೋರುತ್ತಿಲ್ಲ ಎನ್ನಲಾಗಿದೆ.
ಬಹುತೇಕರಿಗೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವುದು ಗೊತ್ತಿದ್ದರೂ, ಈ ಪರೀಕ್ಷೆಯಲ್ಲಿ ಥಿಯರಿಯ ಪ್ರಶ್ನೆಗಳಿರುವುದರಿಂದ, ತಾಂತ್ರಿಕ ಪದಗಳನ್ನು ಬಳಸಿರುವುದರಿಂದ ಉತ್ತರಿಸಲು ಕಷ್ಟವಾಗುತ್ತಿದೆ. 80 ಅಂಕಗಳಿಗೆ ಈ ಪರೀಕ್ಷೆ ನಡೆಯುತ್ತಿದ್ದು, ಉತ್ತರಿಸಲು ಒಂದೂವರೆ ಗಂಟೆ ಅಂದರೆ 90 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಶೇ.50 ರಷ್ಟು ಅಂಕ ಪಡೆದವರನ್ನು ಈ ಪರೀಕ್ಷೆಯಲ್ಲಿ ಉತ್ತೀರ್ಣರೆಂದು ಪರಿಗಣಿಸಲಾಗುತ್ತದೆ. ಟೆಕ್ನಿಕಲ್ ಕೋರ್ಸ್ ಮಾಡಿದವರು, ಕಂಪ್ಯೂಟರ್ ಕಲಿತವರು ಮಾತ್ರ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಉಳಿದವರಿಗೆ ಕಬ್ಬಿಣದ ಕಡಲೆಯಾಗಿದೆ.
ಸರ್ಕಾರಿ ನೌಕರರಾಗಿರುವ ಚಾಲಕರಿಗೆ, ಪೊಲೀಸ್ ಕಾನ್ಸ್‌ಟೇಬಲ್, ನರ್ಸ್, ಫಾರೆಸ್ಟ್ ಗಾರ್ಡ್, ಫಾರೆಸ್ಟ್ ವಾಚರ್ಸ್, ಅಬಕಾರಿ ರಕ್ಷಕರಿಗೆ ಮತ್ತು “ಡಿʼʼ ದರ್ಜೆಯ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. 45 ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಬೇಕೆಂದೂ ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಈ ಕುರಿತು ಇನ್ನಷ್ಟೇ ತೀರ್ಮಾನ ತೆಗೆದುಕೊಳ್ಳಬೇಕಿದೆ.
ಇದನ್ನೂ ಓದಿ | 86,500 ಸರ್ಕಾರಿ ನೌಕರರು ಕಂಪ್ಯೂಟರ್ ಪರೀಕ್ಷೆಯಲ್ಲಿ ಫೇಲ್ !