Site icon Vistara News

Insurance scheme | ಅಂಗವಿಕಲರ ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

CM Basavaraja Bommai announces special insurance scheme for disabled health

ಬೆಂಗಳೂರು: ಅಂಗವಿಕಲರ ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ (Insurance scheme) ರೂಪಿಸಿ, 5 ಲಕ್ಷ ರೂಪಾಯಿವರೆಗೆ ಅವರಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವ ಯೋಜನೆಯನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ಶನಿವಾರ (ಡಿ.೩) ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ -2022ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕಲಚೇತನರು ಧೈರ್ಯದಿಂದ, ಯಶಸ್ವಿಯಾಗಿ ಬದುಕು ನಡೆಸಲು ಸರ್ಕಾರ ಎಲ್ಲ ಸಹಕಾರವನ್ನು ನೀಡಲಿದೆ. ಸರ್ಕಾರ ನಿರ್ಮಿಸುವ ಮನೆಗಳಲ್ಲಿ ಅಂಗವಿಕಲರಿಗೆ ನೀಡುವಲ್ಲಿ ಶೇ. 3ರಷ್ಟು ಮೀಸಲಾತಿಯನ್ನು ನೀಡಲಾಗುವುದು. ಬುದ್ಧಿಮಾಂದ್ಯ ಮಕ್ಕಳಿಗೆ ಶೆಲ್ಟರ್ಡ್ ವರ್ಕ್‌ಶಾಪ್ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದರು.

ಅಂಗವಿಕಲರಿಗೆ ಮಾರ್ಚ್ 31ರೊಳಗೆ 2 ಸಾವಿರ ಟ್ರೈ ಸೈಕಲ್
ಸರ್ಕಾರದ ವತಿಯಿಂದ ವಿಕಲಚೇತನರಿಗೆ ಪವರ್ಡ್ ಟ್ರೈಸೈಕಲ್ ನೀಡಲಾಗುತ್ತಿದೆ. ಈ ವರ್ಷ ಈ ಯೋಜನೆಗೆ 25 ಕೋಟಿ ರೂ.ಗಳನ್ನು ನೀಡಿ 2 ಸಾವಿರ ಟ್ರೈ ಸೈಕಲ್‌ಗಳನ್ನು ಮಾರ್ಚ್ 31ರೊಳಗೆ ನೀಡಲು ತೀರ್ಮಾನಿಸಿರುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ | Leopard attack | ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ

ಮುಂದಿನ ಬಜೆಟ್‌ನಲ್ಲಿ ವಿಕಲಚೇತನರ ವಿದ್ಯಾಭ್ಯಾಸಕ್ಕಾಗಿ ವಿಶೇಷ ಅನುದಾನ
ವಸತಿ ಶಾಲೆಗಳಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ನೀಡಲಾಗುತ್ತಿದ್ದ 6800 ರೂ.ಗಳನ್ನು 10200 ರೂ.ಗಳಿಗೆ ಹೆಚ್ಚಿಸಲಾಗಿದೆ. ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆಗಳಲ್ಲಿ ನೀಡಲಾಗುತ್ತಿದ್ದ 6000 ರೂ.ಗಳನ್ನು 9000 ರೂಪಾಯಿಗೆ ಹೆಚ್ಚಿಸಿ ನೀಡಲಾಗುತ್ತಿದೆ. ಅಂಧ, ಕಿವುಡುತನ ಮಕ್ಕಳ ವಸತಿ ಶಾಲೆಗಳಲ್ಲಿರುವವರಿಗೆ 9300 ರೂ.ಗಳನ್ನು, ವಸತಿರಹಿತ ಶಾಲೆಗಳ ಅಂಧ, ಕಿವುಡು ಮಕ್ಕಳಿಗೆ 7800 ರೂ. ಹಾಗೂ ಹಗಲುಸೇವೆ ಯೋಗಕ್ಷೇಮ ಕೇಂದ್ರಗಳಿಗೆ 15,000 ರೂ. ಮತ್ತು ವೃದ್ಧಾಶ್ರಮ ಕೇಂದ್ರಗಳ ನಿರ್ವಹಣೆಗೆ 12 ಲಕ್ಷ ರೂಪಾಯಿಯನ್ನು ನೀಡಲಾಗುತ್ತಿದೆ. ಮುಖ್ಯಮಂತ್ರಿಯಾದ ತಕ್ಷಣ ವಿಕಲಚೇತನರ ಮಾಸಾಶನವನ್ನು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸವಲತ್ತುಗಳನ್ನು ಹೆಚ್ಚಿಸಲಾಗುವುದು. ಆ್ಯಸಿಡ್ ದಾಳಿಯಿಂದ ಬಳಲುವ ಹೆಣ್ಣು ಮಕ್ಕಳಿಗೆ 3000 ರೂಪಾಯಿಯಿಂದ 10,000 ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ. ವಿಕಲಚೇತನರ ವಿದ್ಯಾಭ್ಯಾಸಕ್ಕಾಗಿ ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಮೀಸಲಿರಿಸಲಾಗುವುದು ಎಂದರು.

ದಿವ್ಯಾಂಗ ಮಕ್ಕಳ ಸಹಾಯಕ್ಕೆ ಬನ್ನಿ
ಎಲ್ಲರೂ ಪರೋಪಕಾರದ ಗುಣವನ್ನು ಬೆಳೆಸಿಕೊಳ್ಳಬೇಕು. ಸಶಕ್ತರಾಗಿರುವವರು ದಿವ್ಯಾಂಗ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸಹಾಯ ಮಾಡಬೇಕು. ರಾಜ್ಯದಲ್ಲಿ ಸುಮಾರು 40 ರಿಂದ 50 ಲಕ್ಷ ದಿವ್ಯಾಂಗ ಮಕ್ಕಳಿದ್ದು, ಅವರ ಬೆಳವಣಿಗೆಗೆ ಏಳು ಕೋಟಿ ಕನ್ನಡಿಗರು ಸಹಾಯ ಮಾಡುವ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು. ಅವರು ದೇವರ ಮಕ್ಕಳಾಗಿದ್ದು, ಅವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆಯನ್ನು ಮೆರೆಯಬೇಕು. ದಿವ್ಯಾಂಗ ಮಕ್ಕಳನ್ನು ಬೆಳೆಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ಕನ್ನಡ ಜನತೆಗೆ ಕರೆ ನೀಡಿದರು.

ಇದನ್ನೂ ಓದಿ | Development Programme | ಗಡಿ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳು, ಶಾಲೆಗಳ ಅಭಿವೃದ್ಧಿಗೆ ಕ್ರಮ: ಸಿಎಂ ಬೊಮ್ಮಾಯಿ

Exit mobile version